ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್

Bomb Threat to Bengaluru Schools: ಹಾಸನದ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ, ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಸಂದೇಶ ಬಂದ ಬೆನ್ನಲ್ಲೇ, ಸ್ಥಳೀಯ ಪೊಲೀಸರು ಶಾಲೆಗಳಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಯಾವ ಪ್ರದೇಶದ ಶಾಲೆಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Jun 16, 2025 | 2:16 PM

ಬೆಂಗಳೂರು, ಜೂನ್ 16: ಬೆಂಗಳೂರಿನ (Bengaluru) ಕುಂಬಳಗೋಡು, ಕಲಾಸಿಪಾಳ್ಯ ಮತ್ತು ರಾಜರಾಜೇಶ್ವರಿ ನಗರದಲ್ಲಿ ಇರುವ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಸಂದೇಶ ಬಂದಿದೆ. ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಸ್ಥಳೀಯ ಪೋಲಿಸರು (Bangalore Police) ತಕ್ಷಣವೇ ಶಾಲೆಗಳಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೈದರಾಬಾದ್​ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಬಾಂಬ್ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಹೈದರಾಬಾದ್​ನಲ್ಲಿ ನಡೆದ ಯಾವ ಅತ್ಯಾಚಾರ ಪ್ರಕರಣ ಸಂಬಂಧ ದುಷ್ಕರ್ಮಿಗಳು ಈ ಬೆದರಿಕೆ ಹಾಕಿದ್ದಾರೆ? ಕರ್ನಾಟಕಕ್ಕೂ ಅದಕ್ಕೂ ಸಂಬಂಧವೇನು ಎನ್ನುವ ಪ್ರಶ್ನೆಗಳು ಈಗ ಉದ್ಭವಿಸಿವೆ.

ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಫೋಟ ಮಾಡಿ ಕಟ್ಟಡ ಧ್ವಂಸ ಮಾಡುವುದಾಗಿ ಹಾಸನದ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್‌ ಶಾಲೆಗೆ ಭಾನುವಾರ ರಾತ್ರಿ ಬೆದರಿಕೆ ಸಂದೇಶ ಬಂದಿತ್ತು. ಅದರಂತೆ, ಶಾಲೆಯ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಾಗೂ ಶ್ವಾನ ದಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ಇದನ್ನೂ ಓದಿ
ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ಮಹಿಳೆಯ ಬೆತ್ತಲೆ ವಿಡಿಯೋ ಬ್ಲ್ಯಾಕ್​ಮೇಲ್, ಅತ್ಯಾಚಾರ ಯತ್ನ: ಅರ್ಚಕ ಬಂಧನ
ನಕಲಿ ಕ್ಲಿನಿಕ್​ಗಳ ಹಾವಳಿ: ನಕಲಿ ವೈದ್ಯನ ಚಿಕಿತ್ಸೆಯಿಂದ 6 ತಿಂಗಳ ಮಗು ಸಾವು
ಲಾಲ್ ಬಾಗ್ ಸುತ್ತೋದು ಇನ್ನಷ್ಟು ಸುಲಭ! ಸಿಗಲಿದೆ ಇ ಸ್ಕೂಟರ್ ಸೌಲಭ್ಯ

ತಿಂಗಳ ಅವಧಿಯಲ್ಲಿ ನಾಲ್ಕನೇ ಬಾಂಬ್ ಬೆದರಿಕೆ

ಕರ್ನಾಟಕದಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವರ್ಷ ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆ ಹೋಟೆಲ್​​ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಹುಸಿ ಬೆದರಿಕೆ ಸಂದೇಶಗಳು ಹೆಚ್ಚಾಗಿವೆ. ಅದರಲ್ಲಿಯೂ ಸರಿಸುಮಾರು ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಬಾಂಬ್ ಬೆದರಿಕೆ ಪ್ರಕರಣ ಆಗಿದೆ.

ಇದನ್ನೂ ಓದಿ: ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ಬೆಂಗಳೂರು ವಾರಾಣಸಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬೆದರಿಕೆ ಸಂದೇಶ ಏಪ್ರಿಲ್ 27 ರಂದು ಬಂದಿತ್ತು. ಅದಾದ ಎರಡು ದಿನಗಳ ನಂತರ, ಅಂದರೆ ಏಪ್ರಿಲ್ 29 ರಂದು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ಆಚಾರ್ಯ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪ್ರಾಂಶುಪಾಲರಿಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಇದೀಗ ಹಾಸನ ಮತ್ತು ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Mon, 16 June 25