ಬೆಂಗಳೂರು: ಚಾಮರಾಜಪೇಟೆ (Chamrajpet) ಈದ್ಗಾ ಮೈದಾನ (Idgah Maidan) ವಿವಾದಕ್ಕೆ ಸಂಬಂಧಿಸಿದಂತೆ ಜುಲೈ 12ರಂದು ಚಾಮರಾಜಪೇಟೆಯನ್ನು ಬಂದ್ ಮಾಡುವುದು ನಿಶ್ಚಿತ ಎಂದು ಬೆಂಗಳೂರಿನಲ್ಲಿ (Bengaluru) ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಸಂಚಾಲಕ ರುಕ್ಮಾಂಗದ ಹೇಳಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು ಮಂಗಳವಾರದ ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಶಾಸಕ ಜಮೀರ್ ಅಹ್ಮದ ಖಾನ್ (Zameer Ahmed) ದಾರಿ ತಪ್ಪಿದ ಮಗನ ರೀತಿ ಆಗಿದ್ದಾರೆ. ಬಿಎಸ್ವೈ ಸಿಎಂ ಆದರೆ ವಾಚ್ಮೆನ್ ಆಗುತ್ತೇನೆ ಅಂದಿದ್ದರು. ಆಗಲಿಂದಲೂ ಶಾಸಕ ಜಮೀರ್ ಮಾತಿನಂತೆ ನಡೆದುಕೊಂಡಿಲ್ಲ ಎಂದರು.
4 ಬಾರಿ ಶಾಸಕರಾಗಿದ್ದರೂ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ನಮ್ಮ ಸಂಘಟನೆಯಿಂದ ನಿನ್ನೆ (ಜುಲೈ 8) ರಂದು ನಡೆದ ಸಭೆಗೆ ಯಾರೂ ಹೋಗಿರಲಿಲ್ಲ. ಬಂದ್ಗೆ ಬೆಂಬಲಿಸುವಂತೆ ಎಲ್ಲರಲ್ಲೂ ಮನವಿ ಮಾಡಿದ್ದೇವೆ. ಒಂದು ದಿನ ತ್ಯಾಗ ಮಾಡುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಾಮರಾಜಪೇಟೆ ಮೈದಾನ ಆಟದ ಮೈದಾನವಾಗಿ ಉಳಿಯಬೇಕು. ಸರ್ಕಾರ, ಬಿಬಿಎಂಪಿಯ ಸ್ವತ್ತಾಗಿಯೇ ಉಳಿಸಬೇಕೆಂದು ಆಗ್ರಹಿಸಿದ್ದಾರೆ.
ನನ್ನ ಪ್ರಾಣ ಹೋಗುವವರೆಗೂ ಮೈದಾನ ತೆಗೆಯಲು ಸಾಧ್ಯವಿಲ್ಲ: ಶಾಸಕ ಜಮೀರ್ ಅಹಮದ್
ಶುಕ್ರವಾರ (ಜುಲೈ 8) ರಂದು ಚಾಮರಾಜಪೇಟೆಯ ವೆಂಕಟಾರಾಮ್ ಕಲಾ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕ ಜಮೀರ್ ಅಹಮದ್ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಆಟವಾಡಲು ಮಕ್ಕಳಿಗೆ ಅವಕಾಶ ಕೊಡುವುದಿಲ್ಲ ಎಂದು ಯಾರೂ ಹೇಳಿಲ್ಲ. ನನ್ನ ಪ್ರಾಣ ಹೋಗುವವರೆಗೂ ಮೈದಾನ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಸಭೆಯಲ್ಲಿ ಎಲ್ಲರೂ ಆಟದ ಮೈದಾನ ಉಳಿಸಬೇಕು ಎಂದು ಸಭೆ ಮಾಡಿ ಒತ್ತಾಯಿಸಿದರು. ಆಟದ ಮೈದಾನ ಎಲ್ಲಿಗೆ ಹೋಗಿದೆ? ಆಟದ ಮೈದಾನವನ್ನ ಯಾರು ತೆಗೆದಿದ್ದಾರೆ? ಎಂಎಲ್ಎ, ಬಿಬಿಎಂಪಿ, ವಕ್ಫ್ ಬೋರ್ಡ್ ಯಾರಾದರೂ ಇಲ್ಲಿ ಆಟದ ಮೈದಾನ ಇರುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಮೀರ್ ಅಹಮದ್ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಮಾಜಿ ಕಾರ್ಪೊರೇಟರ್ಗಳಾದ ಕೋಕಿಲಾ ಚಂದ್ರಶೇಖರ್, ಸುಜಾತ ಡಿ.ಸಿ ರಮೇಶ್, ಬಿ.ಟಿ.ಶ್ರೀನಿವಾಸಮೂರ್ತಿ, ಚಂದ್ರಶೇಖರ್, ಅಲ್ತಾಫ್ ಖಾನ್ ಸೇರಿದಂತೆ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಮಾತನಾಡಿ, ನನ್ನ ಗೆಲುವಿಗೆ ಕ್ಷೇತ್ರದ ಎಲ್ಲ ವರ್ಗದ ಸಹಕರಿಸಿದ್ದಾರೆ. ಕೇವಲ ಒಂದೇ ಧರ್ಮದ ಪರ ನಾನು ನಿಲ್ಲಲು ಆಗುವುದಿಲ್ಲ. ಈ ಮೈದಾನವನ್ನು ಆಟದ ಮೈದಾನವಾಗಿ ಉಳಿಸುವುದಾಗಿ ಜಮೀರ್ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ದರು.
Published On - 3:05 pm, Sat, 9 July 22