ಬೆಂಗಳೂರು: ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನಡೆಸಿದ್ದಾರೆ. ಮಲ್ಲತ್ತಹಳ್ಳಿ ಕೆರೆಯ ಅಭಿವೃದ್ಧಿ ಬಹಳ ದಿನದ ಕನಸಾಗಿತ್ತು. ಕೆರೆ ರಕ್ಷಣೆಯಾಗಿದ್ರೂ, ಕೊಳಚೆಯಿಂದ ಮುಕ್ತವಾಗಿರಲಿಲ್ಲ. ನನ್ನ ಮೊದಲ ಪ್ರಾಶಸ್ತ್ಯ ಕೆರೆಗಳನ್ನ ಅಭಿವೃದ್ಧಿ ಮಾಡುವುದು. ಮುಂದಿನ ದಿನಗಳಲ್ಲಿ ವಿಶೇಷ ಕೆಲಸಗಳನ್ನ ಮಾಡುತ್ತೇವೆ ಎಂದು ಶಂಕುಸ್ಥಾಪನೆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಹೇಳಿಕೆ ನೀಡಿದ್ದಾರೆ.
81 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಮಾಡಲಾಗುತ್ತದೆ. ಸಿಎಂ ನವನಗರೋತ್ಥಾನ ಕ್ರಿಯಾ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗುತ್ತದೆ. ಸುಮಾರು 73 ಎಕರೆ ವಿಸ್ತೀರ್ಣವಿರುವ ಮಲ್ಲತ್ತಹಳ್ಳಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಚಿವ ಮುನಿರತ್ನ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ನೀಡಿದ್ದ ಹೇಳಿಕೆಗೆ ನಗು ನಗುತ್ತಲೇ ಸಿಎಂ ಟಾಂಗ್ ಕೊಟ್ಟಿದ್ದಾರೆ. ಸಚಿವ ಮುನಿರತ್ನ ಅವರು ಬಿ ಖಾತೆಯವರು. ಕ್ಷೇತ್ರದಲ್ಲಿ ಕೆಲಸ ಆಗ್ತಿಲ್ಲ ಅಂತ ಪಕ್ಷ ಬಿಟ್ಟು ಬಂದಿದ್ದಾರೆ. ರಾಜಕೀಯ ಭವಿಷ್ಯವನ್ನ ರಿಸ್ಕ್ ತೊಗೊಂಡು ಬಂದಿದ್ದಾರೆ. ಕ್ಷೇತ್ರ, ಅಭಿವೃದ್ಧಿಗೆ ಪಕ್ಷ ಬಿಟ್ಟು ಬಂದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಸಚಿವ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 650 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಸಾಂಕೇತಿಕವಾಗಿ 10 ಜನರಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಭೈರತಿ ಬಸವರಾಜ್, ಸಂಸದ ಡಿ.ಕೆ.ಸುರೇಶ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
ಬಳಿಕ, ಲಗ್ಗೆರೆ ಗ್ರಾಮದ ರಾಕ್ಷಸಿ ಹಳ್ಳದ ಸ್ಥಳದಲ್ಲಿ ಅಂತರಾಷ್ಟ್ರೀಯ ಮಟ್ಟದ ಡಾ. ಅಂಬರೀಶ್ ಈಜುಕೊಳ, ಡಾ. ರಾಜ್ ಕುಮಾರ್ ಉದ್ಯಾನವನ ಮತ್ತು ಡಾ. ವಿಷ್ಣುವರ್ಧನ್ ಆಟದ ಮೈದಾನ ಯೋಜನೆಯ ಭೂಮಿ ಪೂಜೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೆರವೇರಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 3,000 ಕೋಟಿ ಅನುದಾನ ನೀಡಲು ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್