ಈ ಬಾರಿಯ ಗಣೇಶೋತ್ಸವವನ್ನ ಸನಾತನ ಧರ್ಮ ಜನಜಾಗೃತಿಗೆ ಮೀಸಲು: ಹಿಂದೂ ಪರ ಸಂಘಟನೆಗಳು ಕರೆ
ಇಂದು ಸನಾತನ ಧರ್ಮವನ್ನೇ ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಪ್ರತಿಯೊಂದು ಗಣೇಶೋತ್ಸವ ಮಂಡಳಿಗಳು ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕು. ಜನಜಾಗೃತಿ ಜೊತೆಗೆ ಐಕ್ಯತೆಯನ್ನು ಮೂಡಿಸುವ ಕೆಲಸ ಮಾಡೋಣ ಎಂದು ಹಿಂದೂ ಜನಜಾಗೃತಿ ಅಧ್ಯಕ್ಷ ಮೋಹನ್ ಗೌಡ ಕರೆ ಕೊಟ್ಟಿದ್ದಾರೆ.
ಬೆಂಗಳೂರು ಸೆ.12: ಸನಾತನ ಧರ್ಮದ (Sanatan Dharma) ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಅವಹೇಳನಾಕಾರಿ ಹೇಳಿಕೆ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಮಧ್ಯೆಯೇ ಗಣೇಶೋತ್ಸವದಲ್ಲಿ (Ganesh Chaturthi) ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನ ಹಿಂದೂ ಪರ ಸಂಘಟನೆಗಳು ಮುಂದಾಗಿವೆ. ಈ ಬಾರಿಯ ಗಣೇಶೋತ್ಸವ ಸನಾತನ ಜನಜಾಗೃತಿಗೆ ಮೀಸಲು ಎಂದು ಗಣೇಶೋತ್ಸವ ಮಂಡಳಿಗಳು ಕರೆಕೊಟ್ಟಿವೆ.
ಈ ಬಗ್ಗೆ ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಅಧ್ಯಕ್ಷ ಮೋಹನ್ ಗೌಡ ಟಿವಿ9 ಜೊತೆ ಮಾತನಾಡಿ ಸನಾತನ ಧರ್ಮದ ಉಳಿವಿಗಾಗಿ ಬಾಲಗಂಗಾಧರ ತಿಲಕರು ಸಾರ್ವಜನಿಕರ ಗಣೇಶೋತ್ಸವವನ್ನು ಶುರು ಮಾಡಿದರು. ಆದರೆ ಇಂದು ಸನಾತನ ಧರ್ಮವನ್ನೇ ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಪ್ರತಿಯೊಂದು ಗಣೇಶೋತ್ಸವ ಮಂಡಳಿಗಳು ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕು. ಜನಜಾಗೃತಿ ಜೊತೆಗೆ ಐಕ್ಯತೆಯನ್ನು ಮೂಡಿಸುವ ಕೆಲಸ ಮಾಡೋಣ ಎಂದು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: Bengaluru Ganesh Chaturthi: ಗಣೇಶ ಪೆಂಡಾಲ್ಗಳಿಗೆ ಅನುಮತಿ ನೀಡಲು 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆದ ಬಿಬಿಎಂಪಿ
ಇನ್ನು ವಿಜಯಪುರದಲ್ಲಿನ “ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ “ಸನಾತನ ಹಿಂದೂ ವೇದಿಕೆ” ಎಂದು ನಾಮಕರಣ ಮಾಡಲಾಗುವುದು. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ. ಅಲ್ಲದೇ ವಿಜಯಪುರದ ಪ್ರತಿ ಗಜಾನನ ಮಂಡಳಿಗಳಿಗೆ ಸ್ವಾತಂತ್ರ ವೀರ ಸಾವರ್ಕರ್ ಭಾವಚಿತ್ರ ಹಾಗೂ ತಲಾ 5,000 ರೂ. ದೇಣಿಗೆ ನೀಡಲಾಗುವುದು” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ (ಟ್ವಿಟರ್) ಖಾತೆ ಮೂಲಕ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:38 am, Tue, 12 September 23