ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ (Bengaluru Central Jail) ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಿದ್ದ ಫೋಟೋ ವೈರಲ್ ಆಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಫೋಟೋದಲ್ಲಿ ಆರೋಪಿ ದರ್ಶನ್ (Darshan) ಜೊತೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಕೂಡ ಇದ್ದನು. ಇದೀಗ, ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು (CCB) ದಾಳಿ ಮಾಡಿದ್ದಾರೆ.
ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ ಜೈಲಿನಿಂದಲೇ ಧಮ್ಕಿ ಹಾಕುತ್ತಿದ್ದನು. ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದಾರೆ. ತಪಾಸಣೆ ವೇಳೆ ವಿಲ್ಸನ್ ಗಾರ್ಡನ್ ನಾಗ ಮತ್ತು ಆತನ ಸಹಚರರ ಸುಮಾರು 18 ಮೊಬೈಲ್‌ಫೋನ್ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಮೊಬೈಲ್ ಜೊತೆಗೆ ಡ್ರಗ್ಸ್ ಹಾಗೂ ಹಣವನ್ನೂ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್ ಅರೆಸ್ಟ್
ಆಗಸ್ಟ್ 24 ರಂದು ಸಿಸಿಬಿ ಅಧಿಕಾರಿಗಳು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಏನು ಸಿಗದೆ ಖಾಲಿ ಕೈಯಲ್ಲಿ ಅಧಿಕಾರಿಗಳು ಬರೀಗೈಯಲ್ಲಿ ಮರಳಿದ್ದರು. ದಾಳಿ ಮಾಡಿದ ಮರು ದಿನವೇ (ಆ.25) ರಂದು ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿ ಬಲಗೈಯಲ್ಲಿ ಚಹಾ ಮಗ್ ಮತ್ತು ಎಡಗೈನಲ್ಲಿ ಸಿಗರೇಟ್ ಹಿಡಿದಿರುವ ಫೋಟೋ ವೈರಲ್ ಆಗಿತ್ತು. ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸೂಚನೆ ನೀಡಿದ್ದರು. ತನಿಖೆ ನಡೆಸಿ ವರದಿ ನೀಡಲು ಸಿಸಿಬಿ ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತಗೆ ಸೂಚಿಸಿದ್ದರು.
ರಾಜಾತಿಥ್ಯ ನೀಡಿರುವ ಫೋಟೋ ವೈರಲ್ ಆದ ನಂತರ ಜೈಲು ಅಧಿಕಾರಿಗಳು ಆರೋಪಿ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶೀಫ್ಟ್ ಮಾಡಿದ್ದಾರೆ. ಇನ್ನು, ದರ್ಶನ್ ಸಹಚರರನ್ನು ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನು ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 am, Sun, 15 September 24