ಆರೋಗ್ಯ ವ್ಯವಸ್ಥೆ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ: ಮೌನವಾಗಿ ನಿಂತು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2022 | 4:31 PM

ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷದಿಂದ ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಬೇಕಾಗಿತ್ತು ಎಂದು ಕಾಂಗ್ರೆಸ್ ಸದಸ್ಯರು ತಮ್ಮ ಅಭಿಪ್ರಾಯ ಹೇಳಿದರು

ಆರೋಗ್ಯ ವ್ಯವಸ್ಥೆ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ: ಮೌನವಾಗಿ ನಿಂತು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು
ಸಚಿವ ಕೆ.ಎಸ್.ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
Follow us on

ಬೆಂಗಳೂರು: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾಪದ ಮೇಲೆ ಪ್ರತಿಪಕ್ಷಗಳು ಎತ್ತಿದ್ದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮಂಗಳವಾರ ಉತ್ತರಿಸಿದರು. ಸಿಎಂ ಉತ್ತರದ ವೇಳೆ ಕಾಂಗ್ರೆಸ್ ಸದಸ್ಯರು ಮೌನವಾಗಿ ನಿಂತು ಪ್ರತಿಭಟನೆ ವ್ಯಕ್ತಪಡಿಸಿದರು. ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷದಿಂದ ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಬೇಕಾಗಿತ್ತು ಎಂದು ಕಾಂಗ್ರೆಸ್ ಸದಸ್ಯರು ತಮ್ಮ ಅಭಿಪ್ರಾಯ ಹೇಳಿದರು. ಚರ್ಚೆಯ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೊವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಆರೋಗ್ಯ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದರು. ಎಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಐಸಿಯು ಬೆಡ್​ಗಳ ಸಂಖ್ಯೆ ಹೆಚ್ಚಿಸಿದೆವು. ಅಗತ್ಯವಿರುವ ಕಡೆ ವೆಟಿಲೇಟರ್ ವ್ಯವಸ್ಥೆ ಮಾಡಿದೆವು. ರಾಜ್ಯದ ಜನತೆಯ ಜೀವ ಉಳಿಸಲು ಸಾಕಷ್ಟು ಶ್ರಮ‌ಪಟ್ಟೆವು. ಕೊವಿಡ್ ಮೃತರಿಗೆ ಪರಿಹಾರ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದರು.

ಕೊವಿಡ್​ ಸಂಕಷ್ಟ ಅನುಭವಿಸಿದ ₹ 200 ಕೋಟಿಗೂ ಹೆಚ್ಚು ಪರಿಹಾರವನ್ನು ಜನರಿಗೆ ನೀಡಿ ನೆರವಾದೆವು. ರಾಜ್ಯದಲ್ಲಿ ಪರಿಸ್ಥಿತಿ ವಿಷಮಿಸಿದಾಗ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಂಡೆವು. ಶವಸಂಸ್ಕಾರದ ಸಮಸ್ಯೆ ಎದುರಾದಾಗಲೂ ಸಮರ್ಥವಾಗಿ ಕೊವಿಡ್ ಪರಿಸ್ಥಿತಿ ನಿರ್ವಹಿಸಿದೆವು. ಕೊವಿಡ್ ಬಿಕ್ಕಟ್ಟು ಇರುವಾಗಲೇ ಪ್ರವಾಹದ ಜೊತೆಗೆ ನಿರಂತರ ಮಳೆ ಬಂತು. ಮಳೆಯಿಂದ ಹಾನಿಯಾದವರಿಗೆ ನಾವು ಸಾಕಷ್ಟು ಪರಿಹಾರ ಕೊಟ್ಟಿದ್ದೇವೆ. ಪ್ರವಾಹ ಪರಿಹಾರಕ್ಕಾಗಿ ₹ 13,500 ಕೋಟಿ ನೀಡಿದ್ದೇವೆ ಎಂದರು.

ಸಿಎಂ ಭಾಷಣದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿತು. ಕೊವಿಡ್ ನಿರ್ವಹಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಅದರ ಬಗ್ಗೆ ಚರ್ಚೆ ಆಗಬೇಕು. ಕಾಂಗ್ರೆಸ್ ಸದಸ್ಯರು ಮತ್ತೆ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಶಿವಮೊಗ್ಗ ಘಟನೆ ಪ್ರಸ್ತಾಪ‌ ಮಾಡಿದ ಜೆಡಿಎಸ್‌ನ ಶ್ರೀಕಂಠೇಗೌಡ, ಹರ್ಷ ಹತ್ಯೆಯನ್ನು ನಾವೂ ಖಂಡಿಸುತ್ತೇವೆ. ಗೃಹ ಸಚಿವರು ಸಹ ಅದೇ ಜಿಲ್ಲೆಗೆ ಸೇರಿದವರು. ಆತನಿಗೆ ಬೆದರಿಕೆ ಇದ್ದಿದ್ದು ಇಡೀ ಜಿಲ್ಲೆಗೆ ಗೊತ್ತಿತ್ತು. ಈ ಹತ್ಯೆ ಸರ್ಕಾರದ ವೈಫಲ್ಯ. ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು, ಪೊಲೀಸರು ಮತ್ತು ಸಚಿವರ ಎದುರೇ ಗಲಭೆ ನಡೆದಿದೆ. ಈ ವೇಳೆ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇಂಥ ಘಟನೆ ಶಿವಮೊಗ್ಗದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಗೃಹ ಸಚಿವರು ಶೀಘ್ರ ಕ್ರಮಕೈಗೊಳ್ಳಬೇಕು. ಹರ್ಷ ಹತ್ಯೆಯ ನ್ಯಾಯಾಂಗ ತನಿಖೆಯ ಜೊತೆಗೆ ಅನಂತರದ ಘಟನೆಗಳ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.

ಶಿವಮೊಗ್ಗ ಘಟನೆಯನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದ ಅವರು, ತಮ್ಮ ಬೇಡಿಕೆಗೆ ಸರ್ಕಾರ ಸಹಮತ ಸೂಚಿಸದ ಹಿನ್ನೆಲೆಯಲ್ಲಿ ಸಭಾತ್ಯಾಗ ಮಾಡುತ್ತೇನೆ ಎಂದು ಕಲಾಪದಿಂದ ಅವರು ಹೊರನಡೆದರು. ಪರಿಷತ್​ನಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಆಯನೂರು ಮಂಜುನಾಥ್, ದುಷ್ಟಶಕ್ತಿಗಳು ಹರ್ಷನನ್ನು ಡ್ರ್ಯಾಗರ್​ನಿಂದ ಇರಿದು ಕೊಂದಿದ್ದಾರೆ. ಬೆಂಗಳೂರಿನಿಂದ ಬಂದಿದ್ದ ಇಬ್ಬರು ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ. ಡಿ.ಎಸ್.ಅರುಣ್ ಅವರಿಗೆ ನಿಮ್ಮ ಮನೆಯ ಹೆಣ್ಣುಮಕ್ಕಳನ್ನೂ ಮುಂದೆ ಬಿಡೋದಿಲ್ಲ ಅಂತ ಮೆಸೇಜ್ ಬಂದಿದೆ. ರಾಜ್ಯದಲ್ಲಿ ಎಸ್ಎಫ್ಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು. ಸರ್ಕಾರದ ಕಡೆಯಿಂದ ಹರ್ಷ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು. ರಾಜಕೀಯ ಕಾರಣಕ್ಕೋಸ್ಕರ ಪ್ರಚೋದನಕಾರಿ ಹೇಳಿಕೆಯನ್ನು ಯಾರೂ ಕೊಡಬಾರದು. ಡಿ.ಎಸ್.ಅರುಣ್​ಗೆ ಬಂದಿರುವ ಮೆಸೇಜ್ ನಾಳೆ ಎಲ್ಲ ಶಾಸಕರಿಗೂ ಬರಬಹುದು. ಬೆದರಿಕೆ ಹಾಕುವ ಪ್ರಯತ್ನಗಳ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ಮಾರ್ಚ್ 4ಕ್ಕೆ ಮುಂದೂಡಿದರು.

ಈಶ್ವರಪ್ಪ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ರಾಷ್ಟ್ರಧ್ವಜವನ್ನು ಅವಮಾನಗೊಳಿಸುವ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿದರು. ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ನಾಯಕರಾದ ಎಚ್​.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಯು.ಟಿ.ಖಾದರ್, ಬಿ.ಕೆ.ಹರಿಪ್ರಸಾದ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಮಂಡ್ಯ ಪ್ರವಾಸ ಹಿನ್ನಲೆ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೈರಾಗಿದ್ದರು.

ಇದನ್ನೂ ಓದಿ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಕಾಂಗ್ರೆಸ್​ ಗದ್ದಲವೇ ಕೊಲೆಗೆ ಕಾರಣ ಎಂದು ಆರೋಪಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: ವಿಧಾನಸಭೆಯಲ್ಲಿ 2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ