ಬೆಂಗಳೂರು: ಮುಂಬೈ ಕರ್ನಾಟಕ ಪ್ರದೇಶಕ್ಕೆ ‘ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ. ಇಷ್ಟು ದಿನ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳನ್ನು ಇನ್ನು ಮುಂದೆ ‘ಕಿತ್ತೂರು ಕರ್ನಾಟಕ’ ಎಂದು ಕರೆಯಲಾಗುವುದು. ಈ ಏಳೂ ಜಿಲ್ಲೆಗಳಿಗೆ ‘ಕಿತ್ತೂರು ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ವಿವರ ನೀಡಿದ ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳ ಮಾಹಿತಿ ನೀಡಿದರು.
ನದಿ ಮರಳಿಗೆ ದರ ನಿಗದಿ
ಒಂದು ಮೆಟ್ರಿಕ್ ಟನ್ ನದಿ ಮರಳಿಗೆ ₹ 700 ದರ ನಿಗದಿಗೆ ಹಾಗೂ ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮತ್ತು ಮಾರಾಟಕ್ಕೂ ಅವಕಾಶ ಸಿಗುವಂತೆ ಮಾಡಲು ಸ್ಟಾಕ್ ಯಾರ್ಡ್ ಮಾಡಲು ಸರ್ಕಾರ ನಿರ್ಧರಿಸಿದೆ. ಮರಳು ಖರೀದಿಗೆ ಆನ್ಲೈನ್ನಲ್ಲಿಯೂ ಇನ್ನು ಮುಂದೆ ಬೇಡಿಕೆ ಸಲ್ಲಿಸಬಹುದು. ಮರಳು ನೀತಿಯ ಉಪಖನಿಜ ರಿಯಾಯ್ತಿ ನಿಯಮಗಳಿಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಳಸುವ ಪ್ರತಿ ಟನ್ ಮರಳಿಗೆ ₹ 300, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಗೆ ₹ 700 ದರ ನಿಗದಿಪಡಿಸಲಾಗಿದೆ. ನದಿಗಳಲ್ಲಿ ಯಾವುದೇ ಯಂತ್ರಗಳನ್ನು ಬಳಸದೇ ಮರಳು ತೆಗೆಯಲು, ಬಡವರಿಗೆ ರಿಯಾಯ್ತಿ ದರದಲ್ಲಿ ಮರಳು ಒದಗಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿದರು.
ಮೇಕೆದಾಟು ನೀತಿಗೆ ಸಂಬಂಧಿಸಿದಂತೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮುಂದಿನ ವಾರ ಈ ಕುರಿತು ಚರ್ಚಿಸಲು ಮತ್ತೊಂದು ಸಭೆ ಕರೆಯಲಾಗುವುದು. ಇನ್ನೂ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು. ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪುರಸ್ಕಾರಕ್ಕೆ ಶಿಫಾರಸು ಮಾಡುವ ವಿಚಾರವೂ ಇಂದು ಚರ್ಚೆಯಾಗಲಿಲ್ಲ ಎಂದರು.
ಹಾಲು ಒಕ್ಕೂಟ ವಿಂಗಡನೆ
ಧಾರವಾಡ ಹಾಲು ಒಕ್ಕೂಟವನ್ನು ವಿಂಗಡಿಸಿ ಹಾವೇರಿಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಣ ತೆಗೆದುಕೊಂಡಿದೆ. ಇದೇ ಮಾದರಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನೂ ವಿಂಗಡಿಸಿ, ಪ್ರತ್ಯೇಕ ಒಕ್ಕೂಟ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಹೊಸಪೇಟೆ-ಬಳ್ಳಾರಿ ರಸ್ತೆಗೆ ₹ 30 ಕೋಟಿ
ಹೊಸಪೇಟೆ-ಬಳ್ಳಾರಿ ಮಾರ್ಗದ ರಸ್ತೆ ಅಭಿವೃದ್ಧಿಗೆ ₹ 30 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದ್ದು, ಎಚ್ಎಲ್ಸಿ ಕಾಲುವೆಯಿಂದ ಇಂಗಳಗಿ ಕ್ರಾಸ್‌ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಳ್ಳಾರಿ (ದಕ್ಷಿಣ) ಮುಂಡರಗಿ ಬಡಾವಣೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ₹ 12.75 ಕೋಟಿಗಳ ವೆಚ್ಚದ ಕಾಮಗಾರಿಗೂ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಈ ಎರಡು ಯೋಜನೆಗಳಿಗೆ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಕ್ರಿಯಾ ಯೋಜನೆ ಹಣ ಬಳಸುವ ಸಾಧ್ಯತೆಯಿದೆ.
ನೇಕಾರರ ಹಾಗೂ ಗಿರಿಜನ ಉಪ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್ಎಂಇ) ಘಟಕಗಳ ಸ್ಥಾಪನೆಗೆ ₹ 374.16 ಕೋಟಿ ಸಹಾಯಧನ ಒದಗಿಸುವ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ಮಾಡಲು ಅನುಮೋದನೆ ನೀಡಲಾಗಿದೆ.
ಬೆಳಗಾವಿಯಲ್ಲಿ ಅಧಿವೇಶನ
ಬೆಳಗಾವಿಯಲ್ಲೇ ಪ್ರಸಕ್ತ ಸಾಲಿನ ಅಧಿವೇಶನ ನಡೆಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಂಪುಟ ಸಭೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
₹ 50 ಕೋಟಿಗೂ ಹೆಚ್ಚಿನ ಮೌಲ್ಯದ ಟೆಂಡರ್ಗಳ ಪೂರ್ವ ಪರಿಶೀಲನೆಗೆ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ. ಟೆಂಡರ್ ಮೊತ್ತ ಹೆಚ್ಚಳಕ್ಕೆ (ಎಸ್ಕಲೇಷನ್) ಕಡಿವಾಣ ಹಾಕಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಪರಿಣಿತರ ಸಮಿತಿ ರಚಿಸಲಾಗುವುದು ಎಂದು ಮಾಹಿತಿ ನೀಡಿದರು. ಅಗ್ನಿಶಾಮಕ ತುರ್ತು ಸೇವೆ ಇಲಾಖೆಗೆ ಯೋಜನೆ ರೂಪಿಸಿದ್ದು, ಕೆ ಸೇಫ್-2 ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಉದದೇಶಕ್ಕಾಗಿ ರೂಪಿಸಿರುವ ₹ 374 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಮಂಡ್ಯ ಜಿಲ್ಲೆ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಕೆ.ಆರ್.ಪೇಟೆ ತಾಲ್ಲೂಕಿಗೆ ಸೇರಿದ 11 ಕೆರೆಗಳನ್ನು ತುಂಬಿಸುವ ಕಾಮಗಾರಿಯ (ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ-ಹಂತ 2) ₹ 22.5 ಕೋಟಿ ಮೊತ್ತದ ಯೋಜನಾ ವರದಿಗೆ ಸರ್ಕಾರ ಅನುಮೋದನೆ ನೀಡಿದೆ. ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಲೂರು-ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯ ₹ 15.66 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಗೂ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ತುಟ್ಟಿಭತ್ಯೆ ನೀಡಲು ಸಚಿವ ಸಂಪುಟ ಒಪ್ಪಿಗೆ
ಇದನ್ನೂ ಓದಿ: ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ? ದೆಹಲಿಯಲ್ಲೇ ಬೀಡುಬಿಟ್ಟ ರಮೇಶ್ ಜಾರಕಿಹೊಳಿ
Published On - 3:20 pm, Mon, 8 November 21