Stop Hindi Imposiotion; ಹಿಂದಿ ಹೇರಿಕೆ ಖಂಡಿಸಿ ಟ್ವಿಟರ್ ಅಭಿಯಾನ, ಕನ್ನಡಿಗರು ಕೈ ಜೋಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ

TV9 Digital Desk

| Edited By: Ayesha Banu

Updated on:Sep 14, 2021 | 11:36 AM

ಹಿಂದಿ ದಿವಸ್ ಹಾಗೂ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು (ಸೆಪ್ಟೆಂಬರ್ 14) ಬೆಳಿಗ್ಗೆಯಿಂದ ರಾತ್ರಿ ಹತ್ತು ಗಂಟೆಯವರೆಗೂ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂದು ಹ್ಯಾಷ್ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ಕೈಗೊಂಡಿದೆ.

Stop Hindi Imposiotion; ಹಿಂದಿ ಹೇರಿಕೆ ಖಂಡಿಸಿ ಟ್ವಿಟರ್ ಅಭಿಯಾನ, ಕನ್ನಡಿಗರು ಕೈ ಜೋಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ
ಹಿಂದಿ ಹೇರಿಕೆ ಖಂಡಿಸಿ ಟ್ವಿಟರ್ ಅಭಿಯಾನ ಶುರು ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ
Follow us


ಬೆಂಗಳೂರು: ಸೆಪ್ಟೆಂಬರ್ 14ರಂದು ದೇಶಾದ್ಯಂತ ಹಿಂದಿ ದಿವಸ್(Hindi Diwas) ಆಚರಣೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಟ್ವಿಟರ್ನಲ್ಲಿ ದೇಶದ ಜನತೆಗೆ ಹಿಂದಿ ದಿನದ ಶುಭಾಶಯ ಕೋರಿದ್ದಾರೆ. ಆದ್ರೆ ಹಿಂದಿ ದಿವಸ್ ಹಾಗೂ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(Karnataka Rakshana Vedike) ಇಂದು (ಸೆಪ್ಟೆಂಬರ್ 14) ಬೆಳಿಗ್ಗೆಯಿಂದ ರಾತ್ರಿ ಹತ್ತು ಗಂಟೆಯವರೆಗೂ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂದು ಹ್ಯಾಷ್ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ(Twitter Campaign) ಕೈಗೊಂಡಿದೆ.

ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರೀಯ ಸ್ಥಾನಮಾನ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ವಿರೋಧವನ್ನೂ ಲೆಕ್ಕಿಸದೆ ಸೆಪ್ಟೆಂಬರ್ 14 ನ್ನು ಹಿಂದಿ ದಿವಸ್ ಎಂದು ಘೋಷಿಸಿದೆ. ಜೊತೆಗೆ, ಎಲ್ಲಾ ರಾಜ್ಯಗಳಲ್ಲಿಯೂ ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಆದೇಶಿಸಿದೆ. ಈ ವಿಚಾರ ಕರ್ನಾಟಕವನ್ನು, ಕನ್ನಡ ಪರ ಹೋರಾಟಗಾರರನ್ನೂ ಕೆರಳಿಸಿದ್ದು ಇದೇ ಕಾರಣಕ್ಕೆ ಕರವೇ (ಕರ್ನಾಟಕ ರಕ್ಷಣಾ ವೇದಿಕೆ) ಪ್ರತಿ ವರ್ಷ ಸೆ .14 ರಂದು ಹಿಂದಿ ದಿವಸ್ ವಿರುದ್ದ ಹೋರಾಟ ನಡೆಸುತ್ತಲೇ ಇದೆ. ಇಂದೂ ಸಹ ಕರವೇ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಟ್ವಿಟರ್ ಅಭಿಯಾನವನ್ನು ಆರಂಭಿಸಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಟ್ವಿಟರ್ ಅಭಿಯಾನ ಆರಂಭವಾಗಲಿದ್ದು, ಸತತ 12 ಗಂಟೆಗಳ ಕಾಲ ಈ ಅಭಿಯಾನ ನಡೆಯುತ್ತೆ ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬೇಕು ಎಂದು ಕರವೇ ಮನವಿ ಮಾಡಿದೆ.

ಈ ಸಂಬಂಧ ಫೇಸ್ಬುಕ್ನಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡ, ಇತ್ಯಾದಿ ಹೆಸರುಗಳಲ್ಲಿ ನಮ್ಮೆಲ್ಲರ ತೆರಿಗೆ ಹಣವನ್ನು ಬಳಸಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಲಾಗುತ್ತಿದೆ. ಇದನ್ನು ಖಂಡಿಸಿ, ಎಲ್ಲ ಕನ್ನಡಿಗರು #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಲು ಕೋರುತ್ತೇನೆ ಎಂದು ಟಿ.ಎ.ನಾರಾಯಣಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಹುಭಾಷೆಗಳನ್ನು ಆಡುವ ಜನರ ನಾಡಾದ ಭಾರತವು ವಿವಿಧ ಮಟ್ಟದಲ್ಲಿ ಏಕತೆಯನ್ನು ಪ್ರತಿಪಾದಿಸುತ್ತಿದೆ. ಆದರೆ ಇಡೀ ದೇಶಕ್ಕೆ ಒಂದೇ ಭಾಷೆಯಿರಬೇಕು ಎಂಬ ಕುತಂತ್ರ ಮನಸ್ಥಿತಿಯವರಿಂದಾಗಿ ಹಿಂದಿ ಹೆರಿಕೆ ಎಲ್ಲಿಲ್ಲದೆ ಸಾಗುತ್ತಿದೆ. ಇದನ್ನು ನಾವು ಪ್ರಬಲವಾಗಿ ವಿರೋಧಿಸೋಣ ಎಂದು ಟಿ.ಎ.ನಾರಾಯಣಗೌಡ ಕರೆ ಕೊಟ್ಟಿದ್ದಾರೆ.

ಹಿಂದಿ ಹೇರಿಕೆಯು ಕೇವಲ ಭಾಷೆಯ ಹೇರಿಕೆಯ ವಿಷಯ ಮಾತ್ರವಲ್ಲ. ಇದು ಕನ್ನಡಿಗರೂ ದೇಶದ ಇತರ ಭಾಷಿಕರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ. ಇತರ ಭಾಷಾ ಸಮುದಾಯಗಳ ಸಂಸ್ಕೃತಿ, ಪರಂಪರೆಯನ್ನು ನಗಣ್ಯಗೊಳಿಸಲಾಗುತ್ತಿದೆ. ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುತ್ತಿದೆ. ನಾವು ಯಾವ ಭಾಷೆಯ ಅಥವಾ ಭಾಷಿಕರ ವಿರೋಧಿಗಳಲ್ಲ. ಆದರೆ ಸರ್ಕಾರವೇ ಒಂದು ಬದಲಾವಣೆ, ನಮ್ಮದೇ ತೆರಿಗೆ ಹಣ ಬಳಸಿ, ವ್ಯವಸ್ಥಿತವಾಗಿ ನಮ್ಮ ಮೇಲೆ ಹೇರುವುದನ್ನು ಸಹಿಸುವುದು ಸಾಧ್ಯವಿಲ್ಲ. ಹಿಂದಿ ಹೇರಿಕೆಯು ದೇಶದ ಐಕ್ಯತೆಯನ್ನು ಒಡೆಯುತ್ತಿದೆ ಎಂದು ಒಕ್ಕೂಟ ಸರ್ಕಾರವು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಸರ್ಕಾರದ ವಿರುದ್ಧ ದೂರಿದ್ದಾರೆ.

ಸೆಪ್ಟೆಂಬರ್ 14 ರಂದು ರಾಜ್ಯದ ಪ್ರತಿ ಜಿಲ್ಲೆಗಳು, ತಾಲೂಕು, ಹೋಬಳಿ ಕೇಂದ್ರಗಳಲ್ಲಿರುವ ಸಾವಿರಾರು ಬ್ಯಾಂಕ್ ಗಳ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಗೆ ಆಗ್ರಹ ಪತ್ರಗಳನ್ನು ನೀಡಲಾಗುವುದು. ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka News Live: ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ದೇಗುಲಗಳ ತೆರವು ಕಾರ್ಯಕ್ಕೆ ವ್ಯಾಪಕ ವಿರೋಧ

ತಾಜಾ ಸುದ್ದಿ

Click on your DTH Provider to Add TV9 Kannada