ಸೆ.26ಕ್ಕೆ ಬೆಂಗಳೂರು ಬಂದ್ ಫಿಕ್ಸ್?: ರಸ್ತೆಗಳಿಯಲ್ಲ ಬಸ್, ಓಲಾ, ಉಬರ್; ಯಾರ್ಯಾರ ಬೆಂಬಲ?
ಸೆ.26ರ ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದು ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಮಂಗಳವಾರ ಬೆಂಗಳೂರು ಬಹುತೇಕ ಸ್ಥಬ್ಧವಾಗಲಿದೆ. ಬಂದ್ಗೆ ಯಾರ್ಯಾರ ಬೆಂಬಲವಿದೆ ಎಂಬ ಮಾಹಿತಿ ಇಲ್ಲಿದೆ. 60ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲು ಸೂಚಿಸಿವೆ.
ಬೆಂಗಳೂರು, ಸೆ.24: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ (Cauvery Water Dispute) ಸಂಬಂಧಿಸಿ ದಿನದಿಂದ ದಿನಕ್ಕೆ ಆಕ್ರೋಶದ ಕಿಡಿ ಹೆಚ್ಚಾಗುತ್ತಿದೆ. ರೈತರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ನಿನ್ನೆ ಮಂಡ್ಯ, ಮದ್ದೂರು ಬಂದ್ ಮಾಡಿ ರೈತರು ಕಿಡಿಕಾರಿದ್ದರು. ಈಗ ಸೆ.26ರ ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದು (Bengaluru Bandh) ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಮಂಗಳವಾರ ಬೆಂಗಳೂರು ಬಹುತೇಕ ಸ್ಥಬ್ಧವಾಗಲಿದೆ. ಬಂದ್ಗೆ ಯಾರ್ಯಾರ ಬೆಂಬಲವಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಸಾರಿಗೆ ಬಸ್ ರಸ್ತೆಗಿಳಿಯುವುದಿಲ್ಲ
ಸೆ.26ರ ಬೆಂಗಳೂರು ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಸಾರಿಗೆ ಬಸ್ ರಸ್ತೆಗಿಳಿಯುವುದಿಲ್ಲ. ಬಿಎಂಟಿಸಿ ಸಾರಿಗೆ ಸಿಬ್ಬಂದಿ ಮಂಗಳವಾರ ಬಂದ್ಗೆ ಬೆಂಬಲಿಸಲಿದ್ದಾರೆ. ಘಟಕದಿಂದ ಬಸ್ ಹೊರ ಬರಲ್ಲ, ಅಂದು ಸಿಬ್ಬಂದಿ ಗೈರಾಗಲಿದ್ದಾರೆ. ಕಾವೇರಿ ನೀರಿನ ಹೋರಾಟಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಬೇಕು ಎಂದರು.
ಖಾಸಗಿ ಸಾರಿಗೆ ಬಸ್ಗಳು ಕೂಡ ರಸ್ತೆಗಿಳಿಯಲ್ಲ
ಮಂಗಳವಾರ ಬೆಂಗಳೂರು ಬಂದ್ಗೆ ಖಾಸಗಿ ಸಾರಿಗೆ ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು. ಬೆಂಗಳೂರು ನಿವಾಸಿಗಳು ಬದುಕಲು ಕಾವೇರಿ ನೀರು ಬಹುಮುಖ್ಯವಾಗಿ ಬೇಕು. ಖಾಸಗಿ ಸಾರಿಗೆ ರಸ್ತೆಗಿಳಿಸದೆ ಬಂದ್ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಮಂಗಳವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಖಾಸಗಿ ವಾಹನಗಳು ಬಂದ್ ಆಗಿರಲಿವೆ. ಬೆಂಗಳೂರು ನಗರದಲ್ಲಿ 5-6 ಲಕ್ಷ ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರಲ್ಲಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ತಿಳಿಸಿದರು.
ಇದನ್ನೂ ಓದಿ: ಸೆ.26 ರಂದು ಬೆಂಗಳೂರು ಬಂದ್: ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘಗಳಿಂದ ಬೆಂಬಲ
ನೈತಿಕ ಬೆಂಬಲ ನೀಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು
ಬಂದ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ನೈತಿಕ ಬೆಂಬಲ ನೀಡಿವೆ. ಶಾಲೆಗಳಿಗೆ ರಜೆ ನೀಡುವ ನಿರ್ಧಾರ ಸರ್ಕಾರದ ಹೆಗಲಿಗೆ ಹಾಕಿದ್ದಾರೆ. ಮಕ್ಕಳ ಹಿತದೃಷ್ಠಿಯಿಂದ ಸರ್ಕಾರವೇ ಶಾಲೆಗೆ ರಜೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ. ಸರ್ಕಾರ ರಜೆ ನೀಡಿದ್ರೆ ನಾವು ರಜೆ ಕೊಡ್ತೀವಿ ಎಂದಿದ್ದಾರೆ.
ಬಂದ್ಗೆ ಓಲಾ, ಉಬರ್ ಬೆಂಬಲ
ಮಂಗಳವಾರ ಬೆಂಗಳೂರು ಬಂದ್ಗೆ ಓಲಾ, ಉಬರ್ ಸಂಘದಿಂದ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಾದ್ಯಂತ ಓಲಾ, ಉಬರ್ ಕ್ಯಾಬ್ ರಸ್ತೆಗಿಳಿಸದಿರಲು ನಿರ್ಧಾರ ಮಾಡಲಾಗಿದೆ ಎಂದು ಟಿವಿ9ಗೆ ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾಹಿತಿ ನೀಡಿದರು.
ಸರ್ಕಾರಿ ಶಾಲೆಗಳ ರಜೆ ಬಗ್ಗೆ ಗೊಂದಲ
ಮಂಗಳವಾರದ ಬಂದ್ಗೆ ಶಿಕ್ಷಣ ಇಲಾಖೆಯಿಂದ ನಿರ್ಧಾರ ಪ್ರಕಟವಾಗಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಆದರೆ ನಾಳೆಯ ಬಂದ್ ತೀವ್ರತೆ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತೆ. ಮಂಗಳವಾರ ಸರ್ಕಾರಿ ಶಾಲೆಗೆ ರಜೆ ಬಗ್ಗೆ ಯಾವುದೇ ನಿರ್ಧಾರವಿಲ್ಲ. ಸರ್ಕಾರಿ ಶಾಲೆಗಳು ಇರುತ್ತಾ ಇಲ್ವಾ ಎಂಬ ಗೊಂದಲದಲ್ಲಿ ಶಾಲಾ ಮಕ್ಕಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:22 pm, Sun, 24 September 23