ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ? ದೆಹಲಿಯಲ್ಲೇ ಬೀಡುಬಿಟ್ಟ ರಮೇಶ್ ಜಾರಕಿಹೊಳಿ
Ramesh Jarkiholi: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲೂ ಪಕ್ಷ ಗೆಲುವಿಗೆ ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಿದ್ರೆ ಅನುಕೂಲವಾಗ್ತೆಂದು ಸಚಿವ ಸ್ಥಾನಕ್ಕಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಲಾಬಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ: ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಆಗುವ ಬಗ್ಗೆ ಸುಳಿವು ಲಭಿಸಿದೆ. ಈ ಸುಳಿವು ಸಿಗುತ್ತಿದ್ದಂತೆ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಈ ಸಲ ಶತಾಯಗತಾಯ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಜಾರಕಿಹೊಳಿ ಯೋಜನೆ ರೂಪಿಸಿಕೊಂಡಿದ್ದಾರೆ. ಕಳೆದ 3 ದಿನದಿಂದ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಇದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ. ಕೊಟ್ಟ ಮಾತಿನಂತೆ ಮತ್ತೆ ಸಚಿವ ಸ್ಥಾನವನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಹೆಚ್ಚು ಮತ ಬಂದಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತ ತಂದಿದ್ದೇನೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಗೆಲುವಿಗೆ ಪ್ರಯತ್ನ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲೂ ಪಕ್ಷ ಗೆಲುವಿಗೆ ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಿದ್ರೆ ಅನುಕೂಲವಾಗ್ತೆಂದು ಲಾಬಿ ಮಾಡಿದ್ದಾರೆ. ಸಚಿವ ಸ್ಥಾನಕ್ಕಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಲಾಬಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಚಿಂತನೆ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವನ್ನೇ ಪ್ರಮುಖ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ರಮೇಶ್‌ಗೆ ಸಚಿವ ಸ್ಥಾನ ನೀಡಿದರೆ ವಿರೋಧಿಸಲು ಪ್ಲ್ಯಾನ್ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ಪ್ರಕರಣದ ತನಿಖೆ ಬಗ್ಗೆ ಪ್ರಶ್ನಿಸಲು ಹಾಗೂ ಸಚಿವ ಸ್ಥಾನ ನೀಡಿದರೆ ಪ್ರಬಲವಾಗಿ ವಿರೋಧಿಸುವುದಕ್ಕೆ ಕಾಂಗ್ರೆಸ್ ಪಕ್ಷ ಚಿಂತಿಸಿದೆ. ಬೈಎಲೆಕ್ಷನ್ ಬಳಿಕ ಈ ವಿಚಾರ ಕೈಗೆತ್ತಿಕೊಳ್ಳಲು ಯೋಜನೆ ಹಾಕಲಾಗಿದೆ.
ಸಿಡಿ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು ಮುಂದಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಪ್ರಶ್ನಿಸಿ ಕಾನೂನಾತ್ಮಕ, ರಾಜಕೀಯ ಹೋರಾಟ ಮಾಡುವುದಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿದೆ ಎಂದು ತಿಳಿದುಬಂದಿದೆ. ತನಿಖೆ ನಡೆಸುತ್ತಿರುವ ಪೊಲೀಸರ ಕಾರ್ಯವೈಖರಿ, ತನಿಖಾ ವಿಧಾನವನ್ನು ಪ್ರಶ್ನಿಸಲು ಕೈ ನಾಯಕರು ನಿರ್ಧಾರ ಮಾಡಿದ್ದಾರೆ. ಕೆಪಿಸಿಸಿ ಕಾನೂನು ಘಟಕ, ಮಾಧ್ಯಮ ವಿಭಾಗಕ್ಕೆ ಈ ಸಂಬಂಧ ಸಿದ್ಧತೆ ಮಾಡಿಕೊಳ್ಳಲು ಡಿ.ಕೆ. ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ. ಅಗತ್ಯಬಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟ ರೂಪಿಸುವಂತೆಯೂ ಶಿವಕುಮಾರ್ ಹೇಳಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಇದನ್ನೂ ಓದಿ: ಕಲ್ಲಿದ್ದಲು, ಕೊರೊನಾ ಲಸಿಕೆ ಪೂರೈಸಲು ಮನವಿ; ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ನಲ್ಲಿ ಎರಡು ಬಣ, ಒಳಜಗಳದಿಂದ ಬಿಜೆಪಿ ಲಾಭ: ಸತೀಶ್ ಜಾರಕಿಹೊಳಿ ಒಪ್ಪಿಗೆ