ಬೆಂಗಳೂರು, ಸೆ.22: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ (Cauvery) ನೀರು ನಿರ್ವಹಣ ಪ್ರಾಧಿಕಾರ ಹೊರಡಿಸಿದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚಿಸಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನಾಳೆ ಬೆಂಗಳೂರು ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲೂ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಿದ್ದು, ಬೆಂಗಳೂರು ನಗರದಲ್ಲಿ ಕೂಡಾ ಪ್ರತಿಭಟನೆ ಮಾಡಲು ತೀರ್ಮಾನ ಮಾಡಲಾಗಿದೆ. ಅದರಂತೆ ನಾಳೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬೊಮ್ಮಾಯಿ ಹೇಳಿದರು.
ಸೋಮವಾರದಿಂದ ಎಲ್ಲಾ 28 ಕ್ಷೇತ್ರಗಳಲ್ಲಿ ಕಾವೇರಿ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮಾತೆತ್ತಿದರೆ ಹೇಳುವ ಬ್ರಾಂಡ್ ಬೆಂಗಳೂರಿಗೆ ನೀರು ಒದಗಿಸುವ ಗ್ಯಾರಂಟಿ ಇಲ್ಲ. ಸುಪ್ರೀಂ ಕೋರ್ಟ್ನಲ್ಲಿ ನಿನ್ನೆ ಬೆಂಗಳೂರಿನ ನೀರಿನ ಅಗತ್ಯತೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜ್ಯ ಸರ್ಕಾರದಿಂದ ಕಾವೇರಿ ಹಿತರಕ್ಷಣೆ ಸಾಧ್ಯವಿಲ್ಲ ಎಂದು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು: ಬೆಂಗಳೂರಿನಲ್ಲಿ ತಮಿಳರು ವಾಸಿಸುವ ಏರಿಯಾಗಳಲ್ಲಿ ಕಟ್ಟೆಚ್ಚರ
ಸ್ವಾಮಿ ಜನ ನಿಮಗೆ (ಕಾಂಗ್ರೆಸ್) ಅಧಿಕಾರ ಕೊಟ್ಟಿರುವುದು ರಾಜ್ಯದ ಹಿತರಕ್ಷಣೆಗೆ ಎಂದು ಹೇಳಿದ ಬೊಮ್ಮಾಯಿ, ಯಾರ ಹತ್ತಿರ ಮಾತನಾಡಿದರೆ ಪರಿಹಾರ ಸಾಧ್ಯವೋ ಅದನ್ನು ಮಾಡುತ್ತಿಲ್ಲ. ಏನೇ ಆದರೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟ ಎಂದರು.
ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಎಡವಿದೆ. ಇದರ ಪರಿಣಾಮ ಹೊರಗೆ ಬಿದ್ದಿದೆ. ನಮ್ಮ ವಕೀಲರು ಕೋರ್ಟ್ ಪ್ರೊಸೀಡಿಂಗ್ ನೋಡಿದ್ದಾರೆ, ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ. ಟ್ರಿಬ್ಯುನಲ್ ನಾರ್ಮ್ಸ್ ಬಗ್ಗೆ, ತಮಿಳುನಾಡಿನಲ್ಲಿ ಎಷ್ಟು ನೀರು ಬಳಕೆಯಾಗಿದೆ ಎಂಬುದನ್ನು ಹೇಳಿಲ್ಲ. ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ ಎಂದರು.
ಈಗಾಗಲೇ ಮಂಡ್ಯ, ಚಾಮರಾಜನಗರ, ಬೆಂಗಳೂರಿನಲ್ಲಿ ಸೇರಿ ಎಲ್ಲಾ ಕಡೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಇಂದಿನ ಸಭೆಯಲ್ಲಿ ಹೋರಾಟದ ರೂಪು ರೇಷೆ ನಿರ್ಧಾರ ಮಾಡಲಿದ್ದೇವೆ. ಒಟ್ಟಾರೆಯಾಗಿ ಬಿಜೆಪಿ ಕಾವೇರಿ ನೀರು ರಕ್ಷಣೆಗೆ ಬದ್ಧವಾಗಿದೆ ಎಂದರು.
ಎಲ್ಲಾ ಜಿಲ್ಲೆಗಳಲ್ಲಿ ಕೂಡಾ ಕಾವೇರಿ ವಿಚಾರವಾಗಿ ಬಿಜೆಪಿಯಿಂದ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ಬಸವರಾಜ ಬೊಮ್ಮಾಯಿ, ಕೋರ್ಟ್ಗೆ ಹೋದಾಗ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಸುಪ್ರೀಂ ಕೋರ್ಟಿನಲ್ಲಿ ಗಟ್ಟಿಯಾಗಿ ವಾದ ಮಾಡುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಸರಿಯಾದ ವಾದನ ಮಂಡನೆ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರ ಅಂತ ಘೋಷಣೆ ಮಾಡಿದ್ದು, 25 ಸಾವಿರ ರೂ. ನೀರಾವರಿ ಬೆಳೆಗೆ ಪರಿಹಾರ ನೀಡುವ ಘೋಷಣೆ ಮಾಡಬೇಕು. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಪರ್ಯಾಯ ಏನು ಮಾಡಿದ್ದಾರೆ ಅಂತಾ ಘೋಷಣೆ ಮಾಡಬೇಕು ಎಂದರು.
ನಾನು ನೀರು ಬಿಡಬೇಡಿ, ಕಾರಣ ಹೇಳಿ ಅಂತ ಹೇಳಿದೆ. ಇದರಲ್ಲಿ ರಾಜಕೀಯ ಏನಿದೆ? ಪ್ರಶ್ನೆ ಮಾಡಿದ್ದು ಇವರಿಗೆ ದೊಡ್ಡದಾಯಿತಾ ಎಂದು ಪ್ರಶ್ನಿಸಿದ ಬೊಮ್ಮಾಯಿ, ಸುಪ್ರೀಂ ಕೋರ್ಟ್ನಲ್ಲಿ ರಿವ್ಯೂ ಪಿಟಿಷನ್ ಹಾಕಿ ಇವರೇ ಅದನ್ನು ಪಿಟಿಷನರ್ ಆಗಿ ವಾದ ಮಾಡಬೇಕು. ಇವತ್ತು ಸಚಿವ ಸಂಪುಟ ಸಭೆ ಇದೆ. ಸರ್ಕಾರ ನೀರು ಉಳಿಸಿಕೊಳ್ಳುವ ಸ್ಪಷ್ಟ ನಿರ್ಧಾರ ಮಾಡಲಿ. ಬರಕ್ಕೆ ಬೆಳೆ ನಷ್ಟ ಪರಿಹಾರ ಕೊಡುವ ತೀರ್ಮಾನ ಮಾಡಲಿ ಎಂದರು.
ನಿರ್ಮಲಾನಂದನಾಥ ಶ್ರೀಗಳಿಂದ ಕಾವೇರಿ ಪ್ರತಿಭಟನೆಗೆ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಕಾವೇರಿ ವಿಚಾರವನ್ನು ಹಗುರವಾಗಿ ಪರಿಗಣಿಸಿದೆ. ಪ್ರತಿಭಟನೆಯನ್ನೂ ಹಗುರವಾಗಿ ಪರಿಗಣಿಸಿದೆ. ಸರ್ಕಾರ ಇದೇ ಧೋರಣೆ ಮುಂದುವರೆಸಿದರೆ ಪರಮ ಪೂಜ್ಯ ಸ್ವಾಮೀಜಿಗಳು ಸೇರಿ ಎಲ್ಲರೂ ದಂಗೆ ಏಳುತ್ತಾರೆ ಎಂದರು.
ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಇವತ್ತು ಸಂಜೆ ಏನೋ ಮಾತುಕತೆ ಆಗುತ್ತದೆ ಎಂಬ ಸುದ್ದಿ ಇದೆ. ಮಾತುಕತೆ ನಂತರ ನಮ್ಮ ವರಿಷ್ಠರು ನಮಗೆ ತಿಳಿಸುತ್ತಾರೆ. ನಮ್ಮ ನಾಯಕರು ಬೇರೆ ಬೇರೆ ಹಂತದಲ್ಲಿ ವರಿಷ್ಠರ ಜೊತೆ ಮಾತಾಡಿದ್ದಾರೆ. ಪ್ರಾಥಮಿಕವಾಗಿ ಜೆಡಿಎಸ್ ನಾಯಕರ ಮನಸ್ಥಿತಿ ತಿಳಿದು ನಮ್ಮ ಜೊತೆ ಮಾತಾಡುತ್ತಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ