ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ರೇಡ್ ಮಾಡುವ ಬೆದರಿಕೆ: ಹಣಕ್ಕೆ ಬೇಡಿಕೆ ಇಟ್ಟ ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸ್ರು
ತಾವು ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿ ಬಳಿಯೇ ಹಣದ ಬೇಡಿಕೆ ಇಟ್ಟು ಅವರನ್ನು ಬೆದರಿಸಿದ್ದು ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ ಪಾಟೀಲ್ ಅವರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು, ಅ.11: ತಾವು ಲೋಕಾಯುಕ್ತ ಅಧಿಕಾರಿಗಳು (Lokayukta Officers) ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿ (Government Officers) ಬಳಿಯೇ ಹಣದ ಬೇಡಿಕೆ ಇಟ್ಟು ಅವರನ್ನು ಬೆದರಿಸುತ್ತಿದ್ದ ಎಂಬ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhana Soudha Police Station) ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಹಣ ಕಳಿಸಲು ನೀಡಿದ್ದ ಮೊಬೈಲ್ ನಂಬರ್ ಜಾಡು ಹಿಡಿದು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಇನ್ನು ಆರೋಪಿ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಅನೇಕರಿಗೆ ವಂಚಿಸಿರಬಹುದು ಎನ್ನಲಾಗುತ್ತಿದೆ. ಮೊಬೈಲ್ ನಂಬರ್ ಮೂಲಕ ಆರೋಪಿಗಳ ಹೆಸರನ್ನು ಪತ್ತೆ ಮಾಡಲಾಗಿದೆ.
ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ ಪಾಟೀಲ್ ಎಂಬುವವರಿಗೆ ಕಚೇರಿಯ ನಂಬರ್ಗೆ ಕರೆ ಮಾಡಿ ತಾನು ಲೋಕಾಯುಕ್ತ ಡಿವೈಎಸ್ಪಿ ರಾಜರಾಮ್ ಗಾಯಕ್ವಾಡ್ ಎಂದು ಆರೋಪಿ ಪರಿಚಯಿಸಿಕೊಂಡಿದ್ದಾನೆ. ಅದೇ ಸಂಜೆ ಗೀತಾ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮ್ಮ ಮೇಲೆ ದೂರು ಬಂದಿದೆ. ದಾಳಿ ಮಾಡಲು ಪ್ರಸ್ತಾಪ ಇದೆ ಎಂದು ಬೆದರಿಸಿದ್ದಾನೆ. ನೀವು ಈ ಸಂಕಷ್ಟದಿಂದ ಪಾರಾಗಬೇಕು, ನಿಮ್ಮ ಮನೆ ಮೇಲೆ ದಾಳಿ ಮಾಡಬಾರದು ಎಂದರೆ 926011711 ಈ ನಂಬರ್ಗೆ 70 ಸಾವಿರ ಗೂಗಲ್ ಪೇ ಮಾಡಿ ಎಂದು ಆರೋಪಿಯು ಸರ್ಕಾರಿ ಅಧಿಕಾರಿ ಗೀತಾ ಅವರಿಗೆ ಹೆದರಿಸಿದ್ದಾನೆ.
ಇದರಿಂದ ಅನುಮಾನಗೊಂಡ ಅರಣ್ಯ ಅಧಿಕಾರಿ ಗೀತಾ ಎಂ ಪಾಟೀಲ್ ಅವರು ಲೋಕಾಯುಕ್ತ ಅಧಿಕಾರಿ ಎಂದು ನಟಿಸಿ ದಾಳಿ ಮಾಡದೆ ಇರಲು ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಆರೋಪಿ ಗೂಗಲ್ ಪೇ ಮಾಡಲು ನೀಡಿದ್ದ ಹಾಗೂ ಕರೆ ಮಾಡಿದ್ದ ನಂಬರ್ಗಳು ರಾಜರಾಮ್ ಘಾಟ್ಕೆ ಮತ್ತು ಯಲ್ಲಪ್ಪ ಕಾಂಬ್ಳೆ ಎಂಬ ಹೆಸರಿನಲ್ಲಿದೆ. ಸದ್ಯ ಈ ನಂಬರ್ಗಳ ಮಾಹಿತಿ ಕಲೆ ಹಾಕಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವಕನನ್ನು ರಕ್ಷಿಸಿದ ಪೊಲೀಸರು
ಬಿಎಂಟಿಸಿ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರಿಗೆ ದಂಡಾಸ್ತ್ರ
ಬಿಎಂಟಿಸಿ ಬಸ್ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ 3027 ಪ್ರಯಾಣಿಕರಿಂದ 6,10,880 ರೂ. ದಂಡ ವಸೂಲಿ ಮಾಡಲಾಗಿದೆ. ಸಿಬ್ಬಂದಿ ಬಿಎಂಟಿಸಿ ಬಸ್ಗಳಲ್ಲಿ 14930 ಟ್ರಿಪ್ ತಪಾಸಣೆ ನಡೆಸಿದ್ದರು. ಈ ವೇಳೆ ಬಿಎಂಟಿಸಿ ಬಸ್ ನಿರ್ವಾಹಕರ ವಿರುದ್ಧವೂ 906 ಪ್ರಕರಣ ದಾಖಲಾಗಿದೆ. ಮಹಿಳೆಯರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತವರಿಂದಲೂ ದಂಡ ವಸೂಲಿ ಮಾಡಲಾಗಿದೆ. 387 ಪುರುಷ ಪ್ರಯಾಣಿಕರಿಂದ 38,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹಾಗೂ ಮೋಟಾರು ವಾಹನ ಕಾಯ್ದೆ ಅನ್ವಯ ಅಧಿಕಾರಿಗಳಿಂದ ದಂಡ ವಸೂಲಿ ಮಾಡಲಾಗಿದೆ. ಬಿಎಂಟಿಸಿ ಅಧಿಕಾರಿಗಳು ಸೆಪ್ಟೆಂಬರ್ನಲ್ಲಿ 6.49 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:14 am, Wed, 11 October 23



