ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನಮಿಡಿಯುವ ಘಟನೆಯೊಂದು ದಾಖಲಾಗಿದೆ. ಹೆತ್ತ ತಾಯಿ ಮತ್ತು ಸಾಕು ತಾಯಿಯ ನಡುವೆ ಮಗುವಿನ ಸುಪರ್ದಿಗಾಗಿನ ವಾತ್ಸಲ್ಯದ ಹೋರಾಟ ನಡೆದಿದೆ. ಎರಡು ಧರ್ಮದ ಮಹಿಳೆಯರ ನಡುವೆ ಮಗುವಿಗಾಗಿ ಕಾನೂನು ಹೋರಾಟ ನಡೆದಿದ್ದು ಅಂತಿಮವಾಗಿ ಆ ತಾಯಂದಿರು ನಿಲುವೊಂದನ್ನು ತೆಗೆದುಕೊಂಡಿದ್ದಾರೆ. ಹಾಗಾದ್ರೆ ಮಗು ಯಾರ ಪಾಲಾಯ್ತು ಅನ್ನೋ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.
ಒಂದೂವರೆ ವರ್ಷದ ಮಗುವಿಗಾಗಿ ಹೈಕೋರ್ಟ್ ನಲ್ಲಿ ಹೋರಾಟ ನಡೆದಿದೆ. ಚಾಮರಾಜಪೇಟೆಯ ಆಸ್ಪತ್ರೆಯೊಂದರಿಂದ ಹುಸ್ನಾ ಬಾನು ಎಂಬಾಕೆಯ ಮಗುವನ್ನು ಕಳುವು ಮಾಡಲಾಗಿತ್ತು. ನಂತರ ಆ ಮಗು ಹಲವು ಕೈ ಬದಲಿಸಿ ಕೊನೆಗೆ ತಲುಪಿದ್ದು ಅನುಪಮಾ ಎಂಬಾಕೆಯ ಮಡಿಲಿಗೆ. ಮಗುವಿಗೆ ಅದ್ವಿಕ್ ಎಂಬ ಚೆಂದದ ಹೆಸರಿಟ್ಟು ಲಾಲನೆ ಪಾಲನೆ ಮಾಡ್ತಿದ್ದ ತಾಯಿಗೆ ಅದೊಂದು ದಿನ ಪೊಲೀಸ್ ನೋಟಿಸ್ ಬಂದಾಗಲೇ ಸತ್ಯ ತಿಳಿದದ್ದು. ತಾನು ಲಾಲನೆ ಪಾಲನೆ ಮಾಡ್ತಿದ್ದ ಮಗು ಹುಸ್ನ್ ಬಾನು ಎಂಬಾಕೆಯ ಮೂರನೇ ಮಗು ಎಂದು ತಿಳಿದ ಅನುಪಮಾ ಕಂಗಾಲಾಗಿದ್ರು. ಇತ್ತ ಹೆತ್ತ ತಾಯಿ ಹುಸ್ನಾ ಬಾನು ತನ್ನ ಮಗು ತನಗೇ ಸೇರಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ರೆ, ಸಾಕು ತಾಯಿ ಮಗು ತನಗೇ ಇರಲೆಂದು ಹೈಕೋರ್ಟ್ ಮೊರೆ ಹೋದರು. ನ್ಯಾ. ಕೃಷ್ಣ ಎಸ್. ದೀಕ್ಷಿತ್ ರ ಮುಂದೆ ರಿಟ್ ಅರ್ಜಿಗಳ ವಿಚಾರಣೆ ನಡೆಯಿತು.
ಹೆತ್ತ ತಾಯಿ ವಕೀಲರ ವಾದ
ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಮಗುವಿಗಾಗಿ ದೂರು ನೀಡಿದ್ದೆವು. ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದೆವು. ಈಗ ಮಗು ಸಾಕುತಾಯಿಯ ಬಳಿ ಸಿಕ್ಕಿದೆ. ಡಿಎನ್ಎ ಪರೀಕ್ಷೆ ಯಲ್ಲೂ ಮಗು ನಮ್ಮದೆಂದಾಗಿದೆ. ಹೀಗಾಗಿ ಮಗುವನ್ನು ನಮ್ಮ ಸುಪರ್ದಿಗೆ ಕೊಡಿಸಿ ಎಂದು ಹೆತ್ತ ತಾಯಿ ಹುಸ್ನಾ ವಕೀಲರ ಬಳಿ ವಾದ ಮಾಡಿದ್ದಾರೆ.
ನಾನು ಈ ಘಟನೆಯಲ್ಲಿ ಪೂರ್ಣ ಅಮಾಯಕಿ. ಮಕ್ಕಳಿಲ್ಲದ ನಮಗೆ ಅನಿರೀಕ್ಷಿತವಾಗಿ ಈ ಮಗು ನಮ್ಮ ಕೈ ಸೇರಿತ್ತು. ಮಗುವನ್ನು ಹಲವು ತಿಂಗಳ ಕಾಲ ನಾನು ಪ್ರೀತಿಯಿಂದ ಲಾಲನೆ, ಪಾಲನೆ ಮಾಡಿದ್ದೇನೆ. ಇನ್ನು ಮುಂದೆಯೂ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಮಗು ನನಗೆ ಹೊಂದಿಕೊಂಡಿದೆ. ನನ್ನಿಂದ ದೂರ ಮಾಡಿದರೆ ಮಗುವಿಗೂ ನೋವಾಗುತ್ತದೆ. ಹೆತ್ತ ತಾಯಿಗೆ ಇನ್ನೂ ಎರಡು ಮಕ್ಕಳಿವೆ. ನನಗೆ ಮಕ್ಕಳಿಲ್ಲದಿರುವುದರಿಂದ ಮಗುವನ್ನು ನನಗೇ ಉಳಿಸಿ. ನನ್ನ ಸುಪರ್ದಿಗೇ ನೀಡಿ ಎಂದು ಮಗುವಿನ ಸಾಕು ತಾಯಿ ಅನುಪಮಾ ಅಂಗಲಾಚಿದ್ದಾರೆ.
ಮಗು ಇನ್ನೂ ಸಣ್ಣದಿದೆ. ಆ ಮಗುವಿಗೆ ಎದೆಹಾಲಿನ ಅಗತ್ಯವಿದೆ. ನನಗೂ ಎದೆ ಹಾಲುಣಿಸುವ ಹಕ್ಕಿದೆ. ಮಗುವನ್ನು ಸಾಕು ತಾಯಿ ಈವರೆಗೂ ನೋಡಿಕೊಂಡಿರಬಹುದು. ಆದರೆ ಮಗು ನಮ್ಮದು. ಎದೆಹಾಲಿನಿಂದ ಮಗು ವಂಚಿತವಾಗಬಾರದು. ಹೀಗಾಗಿ ಮಗುವನ್ನು ನಮಗೆ ಒಪ್ಪಿಸಿ ಎಂದು ಹೆತ್ತ ತಾಯಿ ಮೊರೆ ಹಿಟ್ಟಿದ್ದಾರೆ.
ದೇವಕಿಗೆ ಕೃಷ್ಣ ಮಗನಾಗಿದ್ದರೂ ಯಶೋದೆಗೆ ಮಗುವನ್ನು ನೀಡಿರುವ ಉಲ್ಲೇಖ ನಮ್ಮ ಪುರಾಣಗಳಲ್ಲಿದೆ. ಮಗು ನಮ್ಮ ಬದುಕಿನ ಭಾಗವಾಗಿದೆ. ಮಗುವಿನ ಹಿತಾಸಕ್ತಿಗಾಗಿ ನಮ್ಮ ಸುಪರ್ದಿಗೆ ಮಗುವನ್ನು ನೀಡಿ ಎಂದು ಸಾಕು ತಾಯಿ ವಾದ ಮಾಡಿದ್ದಾರೆ.
ಇದು ಮಗುವಿಗಾಗಿ ತಂದೆ ತಾಯಿ ನಡುವಿನ ಹೋರಾಟವಲ್ಲ. ಹೀಗಾಗಿ ಮಗುವಿನ ಹಿತಾಸಕ್ತಿಯ ಪ್ರಶ್ನೆ ಇಲ್ಲಿಲ್ಲ. ಸಾಕು ತಾಯಿ, ಹೆತ್ತ ತಾಯಿಯ ನಡುವೆ ಕಾನೂನಿನ ಪ್ರಶ್ನೆ ಬಂದಾಗ ಹೆತ್ತ ತಾಯಿಗೇ ಮಾನ್ಯತೆ ನೀಡಬೇಕು ಎಂದು ಹೆತ್ತ ತಾಯಿ ವಾದ ಮಂಡಿಸಿದ್ದಾರೆ.
ಕೊನೆಗೆ ಹೆತ್ತ ತಾಯಿ ಮತ್ತು ಸಾಕು ತಾಯಿಯ ವಾದ-ವಿವಾದ ಆಲಿಸಿದ ಹೈಕೋರ್ಟ್ ನ್ಯಾ.ಕೃಷ್ಣ ಎಸ್. ದೀಕ್ಷಿತ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣ. ವೈದ್ಯಕೀಯ ವಿಜ್ಞಾನವೂ ಮಗುವಿಗೆ ತಾಯಿಯ ಹಾಲಿಗಿಂತ ಪೋಷಣೆ ಬೇರೆ ಇಲ್ಲ ಎನ್ನುತ್ತದೆ. ಎದೆ ಹಾಲುಣಿಸುವಾಗ ತಾಯಿ ಮಗುವಿನ ಸಂವೇದನೆಗಳೂ ವಿನಿಮಯವಾಗುತ್ತದೆ. ಹೀಗಾಗಿ ಸ್ತನ್ಯಪಾನವು ತಾಯಿಯ ಬೇರ್ಪಡಿಸಲಾಗದ ಹಕ್ಕು. ಎದೆಹಾಲು ಉಣಿಸುವ ಹಕ್ಕು ಹೆತ್ತ ತಾಯಿಗಿದೆ. ಎದೆಹಾಲು ಕುಡಿಯುವ ಹಕ್ಕು ಮಗುವಿಗೂ ಇದೆ. ಸಂವಿಧಾನದ 21ನೇ ವಿಧಿಯಡಿ ಈ ಹಕ್ಕು ಜೀವಿಸುವ ಹಕ್ಕಿನ ವಿಸ್ತೃತ ರೂಪ.
ಈ ವಿಚಾರದಲ್ಲಿ ಪೌರಾಣಿಕ ದೃಷ್ಟಾಂತ ಸರಿಹೊಂದುವುದಿಲ್ಲ. ಮಗು ತನ್ನದಲ್ಲದ ತಪ್ಪಿಗೆ ತಾಯಿಯ ಎದೆಹಾಲುಣ್ಣಲು ಸಾಧ್ಯವಾಗಿಲ್ಲ. ಹೆತ್ತ ತಾಯಿಗೆ ಮಗುವಿಗೆ ಹಾಲುಣಿಸುವ ಅವಕಾಶ ದೊರೆತಿಲ್ಲ; ನಾಗರಿಕ ಸಮಾಜದಲ್ಲಿ ಇಂಥ ಪ್ರಕರಣಗಳು ಘಟಿಸಬಾರದು. ಇರುವರು ಇಲ್ಲದವರ ನಡುವೆ ಹಂಚಿಕೊಳ್ಳಲು ಮಕ್ಕಳು ಚರಾಸ್ತಿಯಲ್ಲ ಎಂದು ಅಭಿಪ್ರಾಯ ಪಟ್ಟರು. ಆದರೆ ಈ ವೇಳೆ ಹೆತ್ತ ತಾಯಿಗೆ ಮಗು ನೀಡಲು ಸಾಕು ತಾಯಿ ಒಪ್ಪಿಗೆ ನೀಡಿದರು. ಸಾಕು ತಾಯಿಯಿಂದ ಹೆತ್ತ ತಾಯಿಗೆ ಮಗು ಹಸ್ತಾಂತರವೂ ಆಯಿತು. ಹುಸ್ನಾ ಬಾನುವಿಗೆ ಹಸ್ತಾಂತರಿಸಿದ ಅನುಪಮಾ ರನ್ನು ನ್ಯಾ. ಕೃಷ್ಣ ದೀಕ್ಷಿತ್ ಶ್ಲಾಘಿಸಿದರು. ಮಗು ನೊಡಬೇಕೆನ್ನಿಸಿದಾಗ ಬರುವಂತೆ ಹೆತ್ತ ತಾಯಿ ಸಾಕು ತಾಯಿಗೆ ಆಹ್ವಾನ ನೀಡಿದರು. ಎರಡು ಧರ್ಮದ ಮಹಿಳೆಯರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಪ್ರಕರಣ ಇತ್ಯರ್ಥಪಡಿಸಿದರು.
ವರದಿ: ರಮೇಶ್ ಮಹಾದೇವ್
ಇದನ್ನೂ ಓದಿ: Newborn Baby Stolen Case; ಒಂದು ವರ್ಷದ ಬಳಿಕ ಕೊನೆಗೂ ಸಿಕ್ಕಿಬಿದ್ದ ಮಕ್ಕಳ ಕಳ್ಳಿ
ಚಾಮರಾಜಪೇಟೆ ಮಗು ಕಳ್ಳತನ ಪ್ರಕರಣ; ಡಿಎನ್ಎ ಟೆಸ್ಟ್ ಮೂಲಕ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಖಾಕಿ
Published On - 11:20 am, Thu, 30 September 21