ರಾಜ್ಯ ಸಭೆಗೆ ಆಯ್ಕೆಯಾದವರಿಗೆ ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಅಭಿನಂದನೆ, ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ ಎಂದ ವೀರೇಂದ್ರ ಹೆಗ್ಗಡೆ

ನಾಲ್ವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯ ಸಭೆಗೆ ಆಯ್ಕೆಯಾದವರಿಗೆ ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಅಭಿನಂದನೆ, ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ ಎಂದ ವೀರೇಂದ್ರ ಹೆಗ್ಗಡೆ
ಸಿಎಂ ಬಸವರಾಜ ಬೊಮ್ಮಾಯಿ
TV9kannada Web Team

| Edited By: Ayesha Banu

Jul 06, 2022 | 10:56 PM

ಬೆಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Veerendra Heggade), ಖ್ಯಾತ ಅಥ್ಲೀಟ್ ಪಿ.ಟಿ. ಉಷಾ (PT Usha) ಮತ್ತು ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ಗಾಯಕ ಇಳಯರಾಜ (Ilayaraja) ಹಾಗೂ ವಿಜಯೇಂದ್ರ ಪ್ರಸಾದ್‌ (Vijayendra Prasad) ಸೇರಿದಂತೆ ನಾಲ್ವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧ ಆಯಾಮಗಳ ಜನಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವ ಶ್ರೀ ಹೆಗ್ಗಡೆಯವರ ಅನುಭವ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಸಚಿವ ಆರಗ ಜ್ಞಾನೇಂದ್ರ ರಾಜ್ಯಸಭೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ. ನಡ್ಡಾಗೆ ಅಭಿನಂದನೆ ತಿಳಿಸಿದ್ದಾರೆ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನದಿಂದ ರಾಜ್ಯದ ಜನತೆಗೆ ಸಂತಸವಾಗಿದೆ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವ ಸಮಾಜಸೇವಾ ಕಾರ್ಯಗಳಿಂದ, ಗ್ರಾಮೀಣ ಜನತೆಯ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಬಲೀಕರಣ ಕಾರ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ. ನೇಮಕಕ್ಕೆ ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಅಭಿನಂದನೆ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ ಇನ್ನು ರಾಜ್ಯಸಭೆಗೆ ನಾಮ ನಿರ್ದೇಶನವಾದ ಬಗ್ಗೆ ಸಂತಸ ಹಂಚಿಕೊಂಡಿರುವ ವೀರೇಂದ್ರ ಹೆಗ್ಗಡೆಯವರು ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ ಎಂದಿದ್ದಾರೆ. ರಾಜ್ಯಸಭೆ ಸದಸ್ಯತ್ವಕ್ಕೆ ನನ್ನನ್ನು ನಾಮ ನಿರ್ದೇಶನ ಮಾಡುವ ಬಗ್ಗೆ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ನಾವು ಮಾಡಿದ ಸೇವೆಯನ್ನು ಗುರುತಿಸಿ, ನನ್ನನ್ನು ಹತ್ತಿರದಿಂದ ಗಮನಿಸಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆಂದು ಭಾವಿಸುವೆ. ನನಗೀಗ 74 ವರ್ಷ ವಯಸ್ಸಾಗಿದೆ. ನನ್ನ ವಯಸ್ಸು ಮತ್ತು ಅನುಭವವನ್ನು ರಾಜ್ಯಸಭೆಯ ಮೂಲಕ ದೇಶಕ್ಕಾಗಿ ಬಳಸಲು ಒಂದು ವೇದಿಕೆ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಜನೆಯಿದೆ. ಈಗಾಗಲೇ ಕರ್ನಾಟಕದಲ್ಲಿ ಆರು ಸಾವಿರ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆದಿದ್ದೇವೆ. ಶೀಘ್ರದಲ್ಲೇ ಇನ್ನೂ ನಾಲ್ಕು ಸಾವಿರ ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ. 30. ಲಕ್ಷ ಇ-ಶ್ರಮ ಕಾಡ್೯ಗಳನ್ನು ವಿತರಿಸಲಾಗಿದೆ. ಕೃಷಿ ವಿಮೆ ಯೋಜನೆಯೂ ಸೇರಿದಂತೆ ಸರಕಾರದ ಅನೇಕ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಗ್ರಾಮಾಭಿವೃದ್ಧಿ ಯೋಜನೆಯನ್ನು ದೇಶವ್ಯಾಪಿ ಜನರಿಗೆ ತಲುಪಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada