ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ಗೆ ಕೃತಜ್ಞತೆ ಸಲ್ಲಿಸಿದ ವಕ್ಫ್ ಅಧ್ಯಕ್ಷ ಶಾಫಿ ಸಅದಿ, ತಲೆ ಸರಿಯಿಲ್ಲ ಎಂದ ಭಾಸ್ಕರನ್
ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಖಾತೆ ಮಾಡಿಸಿಕೊಳ್ಳಲು ವಕ್ಫ್ ಮಂಡಳಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು ಎನ್ನುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ವಿವಾದಕ್ಕೀಡಾಗಿದೆ.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Chamarajpet Idgah Maidan) ಬಿಬಿಎಂಪಿ ಹೆಸರಿನಲ್ಲಿ ಇರಲಿಲ್ಲ. ವಕ್ಫ್ ಮಂಡಳಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು ಎನ್ನುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Commissioner Tushar Girinath) ಹೇಳಿಕೆ ವಿವಾದಕ್ಕೀಡಾಗಿದೆ. ಬಿಬಿಎಂಪಿ ಆಯುಕ್ತರ ಹೇಳಿಕೆಯನ್ನು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ (Wakq Board President Muhammad Shafi Sa-adi) ಸ್ವಾಗತಿಸಿದ್ದಾರೆ. ‘ಇದು ಮುಸ್ಲಿಮರೊಂದಿಗೆ ಮಾಡಿಕೊಂಡಿರುವ ಡೀಲ್’ ಎಂದು ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಎಸ್.ಭಾಸ್ಕರನ್ ಟೀಕಿಸಿದ್ದಾರೆ. ಆಯುಕ್ತರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ‘ಈ ಸಂಬಂಧ ಬಿಬಿಎಂಪಿ ಆಯುಕ್ತರಿಂದ ವಿವರ ಪಡೆಯುತ್ತೇನೆ’ ಎಂದು ತಿಳಿಸಿದ್ದಾರೆ.
ಖಾತಾ ಬಂದ ಮೇಲೆ ಕಾಂಪೌಂಡ್: ಶಾಫಿ ಅಸದಿ
‘ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಬಳಿ ಸಾಕಷ್ಟು ಮಾಹಿತಿ ಇದೆ. ಅವರು ಹೇಳಿದಂತೆ ನಾವು ಖಾತಾಗೆ ಅರ್ಜಿ ಸಲ್ಲಿಸಿದ್ದೇವೆ’ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು. ‘2018ರಲ್ಲೂ ನಾವು ಈ ಬಗ್ಗೆ ಅರ್ಜಿ ಸಲ್ಲಿಸಿದ್ದೆವು. ಆಗ ನಮಗೆ ಸಂಪೂರ್ಣವಾಗಿ ಖಾತಾ ಸಿಕ್ಕಿರಲಿಲ್ಲ. ಖಾತಾ ಬಂದ ಕೂಡಲೇ ಸರ್ಕಾರದಿಂದ ಅನುದಾನ ಪಡೆದು ಮೈದಾನಕ್ಕೆ ಕಾಂಪೌಂಡ್ ಹಾಕುತ್ತೇವೆ. ಮೈದಾನದಲ್ಲಿ ಆಟವಾಡಲು, ಕನ್ನಡ ರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಮೌಲಾನಾ ಶಾಫಿ ಸಅದಿ ಹೇಳಿದರು.
ತುಷಾರ್ ಗಿರಿನಾಥ್ ವಿರುದ್ಧ ಅವ್ಯವಹಾರದ ಆರೋಪ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಹುಚ್ವು ಹಿಡಿದಿರಬೇಕು ಅಥವಾ ಬುದ್ಧಿ ಭ್ರಮಣೆ ಆಗಿರಬೇಕು. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಜೊತೆಗೆ ಡೀಲ್ ಮಾಡಿಕೊಂಡಿದ್ದರೆ ಹೇಳಿಬಿಡಿ ಸ್ವಾಮಿ ಎಂದು ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಎಸ್.ಭಾಸ್ಕರನ್ ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ಹಕ್ಕು ಅಧಿನಯಮದ ಅಡಿ ನಾವು ಕೇಳಿದಾಗ ಕೊಟ್ಟ ಮಾಹಿತಿಯಲ್ಲಿ ಇದು ಬಿಬಿಎಂಪಿ ಮಾಲೀಕತ್ವದ ಪ್ರದೇಶ ಎನ್ನುವ ಉಲ್ಲೇಖವೇ ಇದೆ ಎಂದು ಅವರು ತಿಳಿಸಿದರು.
ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ವರ್ಕ್ಫ್ ಮಂಡಳಿಯ ಬಳಿ ಯಾವುದೇ ದಾಖಲೆಗಳಿಲ್ಲ. ಇದು ಬಿಬಿಎಂಪಿ ಸ್ವತ್ತು ಎನ್ನುವ ದಾಖಲೆಗಳು ನನ್ನ ಬಳಿ ಇವೆ. ಜಮೀರ್ ಅಹ್ಮದ್ ಹಾಗೂ ತುಷಾರ್ ನಡುವೆ ಮಾತುಕತೆ ನಡೆಸಿದಾಗಲೇ ನನಗೆ ಇವರ ಡೀಲ್ ಬಗ್ಗೆ ಅನುಮಾನವಿತ್ತು. ಈ ಬೆಳವಣಿಗೆ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು. ಹಿಂದೂಗಳ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡಬಾರದು ಎಂದು ಹೇಳಿದರು.
ಈ ಮುಖ್ಯಮಂತ್ರಿಗೆ ಪ್ರಕರಣ ನಿರ್ವಹಿಸಲು ಸಾಧ್ಯವಾಗದಿದ್ದರೆ ರಾಜಿನಾಮೆ ಕೊಟ್ಟು ಹೋಗಲಿ. ಮುಂದಿನ ಸಿಎಂ ಜೊತೆ ಚರ್ಚಿಸಿ ನ್ಯಾಯ ಪಡೆಯುತ್ತೇವೆ. ಈ ಅಧಿಕಾರಿ ಜಲಮಂಡಳಿ ಹಾಳು ಮಾಡಿದ ನಂತರ ಈಗ ಬಿಬಿಎಂಪಿಗೆ ಬಂದಿದ್ದಾರೆ. ತುಷಾರ್ ಗಿರಿನಾಥ್ ಹಾಗೂ ಜಮೀರ್ ನಡುವಣ ಮಾತುಕತೆ ವಿವರಗಳನ್ನು ಮಾಧ್ಯಮಗಳಿಗೆ ಒದಗಿಸುತ್ತೇನೆ ಎಂದು ಸವಾಲು ಹಾಕಿದರು. ಅಧಿಕಾರ ಬರುವವರೆಗೆ ಇವರಿಗೆ ರಾಮಜಪ, ವಿಭೂತಿ ಬೇಕಾಗುತ್ತದೆ. ನಂತರ ಇವರು ಎಲ್ಲವನ್ನೂ ಮರೆತುಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 22 June 22