ಅಕ್ರಮವಾಗಿ BPL ಕಾರ್ಡ್ ಪಡೆದವರಿಗೆ ಶಾಕ್: ನೀವೂ ಲಿಸ್ಟ್ನಲ್ಲಿದ್ದೀರಾ ಪರೀಕ್ಷಿಸಿಕೊಳ್ಳಿ
ರಾಜ್ಯ ಸರ್ಕಾರವು ಅಕ್ರಮ ಬಿಪಿಎಲ್ ಕಾರ್ಡ್‌ಗಳ ರದ್ದತಿಗೆ ಮುಂದಾಗಿದೆ. ಸಿಬಿಡಿಟಿ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಬಡ ಕುಟುಂಬಗಳು ತಮಗೆ ಪಡಿತರ ನಿರಾಕರಣೆ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಮತ್ತು ಅರ್ಹತೆಯ ಮರು ಪರಿಶೀಲನೆಗೆ ಒತ್ತಾಯ ಕೇಳಿಬಂದಿದೆ.

ಬೆಂಗಳೂರು, ನವೆಂಬರ್ 24: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, Central Board of Direct Taxation ಮಾಹಿತಿ ಆಧಾರದ ಮೇಲೆ ರಾಜಧಾನಿ ಬೆಂಗಳೂರೊಂದರಲ್ಲೇ ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಆಹಾರ ಇಲಾಖೆಗೆ ಕಳೆದ ತಿಂಗಳು ದೊರೆತಿರುವ ಟ್ಯಾಕ್ಸ್ ರಿಪೋರ್ಟ್ ಆಧಾರದಲ್ಲಿ, ತೆರಿಗೆ ಕಟ್ಟುತ್ತಿದ್ದರೂ ಪಡೆದಿರುವ ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆಯಾಗಲಿವೆ.
ಆಹಾರ ಇಲಾಖೆಯ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿಯೇ 13,329 ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದು, ಅವನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಈ ಹಿನ್ನಲೆ ರಾಜಾಜಿನಗರದ ಆಹಾರ ಇಲಾಖೆ ಮುಂದೆ ಜನರು ಜಮಾಯಿಸಿದ್ದಾರೆ. ಕಳೆದ ತಿಂಗಳು ರೇಷನ್ ಸಿಕ್ಕಿತ್ತು, ಆದ್ರೆ ಈ ತಿಂಗಳು ನಮಗೆ ರೇಷನ್ ನೀಡಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಮಹಿಳೆಯೋರ್ವರು, ನಾವು ಟ್ಯಾಕ್ಸ್ ಕಟ್ಟುತ್ತಿಲ್ಲ, ಮಗಳು ಕೆಲಸ ಮಾಡುತ್ತಿದ್ದಳು. ಆದರೆ ಈಗ ಅವಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಹೀಗಿದ್ದರೂ ನಮಗೆ ರೇಷನ್ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಹಚ್ಚೋದು ಹೇಗೆ, ವಿಧಾನ ಏನು?
BPL ಕಾರ್ಡ್ಗೆ ಇರುವ ಮಾನದಂಡವೇನು?
2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ, ಬಿಪಿಎಲ್ ಕಾರ್ಡ್ ಪಡೆಯಲು ಹಲವು ನಿಬಂಧನೆಗಳನ್ನು ಹೇರಲಾಗಿದೆ. ಸರ್ಕಾರಿ ನೌಕರಿಯಲ್ಲಿರಬಾರದು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು, ನಾಲ್ಕು ಚಕ್ರದ ವಾಹನ ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು ಎಂದು ತಿಳಿಸಲಾಗಿದೆ.
ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿರೋ ರಾಜ್ಯ ಸರ್ಕಾರ ಈಗಾಗಲೇ ಪಡಿತರ ಅಂಗಡಿಗಳ ಮುಂದೆ ಈ ಬಗ್ಗೆ ನೋಟಿಸ್ ಹಾಕಿ, ದಾಖಲೆಗಳನ್ನ ನೀಡಲು ಸೂಚನೆ ನೀಡಿದೆ. ಇದರಿಂದ ಬಡಕುಟುಂಬಗಳು ಕಂಗಲಾಗಿದ್ದು, ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿಯೇ 14 ಸಾವಿರಕ್ಕೂ ಅಧಿಕ ಕಾರ್ಡ್ ರದ್ದು ಮಾಡಲು ಆದೇಶ ಮಾಡಿರೋದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜಿಲ್ಲೆಯಲ್ಲಿರುವ 2 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್‌ಗಳ ಈ ಪೈಕಿ 14,771 ಅನರ್ಹ ಪಡಿತರ ಚೀಟಿಗಳನ್ನ ಅಧಿಕಾರಿಗಳು ಗುರುತಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:48 pm, Mon, 24 November 25



