ಬೆಂಗಳೂರು: ಬೆಂಗಳೂರಿನಲ್ಲಿ ಎಂಡಿಎಂಎ, ಎಕ್ಸ್‌ಟಸಿ ಮಾತ್ರೆಗಳನ್ನು ಡೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ವಿದೇಶಿ ಪ್ರಜೆಗಳಾಗಿದ್ದು, ಓರ್ವ ನೆರೆಯ ಕೇರಳ ರಾಜ್ಯದವನಾಗಿದ್ದಾನೆ. ಆರೋಪಿಗಳು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ, ಎಕ್ಸ್‌ಟಸಿ ಮಾತ್ರೆ ಜಪ್ತಿ ಮಾಡಲಾಗಿದ್ದು, ಆ ಮಾದಕ ವಸ್ತುಗಳನ್ನು ಐಟಿ ಉದ್ಯೋಗಿಗಳು ಹಾಗೂ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧನದ ವೇಳೆ 500 ಎಂಡಿಎಂಎ ಎಕ್ಸ್‌ಟಸಿ ಮಾತ್ರೆ ಸಿಕ್ಕಿದ್ದು, ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು ಒಂದು ವಾರದ ಹಿಂದೆಯೂ ಇಂಥದ್ದೇ ದಾಳಿ ನಡೆದಿತ್ತು.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ನೈಜೀರಿಯಾ ಡ್ರಗ್ ಪೆಡ್ಲರ್ ಫಿಲಿಪ್ಸ್ನನ್ನು ಸೆರೆ ಹಿಡಿದಿದ್ದಾರೆ. ಹಾಗೂ 500 ಗ್ರಾಂ ಎಂಡಿಎಂಎ, 400 ಗ್ರಾಂ ಎಕ್ಸ್‌ಟಸಿ ಟ್ಯಾಬ್ಲೆಟ್ ಸೇರಿ ಒಂದು ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸುತ್ತಿದ್ದ. ಈತ ವೀಸಾ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ವಾಸ್ತವ್ಯ ಮಾಡಿದ್ದ. ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಈತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಕಮ್ಮನಹಳ್ಳಿ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿ ಸಿಸಿಬಿ ಬಂಧಿಸಿದೆ.
ಗಾಂಜಾದಿಂದ ಸಂಪಾದಿಸಿದ್ದ ಆಸ್ತಿಯೆಲ್ಲಾ ಪೊಲೀಸರ ವಶ
ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಪೊಲೀಸರು ಗಾಂಜಾ ದಂಧೆಕೋರರಿಗೆ ನಡುಕು ಹುಟ್ಟಿಸುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಗಾಂಜಾ ದಂಧೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ತೊಡಗಿದ್ದ ಅಂಜಯ್ ಕುಮಾರ್ ಎಂಬಾತ ಆನೇಕಲ್‌ನಲ್ಲಿ ಒಂದೂವರೆ ಕೋಟಿಗೂ ಅಧಿಕ ಆಸ್ತಿ ಮಾಡಿದ್ದ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದ ಪೊಲೀಸರು, ಅಂಜಯ್ ಕುಮಾರ್, ಗಾಂಜಾ ದಂಧೆಯಿಂದ ಸಂಪಾದಿಸಿದ್ದ ಸಂಪೂರ್ಣ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ವಿಶೇಷ ಅಂದ್ರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಂಜಾ ಕೇಸ್‌ನಲ್ಲಿ ಸಿಕ್ಕಿ ಬಿದ್ದವನ ಆಸ್ತಿ ಜಪ್ತಿ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಪೊಲೀಸರು ಕಾರ್ಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ:
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಗಾಂಜಾ ಮಾರಾಟಕ್ಕೆ ಇಳಿದಿದ್ದ ಯುವಕ ಮೊದಲ ಪ್ರಯತ್ನದಲ್ಲೇ ಪೊಲೀಸರಿಗೆ ಸಿಕ್ಕಿ ಬಿದ್ದ!
(CCB Police arrest three drug peddlers in Bengaluru)