ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೈರಾದವರಿಗೆ ಜಿಬಿಎ ಶಾಕ್!

ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಆದರೆ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷದಾರರು ಯಾವುದೇ ಕಾರಣವಿಲ್ಲದೆ ಹಾಗೂ ಅನಧಿಕೃತವಾಗಿ ಸಮೀಕ್ಷೆಗೆ ಗೈರಾಗುತ್ತಿದ್ದು, ಅಂತವರ ವೇತನ ಕಡಿತಕ್ಕೆ ಜಿಬಿಎ ಮುಂದಾಗಿದೆ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೈರಾದವರಿಗೆ ಜಿಬಿಎ ಶಾಕ್!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2025 | 3:24 PM

ಬೆಂಗಳೂರು, ಅಕ್ಟೋಬರ್​ 14: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉರಫ್​ ಜಾತಿ ಸಮೀಕ್ಷೆಗೆ (caste survey) ಗೈರಾದವರಿಗೆ ವೇತನ ತಡೆಗೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರಿ (GBA) ಪ್ಲ್ಯಾನ್​​ ನಡೆಸಿದೆ. ಆ ಮೂಲಕ ನೋ ವರ್ಕ್-ನೋ ಪೇ ಅಂತಾ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ​​ ರಾವ್​​​ ಸಮೀಕ್ಷಾದಾರರಿಗೆ ಶಾಕ್​ ನೀಡಿದ್ದಾರೆ.

ಈ ಕುರಿತಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಮೀಕ್ಷೆಗೆ ಗೈರಾದವರ ವೇತನ ಕಡಿತ ಮಾಡುವುದಾಗಿ ಮಾಹಿತಿ ನೀಡಿದೆ. ಸದ್ಯ ಜಿಬಿಎ ವ್ಯಾಪ್ತಿಯಲ್ಲಿ 18 ಸಾವಿರ ಸಮೀಕ್ಷಕರು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಪೈಕಿ 2,300 ಸಮೀಕ್ಷಕರು ಸಮೀಕ್ಷೆಗೆ ಹಾಜರಾಗಿಲ್ಲ. ಹೀಗಾಗಿ ಸಮೀಕ್ಷೆಗೆ ಹಾಜರಾಗದ ಸಮೀಕ್ಷಕರ ಸಮೀಕ್ಷೆಯ ಅವಧಿಯ ವೇತನ ಕಡಿತಕ್ಕೆ ಜಿಬಿಎ ಚಿಂತನೆ ನಡೆಸಿದೆ.

ಜಿಬಿಎ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಬೆಂಗಳೂರು ನಗರದಲ್ಲಿ ಸುಮಾರು 46 ಲಕ್ಷ ಮನೆಗಳ ಸಮೀಕ್ಷೆ ನಡೆಸಬೇಕಿದ್ದು, ಇದಕ್ಕಾಗಿ ಸುಮಾರು 21 ಸಾವಿರ ಸಮೀಕ್ಷಾದಾರರನ್ನು ನಿಯೋಜಿಸಲಾಗಿದೆ. ಈ ಸಮೀಕ್ಷಾದಾರಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಅವರು ಪ್ರಶಂಸೆಗೆ ಅರ್ಹರಾಗಿದ್ದಾರೆ.

ಇದನ್ನೂ ಓದಿ
Caste census: 5 ದಿನಗಳಲ್ಲಿ ಜಾತಿ ಗಣತಿ ಮುಗಿಸಿದ ಶಿಕ್ಷಕಿ!
ಜಾತಿಗಣತಿ ವೇಳೆ ಮಾಹಿತಿ ನೀಡೋದು ಕಡ್ಡಾಯವಲ್ಲ: ಸರ್ಕಾರ ಸ್ಪಷ್ಟನೆ
ಜಾತಿ ಗಣತಿ: ಸಿಎಂಗೆ ಸಿ.ಟಿ. ರವಿ ಬರೆದ ಬಹಿರಂಗ ಪತ್ರದಲ್ಲೇನಿದೆ?
ಜಾತಿ ಗಣತಿ: ಒಬಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುತ್ತೇವೆಂದ ಡಿಕೆಶಿ

ಗರ್ಭಿಣಿಯರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವುಳ್ಳ ತಾಯಂದಿರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ ಸಮೀಕ್ಷಾದಾರರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ಪ್ರತಿದಿನ ಪದೇ ಪದೇ ನೋಟಿಸ್​​ ಹಾಗೂ ಎಸ್ಎಂ​​ಎಸ್​ ಮೂಲಕ ಸಂದೇಶಗಳನ್ನು ನೀಡುತ್ತಿದ್ದರೂ ಕೂಡ ಸುಮಾರು 2,300 ಸಮೀಕ್ಷದಾರರು ಯಾವುದೇ ಕಾರಣವಿಲ್ಲದೆ ಹಾಗೂ ಅನಧಿಕೃತವಾಗಿ ಸಮೀಕ್ಷೆಗೆ ಗೈರುಹಾಜರಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜಾತಿ ಸಮೀಕ್ಷೆಗೆಂದು ಹೋದ ಶಿಕ್ಷಕಿಗೆ ಹೃದಯಾಘಾತ; ಶಿಕ್ಷಕರಿಗೆ ಗಣತಿಯ ಹೆಸರಿನಲ್ಲಿ ಒತ್ತಡದ ಶಿಕ್ಷೆ

ಇಂತಹವರ ನಡೆ ಗಂಭೀರ ಶಿಸ್ತುಉಲ್ಲಂಘನೆಯಾಗಿದೆ. ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಅನಧಿಕೃತ ಗೈರುಹಾಜರಿ ಅವಧಿಯ ವೇತನವನ್ನು ಕೆಲಸ ಮಾಡದಿದ್ದರೆ – ವೇತನವಿಲ್ಲ (No Work – No Pay) ತತ್ವದ ಪ್ರಕಾರ ನಿರಾಕರಿಸುವಂತೆ ಆದೇಶಿಸಲಾಗಿದೆ.

ಅವರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರಾಗಿರುವ ಸಮೀಕ್ಷಾದಾರರ ವಿರುದ್ಧ ಪ್ರತಿದಿನ ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತವಾಗಿ ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಸಹ ಅವರು ಹೊಣೆಗಾರರಾಗಿರುತ್ತಾರೆ ಎಂದು ಜಿಬಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಸಮೀಕ್ಷೆ ಸ್ವಲ್ಪ ತಡವಾಗುತ್ತಿದೆ ಎಂದ ಸಚಿವ ಶಿವರಾಜ ತಂಗಡಗಿ

ಸಮೀಕ್ಷೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ರಾಜ್ಯದಲ್ಲಿ ಈವರೆಗೆ 5.34 ಕೋಟಿ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ 41 ಲಕ್ಷ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಜಾತಿ ಸಮೀಕ್ಷೆ: ಕರ್ನಾಟಕದಲ್ಲಿ ಶೇ 63ರಷ್ಟು ಪೂರ್ಣ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಚೆನ್ನಾಗಿ ಸಮೀಕ್ಷೆ ಆಗುತ್ತಿದೆ. ಬೆಂಗಳೂರು ನಗರದಲ್ಲಿ ಸ್ವಲ್ಪ ತಡ ಆಗುತ್ತಿದೆ, ಅದನ್ನೂ ಮುಗಿಸುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 44,11,331 ಜನರ ಸಮೀಕ್ಷೆ ಪೂರ್ಣಗೊಳಿಸಿದ್ದು, 8,39,192 ಜನರ ಬಗ್ಗೆ ಸಮೀಕ್ಷೆ ಬಾಕಿ ಇದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:21 pm, Tue, 14 October 25