ನಿಂತಿದ್ದ ಬಿಎಂಟಿಸಿ ಬಸ್​ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು: ಬಸ್ ಚಾಲಕ ಪ್ರಯಾಣಿಕರನ್ನ ರಕ್ಷಿಸಿದ್ದೇ ರೋಚಕ

ರಾಜಧಾನಿ ಬೆಂಗಳೂರಿನಲ್ಲಿವತ್ತು ದೊಡ್ಡ ಅನಾಹುತ ತಪ್ಪಿದೆ. ಒಂದು ಕ್ಷಣ ಯಾಮಾರಿದ್ರೂ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿದೆ. ನಿಂತಿದ್ದ ಬಸ್​ಗೆ ಹಿಂದಿನಿಂದ ಕಾರು ಗುದ್ದಿದ್ದು ಬೆಂಕಿ ಆವರಿಸಿತ್ತು. ಬಸ್​ ಚಾಲಕನ ಜಾಣ್ಮೆಯಿಂದ ಬಸ್​ ಹಾಗೂ ಪ್ರಯಾಣಿಕರು ಪಾರಾಗಿದ್ದಾರೆ.

Follow us
| Updated By: ಆಯೇಷಾ ಬಾನು

Updated on: Dec 04, 2023 | 12:49 PM

ಬೆಂಗಳೂರು, ಡಿ.04: ನಿಂತಿದ್ದ ಬಿಎಂಟಿಸಿ ಬಸ್​ಗೆ (BMTC Bus) ಕಾರ್ (I20 Car) ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡಿದ್ದು ಕಾರು ಹೊತ್ತಿ ಉರಿದ ಘಟನೆ ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ನಡೆದಿದೆ. ನಿಂತಿದ್ದ ಬಿಎಂಟಿಸಿ ಬಸ್​ಗೆ ವೇಗವಾಗಿ ಬಂದ I20 ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ನಡುರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡಿದ್ದು (Fire Accident) ಕಾರು ಸುಟ್ಟು ಕರಕಲಾಗಿದೆ. ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಇನ್ನು ಕಾರು ಬಸ್​ಗೆ ಡಿಕ್ಕಿ ಹೊಡೆದು ಬೆಂಕಿ ತಗುಲಿದ್ದು ಕಾರು ಸಂಪೂರ್ಣ ಸುಟ್ಟು ಹೋಗಿದೆ. ಬಸ್​ನ ಹಿಂದಿನ ಭಾಗ ಸ್ವಲ್ಪ ಬೆಂಕಿಗಾಹುತಿಯಾಗಿದೆ. ವೇಗವಾಗಿ ಕಾರ್ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಕಾರು ಚಾಲಕನಿಗೆ ಮೂಗಿನ ಬಳಿ ಕೊಂಚ ಗಾಯಗಳಾಗಿವೆ. ಉಳಿದಂತೆ ಬಸ್ ನಲ್ಲಿದ್ದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಸಂಚರಿಸುವ ಬನಶಂಕರಿ ಡಿಪೋನ 26ರ ಮಾರ್ಗದ 401NY ಬಸ್​ ಸಂಖ್ಯೆ F4968ರ ಬಸ್ ಇದಾಗಿದ್ದು ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಚಾಲಕ ಗೌರೀಶ್​ ಬಿ, ನಿರ್ವಾಹಕ ಗಿರಿಧರ್​​ ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದ್ರಲೇಔಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ನಿಲ್ಲಿಸಿದ್ದ ವೇಳೆ ಕಾರು​ ವೇಗವಾಗಿ ಬಂದು ಬಸ್​​ಗೆ ಗುದ್ದಿದೆ.

ಇದನ್ನೂ ಓದಿ: ಶಿವಮೊಗ್ಗ: ಚಲಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಬೆಂಕಿಗಾಹುತಿ

ಬಿಎಂಟಿಸಿ ಚಾಲಕ ಮಾಡಿದ ಆ ಕೆಲಸಕ್ಕೆ ಎಲ್ಲರ ಮೆಚ್ಚುಗೆ

ಇನ್ನು ಬಿಎಂಟಿಸಿ ಬಸ್​ ಚಾಲಕ ಪ್ರಯಾಣಿಕರ ರಕ್ಷಣೆ ಮಾಡುವುದರ ಜೊತೆಗೆ ಬಿಎಂಟಿಸಿ ಬಸ್ ರಕ್ಷಣೆ ಸಹ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಂಕಿ ಹೊತ್ತಿದ್ದ ಕಾರು ಹಾಗೂ ಬಸ್​ ಪರಸ್ಪರ ಸಿಕ್ಕಿ ಹಾಕಿಕೊಂಡಿದ್ದು ಅದನ್ನು ಬಿಡಿಸಲು ಬಸ್ ಚಾಲಕ ಪ್ರಯತ್ನ ಮಾಡಿದ್ದಾರೆ. ನೂರು ಮೀಟರ್ ಬಸ್ ಚಲಾಯಿಸಿ ಕಾರ್​ನಿಂದ ಬಸ್ ಅನ್ನು ಕಾಪಾಡಿದ್ದಾರೆ. ಹೀಗಾಗಿ ಬಸ್​ ಬೆಂಕಿಗಾಹುತಿಯಾಗುವುದು ತಪ್ಪಿದೆ. ಇಲ್ಲವಾದಲ್ಲಿ ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ಕೂಡ ಸುಟ್ಟು ಬಸ್ಮವಾಗುತ್ತಿತ್ತು. ಹೊತ್ತಿ ಉರಿಯುತ್ತಿರುವ ಬೆಂಕಿಯ ನಡುವೆಯೂ ಬಸ್ ಏರಿ ಬಸ್ ಚಲಾಯಿಸಿದ್ದಾರೆ. ಸತತ ಒಂದೂವರೆ ನಿಮಿಷಗಳ ಹರಸಾಹಸದ ಬಳಿಕ ಡಿವೈಡರ್ ಹಾರಿಸಿ ಮತ್ತೊಂದು ರಸ್ತೆಗೆ ಚಲಾಯಿಸುವ ಮುಖಾಂತರ ಬಸನ್ನು ಕಾರಿನಿಂದ ಬಿಡಿಸುವಲ್ಲಿ ಚಾಲಕ ಗೌರೀಶ್ ಅವರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ