ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್, ಆಕೆಯ ಆರೋಗ್ಯದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ಹಣ ಪಡೆದು ವಂಚನೆ ಪ್ರಕರಣದ ಒಂದೊಂದೇ ನಾಟಕ ಬಟಾಬಯಲಾಗುತ್ತಿದ್ದಂತೆಯೇ ಅನಾರೋಗ್ಯದ ನಾಟಕವಾಡ ಆಸ್ಪತ್ರೆ ಸೇರಿದ್ದ ಚೈತ್ರಾ ಕುಂದಾಪುರ ಆರೋಗ್ಯವಾಗಿದ್ದಾಳೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಚೈತ್ರಾಳನ್ನು ಸಿಸಿಬಿ ಪೊಲೀಸರು ಡಿಸ್ಚಾರ್ಜ್ ಮಾಡಿಕೊಂಡು ವಿಚಾರಣೆಗೆ ಕರೆದೊಯ್ದಿದ್ದಾರೆ. ಅಷ್ಟಕ್ಕೂ ಚೈತ್ರಾಳಿಗೆ ಆಗಿದ್ದೇನು? ಏನೆಲ್ಲ ಪರೀಕ್ಷೆ ಮಾಡಲಾಯ್ತು? ಎನ್ನುವ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಡಾಕ್ಟರ್ ಮಾಹಿತಿ ನೀಡಿದ್ದು ಅದು ಈ ಕೆಳಗಿನಂತಿದೆ.

ಬೆಂಗಳೂರು, (ಸೆಪ್ಟೆಂಬರ್ 18): MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿ ಅನಾರೋಗ್ಯದ ನಾಟಕವಾಡಿದ್ದ ಚೈತ್ರಾ ಕುಂದಾಪುರ (Chaitra Kundapura) ಆಸ್ಪತ್ರೆಯಿಂದ(Hospital) ಡಿಸ್ಚಾರ್ಜ್ ಆಗಿದ್ದಾಳೆ. ರೋಗಿಯಂತೆ ಕಳೆದ 3 ದಿನಗಳಿಂದ ನಾಟಕವಾಡುತ್ತಾ ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚೈತ್ರಾ ಕುಂದಾಪುರ ಆರೋಗ್ಯವಾಗಿದ್ದಾಳೆ. ಎಲ್ಲಾ ಮೆಡಿಕಲ್ ರಿಪೋರ್ಟ್ಗಳಲ್ಲಿ ನಾರ್ಮಲ್ ಅಂತ ಬಂದಿದೆ. ಹೀಗಾಗಿ ಇಂದು(ಸೆಪ್ಟೆಂಬರ್ 18) ಸಿಸಿಬಿ ಪೊಲೀಸರು (CCB Police), ಚೈತ್ರಾ ಕುಂದಾಪುರಳನ್ನ ವಿಕ್ಟೋರಿಯಾ ಆಸ್ಪತ್ರೆಯಿಂದ(Victoria Hospital) ಡಿಸ್ಚಾರ್ಜ್ ಮಾಡಿಕೊಂಡು ವಿಚಾರಣೆಗೆ ಕರೆದೊಯ್ದಿದ್ದಾರೆ.
ಚೈತ್ರಾ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು
ಇನ್ನು ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ದಿವ್ಯಪ್ರಕಾಶ್ ಪ್ರತಿಕ್ರಿಯಿಸಿದ್ದು, ಚೈತ್ರಾ ಕುಂದಾಪುರಗೆ ಫಿಟ್ಸ್ ಏನು ಕಂಡು ಬಂದಿಲ್ಲ. ಮೊದಲ ಬಾರಿ ಇಸಿಜಿ ಮಾಡಿದಾಗ ಸ್ವಲ್ಪ ವ್ಯತ್ಯಾಸ ಕಂಡುಬಂದಿತ್ತು. 24 ಗಂಟೆ ಬಳಿಕ ಇಸಿಜಿ ಮಾಡಿದಾಗ ವ್ಯತ್ಯಾಸ ಕಂಡು ಬಂದಿಲ್ಲ. ಸದ್ಯ ಚೈತ್ರಾ ಕುಂದಾಪುರ ಆರೋಗ್ಯವು ನಾರ್ಮಲ್ ಇದೆ. ಫಿಟ್ಸ್ ಪತ್ತೆ ಮಾಡುವುದಕ್ಕೆ ಎಂಆರ್ಐ ಹಾಗೂ ಇಇಜಿ ಸ್ಕ್ಯಾನಿಂಗ್ ಮಾಡಿದ್ದು, ಫಿಟ್ಸ್ ಕಂಡು ಬಂದಿಲ್ಲ. ನ್ಯೂರಾಲಾಜಿಸ್ಟ್ ಕೆಲವು ಮಾತ್ರೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಅಸ್ವಸ್ಥಗೊಂಡ ಕಾರಣ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಲಾಗಿತ್ತು. ಸಂಜೆ ವೇಳೆಗೆ ಆಕೆಯ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ ಕೇರ್ ಸೆಂಟರ್ನ ವಿಶೇಷ ಅಧಿಕಾರಿ ಡಾಕ್ಟರ್ ಬಾಲಾಜಿ ಪೈ ಮಾಹಿತಿ ನೀಡಿದ್ದು, ಚೈತ್ರಾ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಪ್ರಜ್ಞಾಹೀನಳಾಗಿದ್ದಳು. ವೈದ್ಯರು ಸಹ ಎಲ್ಲಾ ಪರೀಕ್ಷೆ ಮಾಡಿ ಚೈತ್ರಾಳಿಗೆ ಫಿಡ್ಸ್ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಬಟ್ಟೆ ತೊಳೆಯಲು ಕೊಟ್ಟ ಸಾಬೂನಿನ ನೊರೆಯನ್ನು ಬಾಯಿಗೆ ಹಾಕಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಸಿಸಿಬಿ ಕಚೇರಿಯಲ್ಲಿರುವ ವಾಶ್ ರೂಮ್ ಅನ್ನು ಪೊಲೀಸರು ಪರಿಶೀಲನೆ ಮಾಡಿದ್ದರು.
ಚೈತ್ರಾ ಆ್ಯಂಡ್ ಗ್ಯಾಂಗ್ ಬಣ್ಣ ಬಣ್ಣ ವೇಷ, ಒಂದೊಂದು ನಾಟಕ ಬಟಾಬಯಲಾಗ್ತಿದೆ. ಚಿಕ್ಕಮಗಳೂರು ಮೂಲದ ಎ2 ಆರೋಪಿ ಮೋಹನ್ ಕುಮಾರ್ ತನ್ನ ನಿಜವಾದ ಹೆಸ್ರು ಮುಚ್ಚಿಟ್ಟು ಗಗನ್ ಕಡೂರು ಅಂತ ಪರಿಚಯ ಮಾಡಿಕೊಂಡಿದ್ದ. ಕಡೂರಿನ ಸ್ನೇಹಿತರು, ಕುಟುಂಬದವರಿಗೆ ಮಾತ್ರ ನಿಜವಾದ ಹೆಸರು ತಿಳಿದಿತ್ತು. ಇಡೀ ಪ್ರಕರಣಕ್ಕೆ ಇವನೇ ಸೂತ್ರಧಾರಿ ಅನ್ನೋದು ಬಯಲಾಗಿದೆ.. ಕಡೂರಿನ ಒಂದು ಸಲೂನ್ ಶಾಪ್ನಲ್ಲಿ ವ್ಯಕ್ತಿಗಳಿಗೆ ಬಿಜೆಪಿ ಕೇಂದ್ರ ನಾಯಕರಂತೆ ಮೇಕಪ್ ಮಾಡಿಸಿ ಇಡೀ ಪ್ರಕರಣವನ್ನು ಇವನೇ ನಿಯಂತ್ರಿಸಿದ್ದ ಎನ್ನಲಾಗಿದೆ.
ಸದ್ಯ ಇದೇ ಕೇಸ್ನಲ್ಲಿ ಈವರೆಗೂ 8 ಆರೋಪಿಗಳು ಅರೆಸ್ಟ್ ಆಗಿದ್ದು, ಕೇಸ್ ಹಿಂದೆ ಯಾರ್ಯಾರು ಇದ್ದಾರೆ ಎನ್ನುವ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಆದ್ರೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಅರೆಸ್ಟ್ ಆದ ಬಳಿಕವೇ ಅಸಲಿ ಕಹಾನಿ ಹೊರಬರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:53 pm, Mon, 18 September 23



