ಬೆಂಗಳೂರು: ಪೆಟ್ರೋಲ್​ ಬಂಕ್​ ಪಕ್ಕದ ಬಹುಮಹಡಿ ಹೋಟೆಲ್​ ಬೆಂಕಿಗೆ ಆಹುತಿ; 96 ಕೋಣೆಗಳ ಕಟ್ಟಡದಲ್ಲಿ ತಪ್ಪಿದ ಭೀಕರ ಅವಘಡ

TV9kannada Web Team

TV9kannada Web Team | Edited By: Skanda

Updated on: Sep 14, 2021 | 7:33 AM

95 ರೂಮ್ ಗಳು ಖಾಲಿ ಇದ್ದವು, ಕೆಲಸಗಾರರು ಐವರನ್ನು ಹೊರತುಪಡಿಸಿ ಯಾರೂ ಇರಲಿಲ್ಲ. ಹಾಗಾಗಿ 7 ಜನರ ರಕ್ಷಣೆ ಬೇಗನೆ ಆಗಿದೆ. ಒಂದೊಮ್ಮೆ ರೂಮ್​ಗಳು ಭರ್ತಿ ಆಗಿದ್ದರೆ ಮಾರಣಹೋಮವೇ ನಡೆದುಹೋಗುತ್ತಿತ್ತು ಎಂದು ಹೇಳಲಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರು: ಪೆಟ್ರೋಲ್​ ಬಂಕ್​ ಪಕ್ಕದ ಬಹುಮಹಡಿ ಹೋಟೆಲ್​ ಬೆಂಕಿಗೆ ಆಹುತಿ; 96 ಕೋಣೆಗಳ ಕಟ್ಟಡದಲ್ಲಿ ತಪ್ಪಿದ ಭೀಕರ ಅವಘಡ
ಬೆಂಗಳೂರಿನಲ್ಲಿ ಅಗ್ನಿ ಅವಘಡ

ಬೆಂಗಳೂರು: ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿಯಿರುವ 4 ಮಹಡಿಯ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಅಗ್ನಿಯ ಕೆನ್ನಾಲಗೆಗೆ 2 ಮಹಡಿಯಲ್ಲಿದ್ದ ವಸ್ತು ಸುಟ್ಟು ಭಸ್ಮವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೆಳ ಹಾಗೂ ಮೊದಲ ಮಹಡಿ ಸುಟ್ಟು ಕರಕಲಾಗಿವೆ. ಹೋಟೆಲ್‌ನ ಪಾರ್ಕಿಂಗ್‌ ಸ್ಥಳದಲ್ಲಿದ್ದ ಒಂದು ಆಟೋ ಹಾಗೂ ಒಂದು ಬೊಲೆರೊ ವಾಹನ ಕೂಡಾ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ವೇಳೆ ಹೋಟೆಲ್‌ನಲ್ಲಿ ಸಿಲುಕಿದ್ದ 7 ಜನರ ರಕ್ಷಣೆ ಮಾಡಲಾಗಿದೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟು 96 ರೂಂಗಳನ್ನು ಹೊಂದಿದ್ದ 4 ಮಹಡಿಯ ಅಜಂತಾ ಟ್ರಿನಿಟಿ ಹೋಟೆಲ್‌ನ 2 ಮಹಡಿ ಬೆಂಕಿ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದ್ದು, ಉಳಿದ ಎರಡು ಮಹಡಿ ತುಂಬಾ ದಟ್ಟ ಹೊಗೆ ಆವರಿಸಿಕೊಂಡಿತ್ತು. ಘಟನೆಯಲ್ಲಿ ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್ ಹಾಗೂ ಅಭಿಷೇಕ್ ಎಂಬುವವರನ್ನು ರಕ್ಷಿಸಲಾಗಿದ್ದು, ಮತ್ತಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾರ್ಕಿಂಗ್ ಲಾಟ್​ನಲ್ಲಿದ್ದ ಒಂದು ಆಟೋ, ಒಂದು ಬೊಲೆರೊ ವಾಹನ ಸುಟ್ಟು ಕರಕಲಾಗಿರುವುದರಿಂದ ಮೊದಲು ಬೊಲೆರೊ ವಾಹನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬೊಲೆರೊ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಪಕ್ಕದಲ್ಲೇ ಇದ್ದ ಆಟೋಗೆ ತಗುಲಿರಬಹುದು. ಬಳಿಕ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ವಯರ್​ಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಇದರಿಂದ ಶಾರ್ಟ್ ಸೆರ್ಕ್ಯೂಟ್ ಆಗಿ ಇಡೀ ಹೋಟೆಲ್​ ಅಗ್ನಿಗೆ ಆಹುತಿಯಾಗಿದೆ ಎಂದು ಅನುಮಾನಿಸಲಾಗಿದೆ.

ಬೆಂಕಿ ವ್ಯಾಪಿಸಿದ ವೇಳೆ ದಟ್ಟ ಹೊಗೆ ಆವರಿಸಿಕೊಂಡ ಕಾರಣ ಉಸಿರಾಡಲಾಗದೇ ಎರಡನೇ ಮಹಡಿಯಿಂದ ಜಿಗಿಯಲು ಮುಂದಾಗಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ರಕ್ಷಣೆ ಮಾಡಿ ಕರೆತಂದಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ ಸುಟ್ಟು ಭಸ್ಮವಾಗಿದ್ದು, ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನ ಆಗಮಸಿ ಸಂಪೂರ್ಣ ಬೆಂಕಿ‌ ನಂದಿಸಿವೆ. ಅಷ್ಟರಲ್ಲಾಗಲೇ ಹೊಟೆಲ್​ನ ರಿಸಪ್ಷನ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆದರೂ ಘಟನೆ ನಡೆದ ಐದೇ ನಿಮಿಷಕ್ಕೆ ಅಗ್ನಿಶಾಮಕ ವಾಹನ ಆಗಮಿಸಿದ್ದರಿಂದ ದೊಡ್ಡ ಅವಘಡ ತಪ್ಪಿಹೋಗಿದೆ.

ಹೋಟೆಲ್ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇರುವ ಕಾರಣ ಒಂದು ವೇಳೆ ಅಗ್ನಿಶಾಮಕ ದಳದವರು ಆಗಮಿಸುವುದು ಕೊಂಚ ತಡವಾಗಿದ್ದರೂ ಬೆಂಕಿ ವ್ಯಾಪಿಸಿ ದೊಡ್ಡ ಅನಾಹುತವೇ ನಡೆಯುವ ಸಾಧ್ಯತೆ ಇತ್ತು. ಅಲ್ಲದೇ 96 ರೂಮ್ ಇರುವ ಹೋಟೆಲ್​ನಲ್ಲಿ ನಿನ್ನೆ ಕೇವಲ 1 ರೂಮ್ ಮಾತ್ರ ಬುಕ್ ಆಗಿದ್ದು, ಹೋಟೆಲ್ ಮಾಲೀಕರ ಕಡೆಯಿಂದ ರಾತ್ರಿ ಇಬ್ಬರು ಬಂದು ಉಳಿದಿದ್ದರು ಎನ್ನಲಾಗಿದೆ. ಉಳಿದಂತೆ 95 ರೂಮ್ ಗಳು ಖಾಲಿ ಇದ್ದವು, ಕೆಲಸಗಾರರು ಐವರನ್ನು ಹೊರತುಪಡಿಸಿ ಯಾರೂ ಇರಲಿಲ್ಲ. ಹಾಗಾಗಿ 7 ಜನರ ರಕ್ಷಣೆ ಬೇಗನೆ ಆಗಿದೆ. ಒಂದೊಮ್ಮೆ ರೂಮ್​ಗಳು ಭರ್ತಿ ಆಗಿದ್ದರೆ ಮಾರಣಹೋಮವೇ ನಡೆದುಹೋಗುತ್ತಿತ್ತು ಎಂದು ಹೇಳಲಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇಡೀ ಹೋಟೆಲ್ ಸುಟ್ಟು ಕರಕಲಾದರೂ ಆ ವಿಗ್ರಹಕ್ಕೆ ಮಾತ್ರ ಏನೂ ಆಗಿಲ್ಲ! ಅಜಂತಾ ಟ್ರಿನಿಟಿ ಹೋಟೆಲ್​ನ ಎರಡು ಮಹಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದರೂ ರಿಸಪ್ಷನ್​ ಬಳಿ ಇದೆ ಗಣೇಶ ದೇವರ ಕಲ್ಲಿನ ವಿಗ್ರಹ ಮಾತ್ರ ಏನೂ ಆಗಿಲ್ಲ ಎಂದು ತಿಳಿದುಬಂದಿದೆ. ಸುಟ್ಟ ಗೋಡೆ ಕುಸಿದು ಬಿದ್ದಿದ್ದರೂ ಆ ವಿಗ್ರಹವಿದ್ದ ಜಾಗ ಮಾತ್ರ ಏನೂ ಆಗಿಲ್ಲ. ಗಣೇಶ ದೇವರ ಮೂರ್ತಿಗೆ ಯಾವುದೇ ಹಾನಿಯೂ ಆಗಿಲ್ಲ. ಗೋಡೆ ಬಿದ್ದರೂ ವಿಗ್ರಹ ಕೆಳಗೆ ಬಿದ್ದಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ಯಾಂಕರ್; ಬೆಂಕಿ ನಂದಿಸಿ, ಆತಂಕ ದೂರ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ 

ಗಂಡನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸಾಯಿಸಿ, ಶವವನ್ನ ಕಸದಂತೆ ಚರಂಡಿಗೆ ಹಾಕಿದ ತುಮಕೂರು ಮಹಿಳೆ

(Bengaluru Multi floor hotel fire accident)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada