ಕರ್ನಾಟಕದಲ್ಲಿ ಮತ್ತೆ ಪಠ್ಯಪರಿಷ್ಕರಣೆ ಗುದ್ದಾಟ: ವಿರೋಧಿಗಳಿಗೆ ಕೌಂಟರ್ ನೀಡಲು ಬುಕ್​ಲೆಟ್ ಸಿದ್ಧಪಡಿಸಿದ ಶಿಕ್ಷಣ ಇಲಾಖೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 23, 2022 | 1:41 PM

ಪಠ್ಯ ಪರಿಷ್ಕರಣೆಗೆ ಭಾರಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಕರ್ನಾಟಕದಲ್ಲಿ ಮತ್ತೆ ಪಠ್ಯಪರಿಷ್ಕರಣೆ ಗುದ್ದಾಟ: ವಿರೋಧಿಗಳಿಗೆ ಕೌಂಟರ್ ನೀಡಲು ಬುಕ್​ಲೆಟ್ ಸಿದ್ಧಪಡಿಸಿದ ಶಿಕ್ಷಣ ಇಲಾಖೆ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕದಲ್ಲಿ ಪಠ್ಯಪರಿಷ್ಕರಣೆ ವಿವಾದ (Textbook Revision Controversy) ಮತ್ತೆ ಗರಿಗೆದರುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಪಠ್ಯ ಪರಿಷ್ಕರಣೆ ವಿರೋಧಿಸುತ್ತಿರುವವರು ಪ್ರಸ್ತಾಪಿಸುತ್ತಿರುವ ಅಂಶಗಳಿಗೆ ಸ್ಪಷ್ಟನೆ ನೀಡುವ ಕಿರುಪುಸ್ತಿಕೆಗಳನ್ನು (ಬುಕ್​ಲೆಟ್) ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಇದರಲ್ಲಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಸಮಿತಿಯಿಂದ ಆಗಿರುವ ಲೋಪಗಳನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗಿದ್ದು, ಸಚಿವ ಆರ್.ಅಶೋಕ್ ಅವರು ಮಾಧ್ಯಮಗೋಷ್ಠಿಯಲ್ಲಿ ಕಿರುಪುಸ್ತಿಕೆಗಳನ್ನು ಬಿಡುಗಡೆ ಮಾಡಿದರು. ಇದರಲ್ಲಿ ಬರಗೂರು ಸಮಿತಿ ಮಾಡಿರುವ 150ಕ್ಕೂ ಹೆಚ್ಚು ತಪ್ಪುಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ.

ಈ ನಡುವೆ ಪಠ್ಯ ಪರಿಷ್ಕರಣೆಗೆ ಭಾರಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಳೆಯ ಪಠ್ಯ ಪುಸ್ತಕವನ್ನೇ ಮುಂದುವರಿಸಬೇಕೆಂದು ಹಲವು ಗಣ್ಯರು ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗೆ ಎಚ್​.ಡಿ.ದೇವೇಗೌಡ ಸೇರಿದಂತೆ ಹಲವು ಸ್ವಾಮೀಜಿಗಳು ಪತ್ರ ಬರೆದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಾಲಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯು ಮತ್ತೊಮ್ಮೆ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ.

ಈ ಸಂಬಂಧ ಮುಖ್ಯಮಂತ್ರಿಗಳು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಇಲಾಖೆಯ ಇತರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಸಿಎಂ ಸೂಚನೆಯಂತೆ ತಜ್ಞ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಿತಿಯೊಂದಿಗೆ ಈ ಬಾರಿ ಶಿಕ್ಷಣ ಇಲಾಖೆಯೇ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇನ್ನೇರಡು ವಾರಗಳ ಒಳಗೆ ತಪ್ಪು ಸರಿ ಮಾಡಿ ಸಿಎಂರಿಂದ ಅನುಮತಿ ಪಡೆದು ಪಠ್ಯ ನೀಡಲು ಶಿಕ್ಷಣ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ