ಬಿಜೆಪಿ ಮಾಜಿ, ಹಾಲಿ ಸಿಎಂಗಳ ನಡುವೆ ಮುನಿಸು ವಿಚಾರ: ಯಡಿಯೂರಪ್ಪ ಮುಕ್ತ ಬಿಜೆಪಿ ಎಂದು ಕಾಂಗ್ರೆಸ್ ವ್ಯಂಗ್ಯ

ಸಿಎಂ ಬೊಮ್ಮಾಯಿ, ಯಡಿಯೂರಪ್ಪ ನಡುವೆ ಮುನಿಸು ವಿಚಾರವಾಗಿ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಯಡಿಯೂರಪ್ಪ ಮುಕ್ತ ಬಿಜೆಪಿ ಎಂದು ಟ್ವೀಟ್ ಮೂಲಕ ಬಿಜೆಪಿ ಕಾಲೆಳೆದ ರಾಜ್ಯ ಕಾಂಗ್ರೆಸ್ ಘಟಕ.

ಬಿಜೆಪಿ ಮಾಜಿ, ಹಾಲಿ ಸಿಎಂಗಳ ನಡುವೆ ಮುನಿಸು ವಿಚಾರ: ಯಡಿಯೂರಪ್ಪ ಮುಕ್ತ ಬಿಜೆಪಿ ಎಂದು ಕಾಂಗ್ರೆಸ್ ವ್ಯಂಗ್ಯ
ಯಡಿಯೂರಪ್ಪ, ಕಾಂಗ್ರೆಸ್, ಬಸವರಾಜ್ ಬೊಮ್ಮಾಯಿ
Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2022 | 8:59 PM

ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ. ಎಸ್​ ಯಡಿಯೂರಪ್ಪ (Yediyurappa) ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ (Cm Bommai) ಇತ್ತೀಚೆಗೆ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಮತ್ತು ಇಬ್ಬರ ಮಧ್ಯೆಯೂ ಮುನಿಸುಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಯಡಿಯೂರಪ್ಪ ಮುಕ್ತ ಬಿಜೆಪಿ ಎಂದು ಟ್ವೀಟ್ ಮೂಲಕ ಬಿಜೆಪಿ ಕಾಲೆಳೆದ ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ. ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ. ಮತ್ತೊಬ್ಬರನ್ನು ಮುಂದೆ ಬಿಡುವುದು ಸಂಘದ ಕುತ್ಸಿತ ಕಾರ್ಯತಂತ್ರ. ಅದರಂತೆಯೇ ಯಡಿಯೂರಪ್ಪರನ್ನು ಮೂಲೆಗುಂಪು ಮಾಡುವ ಟಾಸ್ಕ್‌ನ್ನು RSS ಸಿಎಂ ಹೆಗಲಿಗೇರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಹರಿಹಾಯ್ದಿದೆ.

ಕುರ್ಚಿ ಉಳಿಸಿಕೊಳ್ಳಲು ಸಿಎಂ ಗುರುವಿಗೆ ತಿರುಮಂತ್ರ ಹಾಕುತ್ತಿದ್ದಾರೆ. ಯಡಿಯೂರಪ್ಪ ಕೃಪೆಯಿಂದ ಸಿಎಂ ಹುದ್ದೆಗೇರಿದ ಸಿಎಂ ಬೊಮ್ಮಾಯಿ. ಗುರುವನ್ನೇ ಮೂಲೆಗೆ ತಳ್ಳಲು ‘ಮೀರ್ ಸಾದಿಕ್’ ಪಾತ್ರ. ಸಿಎಂ ಸ್ಥಾನ ಗಟ್ಟಿಯಾಗುವವರೆಗೆ ವಾರಕ್ಕೊಮ್ಮೆ ದವಳಗಿರಿಗೆ ಹೋಗಿಬರುತ್ತಿದ್ದವರು ಈಗ ಕೇಶವ ಕೃಪಾಗೆ ಹೋಗ್ತಿದಾರೆ. ಬಿ.ಎಲ್ ಸಂತೋಷ್ ಅವರ ಯಡಿಯೂರಪ್ಪ ಮುಕ್ತ ಅಭಿಯಾನಕ್ಕೆ ಬೊಮ್ಮಾಯಿಯವರೂ ಕೈಜೋಡಿಸಿದ್ದಾರೆ.

ಅನೈತಿಕ ಮಾರ್ಗದಲ್ಲಿಯಾದರೂ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ್ದು ಯಡಿಯೂರಪ್ಪ. ಆದರೆ ಅದೇ ಯಡಿಯೂರಪ್ಪಗೆ ಬಿಜೆಪಿ ಸಲ್ಲಿಸಿದ ಕೊಡುಗೆ ಜೈಲು, ಕಣ್ಣೀರು, ದ್ರೋಹ. ಅಡ್ವಾಣಿಯಂತಹ ನಾಯಕರನ್ನೇ ಮುಗಿಸಿದ ಬಿಜೆಪಿ ಬಿಎಸ್‌ವೈ ಅವರನ್ನು ಬಿಡುವುದೇ ಎಂದು ಪ್ರಶ್ನಿಸಿದೆ. ಹತ್ತಿದ ಏಣಿಯನ್ನು ಒಡೆಯುವುದು, ತಿಂದ ತಟ್ಟೆಗೆ ಮಣ್ಣು ಹಾಕುವುದು ಬಿಜೆಪಿಯ ಹುಟ್ಟುಗುಣ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.

ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ‌ ಜೊತೆ ಒಟ್ಟಾಗಿ ಪ್ರಚಾರಕ್ಕೆ ಹೋಗುತ್ತೇವೆ. ರಾಜ್ಯದಲ್ಲಿ ವಾತಾವರಣ ನಮ್ಮ ಪರವಾಗಿದೆ. ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಐದಾರು ಭಾರಿ ರಾಜ್ಯಕ್ಕೆ ಬರಲಿದ್ದಾರೆ. ಅಮಿತ್ ಶಾ ಕೂಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ ಅವರದ್ದು ತಿರುಕನ ಕನಸು.

ಇದನ್ನೂ ಓದಿ: ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ 140 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

ಮಂಗಳೂರು ಬ್ಲಾಸ್ಟ್ ಪ್ರಕರಣ ಕಾಂಗ್ರೆಸ್ ನಾಯಕರಿಗೆ ಹಗರುವಾಗಿ ಮಾತನಾಡುವುದು ಅವರ ಅಭ್ಯಾಸವಾಗಿದೆ. ಬೇಜವಾಬ್ದಾರಿಯಿಂದ ಮಾತನಾಡುವುದು ಹವ್ಯಾಸವಾಗಿದೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಎನೆಲ್ಲಾ ಅಭಿವೃದ್ಧಿ ಕಾರ್ಯ ಏನೂ ಮಾಡಬೇಕು ಅದನ್ನ ಮಾಡುತ್ತೇವೆ. ತೀರ್ಥ ಕ್ಷೇತ್ರಗಳನ್ನ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:58 pm, Thu, 15 December 22