Chamarajpet Bandh: ಈದ್ಗಾ ಮೈದಾನ ವಿವಾದ; ಬಿಬಿಎಂಪಿ ಮಾಜಿ ಸದಸ್ಯರು, ದೇಗುಲ ಸಮಿತಿಗಳ ಸಭೆ ಕರೆದ ಶಾಸಕ ಜಮೀರ್ ಅಹ್ಮದ್
ಬಂದ್ ನಿರ್ಧಾರ ಕೈಬಿಡುವಂತೆ ಮನವೊಲಿಸಲು ಶಾಸಕ ಜಮೀರ್ ಅಹ್ಮದ್ ಸತತ ಪ್ರಯತ್ನ ನಡೆಸುತ್ತಿದ್ದಾರೆ
ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ (Chamrajpet Idgah Maidan) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (Bruhat Bengaluru Mahanagara Palike – BBMP) ಮಾಜಿ ಸದಸ್ಯರ ಸಭೆ ನಡೆಸಲು ಶಾಸಕ ಜಮೀರ್ ಅಹ್ಮದ್ ಮುಂದಾಗಿದ್ದಾರೆ. ನಾಳೆ (ಜುಲೈ 8) ಬೆಳಿಗ್ಗೆ 10 ಗಂಟೆಗೆ ಸಭೆಯ ಸಮಯ ನಿಗದಿಪಡಿಸಲಾಗಿದೆ. ಈದ್ಗಾ ಮೈದಾನ ವಿಚಾರದಲ್ಲಿ ಬಿಬಿಎಂಪಿ ನಡೆದುಕೊಳ್ಳುತ್ತಿರುವ ರೀತಿಯನ್ನು ವಿರೋಧಿಸಿ, ಚಾಮರಾಜಪೇಟೆಯ ಸ್ಥಳೀಯರು ಜುಲೈ 12ರಂದು ಬಂದ್ಗೆ (Chamarajpet Bandh) ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರಿಗಳ ಮನವೊಲಿಸಲು ಜಮೀರ್ ಅಹ್ಮದ್ ಮುಂದಾಗಿದ್ದಾರೆ.
ಈ ಹಿಂದೆ ಸ್ಥಳೀಯರು ಸಭೆ ನಡೆಸಿದ ನಂತರ ಬಂದ್ ದಿನಾಂಕ ಘೋಷಿಸಿದ್ದರು. ಬಂದ್ ನಿರ್ಧಾರ ಕೈಬಿಡುವಂತೆ ಮನವೊಲಿಸಲು ಶಾಸಕ ಜಮೀರ್ ಅಹ್ಮದ್ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಮಾಜಿ ಪಾಲಿಕೆ ಸದಸ್ಯರ ಜೊತೆ ಶಾಸಕ ಜಮೀರ್ ಅಹ್ಮದ್ ಸಭೆ ಕರೆದಿದ್ದಾರೆ. ಕ್ಷೇತ್ರದ 7 ವಾರ್ಡ್ನ ಮಾಜಿ ಕಾರ್ಪೊರೇಟರ್ಗಳನ್ನು ಜಮೀರ್ ಅಹ್ಮದ್ ಸಭೆಗೆ ಆಹ್ವಾನಿಸಿದ್ದಾರೆ.
ಚಾಮರಾಜಪೇಟೆಯ ವೆಂಕಟರಾಮ್ ಕಲಾ ಭವನದಲ್ಲಿ ಸಭೆ ನಡೆಯಲಿದೆ. ಕೇವಲ ಮೈದಾನ ವಿಚಾರ ಚರ್ಚಿಸಲು ಮಾತ್ರವೇ ಸಭೆ ಸೀಮಿತವಾಗಿಲ್ಲ. ಬಂದ್ಗೆ ಕರೆ ಕೊಟ್ಟ ಒಕ್ಕೂಟವನ್ನು ಮನವೊಲಿಸಲು ಶಾಸಕರು ಈ ಮೊದಲಿನಿಂದಲೂ ಯತ್ನಿಸುತ್ತಿದ್ದಾರೆ. ನಾಗರೀಕರ ಒಕ್ಕೂಟದ ವೇದಿಕೆಗೆ ಪ್ರತಿತಂತ್ರ ಹೆಣೆಯಲು, ಬಂದ್ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಲು ಯಾವ ಅಸ್ತ್ರ ಬಳಸಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಚಾಮರಾಜಪೇಟೆ ಬಂದ್ಗೆ ನಾಗರಿಕ ಒಕ್ಕೂಟ ಕರೆ
ಪಾಲಿಕೆಯ ಮಾಜಿ ಸದಸ್ಯರ ಜೊತೆಗೆ ಹಲವು ಸಂಘ, ಸಂಸ್ಥೆಗಳು, ಸಂಘಟನೆಗಳ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲೈಮಹದೇಶ್ವರಸ್ವಾಮಿ ದೇಗುಲ ಟ್ರಸ್ಟ್, ಅಯ್ಯಪ್ಪ ದೇವಸ್ಥಾನ ಟ್ರಸ್ಟ್ ಸಮಿತಿ, ಸುಬ್ರಹ್ಮಣ್ಯ ಸ್ವಾಮಿ ಭಜನಾ ಸೇವಾ ಮಂಡಳಿ, ಚಾಮರಾಜಪೇಟೆ ಕನ್ನಡ ರಾಜ್ಯೋತ್ಸವ ಸಮಿತಿ, ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ, ವರ್ತಕರ ಸಂಘ, ಚಾಮರಾಜಪೇಟೆ ನಾಗರಿಕ ಹಿತರಕ್ಷಣಾ ಸಮಿತಿ ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳಿಗೆ ಆಹ್ವಾನ ನೀಡಲಾಗಿದೆ.
ಸಂಸದ ಪಿಸಿ ಮೋಹನ್, ಮಾಜಿ ಶಾಸಕಿ ಪ್ರಮೀಳಾ ನಾಯ್ಡು, ಪಾಲಿಕೆಯ ಮಾಜಿ ಸದಸ್ಯರಾದ ಕೋಕಿಲ ಚಂದ್ರಶೇಖರ್, ಸುಜಾತ ರಮೇಶ್, ಚಂದ್ರಶೇಖರ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.
ಬಂದ್ಗೆ ಬೆಂಬಲ ನಿರಾಕರಿಸಿದ ಮುಸ್ಲಿಂ ವ್ಯಾಪಾರಿಗಳು
ನಗರದ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ, ಒಂದಲ್ಲಾ ಒಂದು ರೀತಿಯಲ್ಲಿ ವಿವಾದ ಜೋರಾಗುತ್ತಿದ್ದು, ಇದೀಗ ಜುಲೈ 12ರಂದು ಸಂಜೆ 6ರವರೆಗೆ ಚಾಮರಾಜಪೇಟೆ ಬಂದ್ಗೆ ಕರೆ ನೀಡಲಾಗಿದೆ. ಆದರೆ ಈ ಬಂದ್ಗೆ ಮುಸ್ಲಿಂ ವ್ಯಾಪಾರಿಗಳು ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸಂಘಟನೆಗಳು ಶಾಂತಿಯುತ ಬಂದ್ಗೆ ಕರೆ ನೀಡಿವೆ. ಅಂದು ಬೃಹತ್ ಪ್ರತಿಭಟನೆ, ಜಾಥಾ ನಡೆಸಲು ನಿರ್ಧರಿಸಲಾಗಿದೆ. ಆದರೆ ಈ ಬಂದ್ಗೆ ಮುಸ್ಲಿಂ ವ್ಯಾಪಾರಿಗಳು ಖಂಡನೆ ವ್ಯಕ್ತಪಡಿಸಿ ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಕ್ರೀದ್ ನಂತರ ನಡೆಯುವ ಈ ಬಂದ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುವ ಲಕ್ಷಣಗಳು ಎದ್ದುಕಾಣುತ್ತಿದೆ.
ಈ ನಡುವೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೀಗ ಬಕ್ರೀದ್ ಹಿನ್ನೆಲೆಯಲ್ಲಿ ಕುರಿ-ಮೇಕೆ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಆದರೆ ಪಾಲಿಕೆಯು ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಿಲ್ಲ. ಮೈದಾನವನ್ನು ಸಾಮೂಹಿಕ ಪ್ರಾರ್ಥನೆಗೆ ಮೊದಲು ಸ್ವಚ್ಛಗೊಳಿಸುವುದೂ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
Published On - 8:27 am, Thu, 7 July 22