ಬೆಂಗಳೂರು, ಸೆಪ್ಟೆಂಬರ್ 12: ಸಿಲಿಕಾನ್ ಸಿಟಿ ಬೆಂಗಳೂರಿನ ಪೊಲೀಸರು ಸರಿಯಾದ ಕಾರ್ಯಾಚರಣೆ ಮಾಡಿ, ಐನಾತಿ ಸೈಬರ್ ಕಳ್ಳನನ್ನು ಅಂದರ್ ಮಾಡಿದ್ದಾರೆ. ಚಿತ್ತೂರು ಮೂಲದ ಬಿ ಟೆಕ್ ಪದವೀಧರ ಸೈಬರ್ ಹ್ಯಾಕರ್ನನ್ನು (Cyber Hacker) ಬಂಧಿಸಿ, ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಆಂಧ್ರಪ್ರದೇಶ ಮೂಲದ ಲಕ್ಷ್ಮೀಪತಿ ಎಂಬಾತನನ್ನು (Chittoor B Tech graduate) ಬೆಂಗಳೂರು ಆಗ್ನೇಯ ಸೈಬರ್ ಪೊಲೀಸರು (Bengaluru CEN Police) ಅರೆಸ್ಟ್ ಮಾಡಿದ್ದಾರೆ. ಈತನಿಂದ 4.16 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ, 11 ಲಕ್ಷ ನಗದು, 7 ಬೈಕ್ ಜಪ್ತಿ ಮಾಡಲಾಗಿದೆ.
ಆಂಧ್ರ ಪ್ರದೇಶದ IIIT ಒಂಗೋಲ್ ನಲ್ಲಿ ಬಿ ಟೆಕ್ ಪದವಿ ಪಡೆದಿದ್ದ ಲಕ್ಷ್ಮೀಪತಿ ವೆಬ್ಸೈಟ್, ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂ. ವಂಚನೆ ಮಾಡಿದ್ದಾನೆ. ಬಿ ಟೆಕ್ ಪದವಿ ಬಳಿಕ ದುಬೈಗೆ ಹಾರಿ, ಅಲ್ಲಿ ಒಂದಷ್ಟು ಕೆಲಸ ಮಾಡಿ ಬಂದಿದ್ದ ಲಕ್ಷ್ಮೀಪತಿ. ಬೆಂಗಳೂರಿಗೆ ಬಂದವನೆ ಇಲ್ಲಿ ಟೆಕ್ ಕಂಪನಿಯಯಲ್ಲಿ ಉದ್ಯೋಗದಲ್ಲಿದ್ದ. ಆಸಾಮಿ ಕಾಲೇಜು ದಿನಗಳಲ್ಲೆ ಹ್ಯಾಕಿಂಗ್ ಪ್ರಾವೀಣ್ಯತೆ ಪಡೆದಿದ್ದ. ಲೀಗಲ್ ಅಂಡ್ ಇಲ್ಲೀಗಲ್ ಹ್ಯಾಕ್ ಡೇಟಾ ಅನಲೈಸ್ ಬಗ್ಗೆ ತಿಳಿದುಕೊಂಡಿದ್ದ. ಕಳೆದ ಐದು ತಿಂಗಳಿಂದ ಈ ಕೃತ್ಯ ಎಸಗುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಿವಾರ್ಡ್ ಪಾಯಿಂಟ್ ವೆಬ್ಸೈಟ್ ಹ್ಯಾಕ್ ಮಾಡಿದ್ದ ಲಕ್ಷ್ಮೀಪತಿ, ಗ್ರಾಹಕರಿಗೆ ನೀಡುವ ವೋಚರ್ ಹ್ಯಾಕ್ ಮಾಡಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಸಂಬಂಧ ರಿವಾರ್ಡ್ 360 ಕಂಪನಿ ನಿರ್ದೇಶಕರಿಂದ ಆಗ್ನೇಯ ಸೈಬರ್ ಸಿಇಎನ್ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ದೂರು ಪಡೆದು ತನಿಖೆ ನಡೆಸಿದ ಆಗ್ನೇಯ ಸಿಇಎನ್ ಠಾಣೆ ಪೊಲೀಸರು ತನಿಖೆ ವೇಳೆ ಆಂಧ್ರ ಮೂಲದ ವ್ಯಕ್ತಿಯಿಂದ ಕುಕೃತ್ಯ ನಡೆದಿದೆ ಎಂಬುದನ್ನು ಖಾತ್ರಿ ಪಡೆಸಿಕೊಂಡಿದ್ದಾರೆ. ಆರೋಪಿ ಲಕ್ಷ್ಮೀಪತಿ ಹ್ಯಾಕ್ ಮಾಡಿ ಗುಡ್ಡೆ ಹಾಕಿದ್ದ ಎಲ್ಲ ಚಿನ್ನ, ಬೆಳ್ಳಿ, ಹಣವನ್ನ ಮನೆಯಲ್ಲೆ ಇಟ್ಟಿಕೊಂಡಿದ್ದ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ