ಕರ್ನಾಟಕದಲ್ಲಿ ಎಲ್ಲೆಲ್ಲಿ ಪ್ರವಾಹ, ಎಷ್ಟು ಮನೆಗಳು ಹಾನಿ? ಸಂಪೂರ್ಣ ಮಾಹಿತಿ ನೀಡಿದ ಸಿಎಂ

ಮಳೆಗಾಲ ಆರಂಭವಾಗಿದ್ದು, ಈ ಹಿನ್ನಲೆ ಇಂದು(ಮಂಗಳವಾರ) ವಿಪತ್ತು ನಿರ್ವಹಣೆ ಬಗ್ಗೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಚರ್ಚೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಪ್ರವಾಹ ಎದುರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಜೊತೆಗೆ ಪ್ರತೀ ಜಿಲ್ಲಾಸ್ಪತ್ರೆಯಲ್ಲಿ 10 ಡೆಂಘೀ ವಾರ್ಡ್‌ ತೆರೆಯಲು ಹೇಳಿದ್ದೇನೆ ಎಂದರು.

ಕರ್ನಾಟಕದಲ್ಲಿ ಎಲ್ಲೆಲ್ಲಿ ಪ್ರವಾಹ, ಎಷ್ಟು ಮನೆಗಳು ಹಾನಿ? ಸಂಪೂರ್ಣ ಮಾಹಿತಿ ನೀಡಿದ ಸಿಎಂ
ಸಿದ್ದರಾಮಯ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2024 | 7:28 PM

ಬೆಂಗಳೂರು, ಜು.09: ಅಧಿಕಾರಿಗಳ ಜೊತೆ ವಿಪತ್ತು ನಿರ್ವಹಣೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಈ ಹಿಂದೆ 177 ತಾಲೂಕುಗಳಲ್ಲಿ 1,200 ಗ್ರಾಮ ಪಂಚಾಯತಿ ವ್ಯಾಪ್ತಿಯ 2205 ಗ್ರಾಮಗಳಲ್ಲಿ ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳೆಂದು ಗುರುತಿಸಿದ್ದೇವೆ. ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 201 ಪ್ರವಾಹ ಸ್ಥಳಗಳನ್ನು ಗುರುತಿಸಲಾಗಿದೆ. ಎಲ್ಲಿಯೂ ಸಮಸ್ಯೆಯಾಗದಂತೆ ವಿಪತ್ತು ನಿರ್ವಹಣೆ ಮಾಡುವವರು ಎಚ್ಚರವಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಹಾನಿಯಾದ ಮನೆಗಳಿಗೆ‌ ಪರಿಹಾರ ಕೊಡಲು ಸೂಚನೆ

ಮಂಗಳೂರು, ಉಡುಪಿ ಸೇರಿದಂತೆ ಎಲ್ಲೆಲ್ಲಿ ಪ್ರವಾಹ ಆಗಿದೆಯೋ ಅಲ್ಲಲ್ಲಿ ಪ್ರವಾಹ ಎದುರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈಗಾಗಲೇ ಮಳೆಯಿಂದ 3714 ಮನೆಗಳಿಗೆ ಹಾನಿಯಾಗಿದೆ. ಅವರಿಗೆ ಎಸ್​ಡಿಆರ್​ಎಫ್​ ಅಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾಧಿಕಾರಿಗಳ ಬ್ಯಾಂಕ್​ ಖಾತೆಯಲ್ಲಿ 7093 ಕೋಟಿ ಹಣ ಇದೆ. ಹಾನಿಗೊಳಗಾದ ಮನೆಗಳಿಗೆ‌ ಪರಿಹಾರ ಕೊಡಲು ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಮುಡಾ ಹಗರಣ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಡೆಂಘೀ ಜ್ವರದಿಂದ ಈವರೆಗೆ 7 ಜನರು ಮೃತ

ಡೆಂಘೀ ಜ್ವರ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ರಾಜ್ಯದಲ್ಲಿ ಈವರೆಗೆ 7362 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇದಕ್ಕೆ ಈವರೆಗೆ 7 ಜನರು ಮೃತಪಟ್ಟಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಈ ಕುರಿತು ನಿನ್ನೆ(ಸೋಮವಾರ) ಸಭೆ ನಡೆಸಿದ್ದಾರೆ. ಆರೋಗ್ಯ‌ ಸಚಿವರಿಗೆ TAC ಜೊತೆ ಸಭೆ ನಡೆಸಲು ಸೂಚಿಸಿದ್ದೇನೆ. ಸೊಳ್ಳು ಕಚ್ಚುವುದರಿಂದ ಡೆಂಘೀ ರೋಗ ಹರಡುತ್ತದೆ. ಹೀಗಾಗಿ ಸೊಳ್ಳೆ ಉತ್ಪಾದನೆ ಇರುವ ಕಡೆ ನಾಶ ಮಾಡಲು ಹೇಳಿದ್ದೇನೆ. ಇನ್ನು ಒಬ್ಬರಿಂದ ಮತ್ತೊಬ್ಬರಿಗೆ ಡೆಂಘೀ ರೋಗ ಹರಡುವುದಿಲ್ಲ. ಪ್ರತೀ ಜಿಲ್ಲಾಸ್ಪತ್ರೆಯಲ್ಲಿ 10 ಡೆಂಘೀ ವಾರ್ಡ್‌ ತೆರೆದು, ಟಾಸ್ಕ್​​ಫೋರ್ಸ್ ಮಾಡಲು‌ ಸೂಚನೆ ನೀಡಿದ್ದೇನೆ. ಇದರ ಜೊತೆಗೆ ಸ್ಲಂ ನಿವಾಸಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ನೀಡಲು ಹೇಳಿದ್ದೇನೆ ಎಂದರು.

ರಾಜ್ಯದಲ್ಲಿ ಸರ್ಕಾರಿ ಜಮೀನು‌ ಲೆಕ್ಕಕ್ಕೆ ಸೂಚನೆ

ಕಂದಾಯ ಡಿಸಿಗಳಿಗೆ ಇಡೀ‌ ರಾಜ್ಯದಲ್ಲಿ ಸರ್ಕಾರಿ ಜಮೀನು‌ ಎಷ್ಟಿದೆ ಎಂದು ಲ್ಯಾಂಡ್ ಬ್ಯಾಂಕ್ ರೀತಿ ಮಾಡಲು ಸೂಚಿಸಿದ್ದೇನೆ. ಪ್ರತಿ ತಾಲ್ಲೂಕಿನಲ್ಲಿ‌ ಎಷ್ಟು ಎಕರೆ ಸಿಗುತ್ತೆ ಎನ್ನುವುದನ್ನ ತಾಲ್ಲೂಕು ಕಚೇರಿಯಲ್ಲಿ ಡಿಸ್‌ ಪ್ಲೇ ಮಾಡಬೇಕು. ಕಳೆದ ಬಾರಿ ಹೇಳಿದ್ದೆ, ಪ್ರಾರಂಭ ಮಾಡಿದ್ದಾರೆ. ಅದರಂತೆ 750 ಸರ್ವೇಯರ್​ನ ನೇಮಕ ಮಾಡಿಕೊಳ್ಳಲು ಸೂಚಿಸಿದ್ದೇನೆ, ಪ್ರಕ್ರಿಯೆ ಆರಂಭ ಆಗಿದೆ. 1200 ಜನ‌ ಹಿಂದಿನ ನಮ್ಮ ಅವಧಿಯಲ್ಲಿ ಆಯ್ತು, ಈಗ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಈಗಿರುವ ಸರ್ವೇಯರ್ಸ್​ಗಳ ಜೊತೆಗೆ ಇನ್ನೂ 750 ಸರ್ವೇಯರ್ ಬೇಕಾಗುತ್ತದೆ, ಮತ್ತೆ ಬೇಕು ಅಂದ್ರೆ ಕೇಳೋಕೆ ಹೇಳಿದ್ದೀನಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ