ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತರಿಗೆ ನೋಟಿಸ್ ಕೊಟ್ಟು ಸುಮ್ಮನಾದ್ರಾ ಪೊಲೀಸ್?

ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್​ ಮಾಡ್ತಿದ್ದ ಮೂವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿಗಳು ಸಚಿವ ಭೈರತಿ ಸುರೇಶ್ ಆಪ್ತರು ಎಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತರಿಗೆ ನೋಟಿಸ್ ಕೊಟ್ಟು ಸುಮ್ಮನಾದ್ರಾ ಪೊಲೀಸ್?
ಸಚಿವ ಭೈರತಿ ಸುರೇಶ್ ಜೊತೆ ಆರೋಪಿ ಮೌನೇಶ್
Follow us
| Updated By: ಆಯೇಷಾ ಬಾನು

Updated on:Oct 21, 2023 | 1:20 PM

ಬೆಂಗಳೂರು, ಅ.21: ಆಧಾರ್ ಕಾರ್ಡ್, ರೇಶನ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಹಣಕ್ಕಾಗಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸಂಬಂಧ ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರು (CCB Police) ಓರ್ವನನ್ನು ಅರೆಸ್ಟ್ ಮಾಡಿದ್ದರು. ಈಗ ಅದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್​ ಮಾಡ್ತಿದ್ದ ಮೂವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿಗಳು ಸಚಿವ ಭೈರತಿ ಸುರೇಶ್ (Byrathi Suresh) ಆಪ್ತರು ಎಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮೌನೇಶ್, ರಾಘವೇಂದ್ರ, ಭಗತ್ ಎಂಬ ಮೂವರು ಬೆಂಗಳೂರು ನಗರದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಆಧಾರ್ ಕಾರ್ಡ್​, ಪಾನ್​ ಕಾರ್ಡ್​, ವೋಟರ್ ಐಡಿ ಮಾಡ್ತಿದ್ದರು. ಇವರಿಗೆ ಯಾವುದೇ ಕ್ಷೇತ್ರದ ವೋಟರ್ ಐಡಿ ಹಾಗೂ ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಿದ್ದರು. ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗುವುದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿ ಬಂದಿದೆ. ಅಲ್ಲದೆ ಒರಿಜಿನಲ್ ಐಡಿ ಕಾರ್ಡ್ ಎಂದು ಹಣ ಪಡೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತಿದ್ದ ಆರೋಪದ ಮೇಲೆ ಈ ಮೂವರ ವಿರುದ್ಧ ದೂರು ದಾಖಲಾಗಿತ್ತು.

ಸಿಸಿಬಿ ಪೊಲೀಸರು ದಾಳಿ ಮಾಡಿ ಮೌನೇಶ್, ರಾಘವೇಂದ್ರ, ಭಗತ್​ನನ್ನು ವಶಕ್ಕೆ ಪಡೆದಿದ್ರು. ದಾಳಿ ವೇಳೆ ಕಂಪ್ಯೂಟರ್ ಸೇರಿ ಹಲವು ವಸ್ತು ಜಪ್ತಿ ಮಾಡಲಾಗಿತ್ತು. ಆದರೆ ಆರೋಪಿಗಳು ಸಚಿವ ಬೈರತಿ ಸುರೇಶ್ ಅವರ ಆಪ್ತರು ಎಂಬ ಕಾರಣಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸದೆ ಪೊಲೀಸರು ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವ ಭೈರತಿ ಪ್ರಭಾವದಿಂದ ಆರೋಪಿಗಳನ್ನು ಬಂಧಿಸದೆ ಕೇವಲ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ! ನಕಲಿ ದಾಖಲೆ ತಯಾರಿಸ್ತಿದ್ದವನ ಬಂಧನ

ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ತನಿಖೆ ನಡೆಸುತ್ತಾರೆ

ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ನನಗೆ ಗೊತ್ತಿಲ್ಲ, ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಏನಿದ್ಯೊ ಕಾನೂನು ಕ್ರಮ ತಗೋತಾರೆ. ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಎಂದರು. ಇದೇ ವೇಳೆ ಸತೀಶ್ ಜಾರಕಿಹೊಳಿಯದ್ದೇ ಪ್ರತ್ಯೇಕ ಬಣ ಇದ್ಯಾ ಎಂದು ಮಾದ್ಯಮದವರು ಪ್ರಶ್ನೆ ಮಾಡಿದ್ದು ಕಾಂಗ್ರೆಸ್​ ಪಕ್ಷದಲ್ಲಿ ಆ ರೀತಿಯ ಯಾವುದೇ ಬಣಗಳು ಇಲ್ಲ. ಇರೋದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎಂದು ಡಾ.ಪರಮೇಶ್ವರ್ ಉತ್ತರಿಸಿದ್ದಾರೆ.

ನನಗೆ 6 ಕೋಟಿ ಜನರು ಗೊತ್ತು

ಈ ಸಂಬಂಧ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ನನಗೆ 6 ಕೋಟಿ ಜನರು ಗೊತ್ತು. ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನನ್ನ ಆಪ್ತರು ಅನ್ನೋದು ಸರಿಯಲ್ಲ. ನಿತ್ಯ ನೂರಾರು ಜನ ನನ್ನ ಬಳಿ ಫೋಟೋ ತೆಗೆಸಿಕೊಳ್ತಾರೆ. ಯಾರೇ ತಪ್ಪಿತಸ್ಥರು ಆಗಲಿ ಕಾನೂನಿದೆ, ಅದರ ಪ್ರಕಾರ ತನಿಖೆ ಆಗಲಿ. ನನಗೆ ಬೇಕಾದವರು ಅನ್ನೋದಾದ್ರೆ ಎಫ್​ಐಆರ್ ಯಾಕೆ ಮಾಡಬೇಕಿತ್ತು. ಹಾಗೇ ಬಿಡಬಹುದಿತ್ತು ಅಲ್ವೆ? ಎಂದರು.

ಬೆಳಗ್ಗೆ ಎದ್ದಾಗಿನಿಂದ 400-500 ಜನ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಆಸ್ಪತ್ರೆ ಬಳಿ ಹೋಗಿದ್ದೆ ಅಲ್ಲೂ ಅನೇಕರು ಫೋಟೋ ತೆಗೆದುಕೊಂಡ್ರು. ಒಂದು ಸಾವಿಗೆ ಹೋಗಿ ಬಂದೆ, ಆಗಲೂ ಫೋಟೋ ತೆಗೆಸಿಕೊಂಡ್ರು. ಹಳೇ ಸಿಎಂ ಇಂದ ಹಿಡಿದು ನೂರಾರು ಜನರ ಜೊತೆ ನಾನೂ ಫೋಟೋ ಹಿಡಿಸಿಕೊಂಡಿದ್ದೇನೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:54 am, Sat, 21 October 23