ಸುಧಾಕರ್‌ ಅಭಿನಂದನಾ ಸಮಾರಂಭದಲ್ಲಿ ಮದ್ಯ ಹಂಚಿಕೆ: ನೆಲಮಂಗಲ ಮಂಡಲ ಬಿಜೆಪಿ ಅಧ್ಯಕ್ಷ ಉಚ್ಚಾಟನೆ

ಡಾ ಕೆ ಸುಧಾಕರ್ ಅವರು ಸಂಸದರಾಗಿವುದಕ್ಕೆ ಭಾನುವಾರ ನೆಲಮಂಗಲದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಬಂದವರಿಗೆ ಬಾಡೂಟ ಜೊತೆ ಮದ್ಯ ಹಂಚಿಕೆ ಮಾಡಲಾಗಿದೆ. ಜನರು ಎಣ್ಣೆಗಾಗಿ ಮುಗಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಬಿಜೆಪಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಇದರಿಂದ ಬಿಜೆಪಿಗೆ ಇರುಸುಮುರುಸು ಆಗಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಮಂಡಲ ಬಿಜೆಪಿ ಅಧ್ಯಕ್ಷನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಸುಧಾಕರ್‌ ಅಭಿನಂದನಾ ಸಮಾರಂಭದಲ್ಲಿ ಮದ್ಯ ಹಂಚಿಕೆ: ನೆಲಮಂಗಲ ಮಂಡಲ ಬಿಜೆಪಿ ಅಧ್ಯಕ್ಷ ಉಚ್ಚಾಟನೆ
ಬಿಜೆಪಿ
Follow us
ಕಿರಣ್​ ಹನಿಯಡ್ಕ
| Updated By: ರಮೇಶ್ ಬಿ. ಜವಳಗೇರಾ

Updated on: Jul 09, 2024 | 6:26 PM

ಬೆಂಗಳೂರು, (ಜುಲೈ 09): ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್‌ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದ್ದ ಅಭಿನಂದನಾ ಸಮಾರಂಭದಲ್ಲಿ ಮತದಾರರಿಗೆ ಮದ್ಯ ಹಂಚಿಕೆ ಮಾಡಲಾಗಿದ್ದು, ಇದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಇದರಿಂದ ಅಪಹಾಸ್ಯಕ್ಕೀಡಾದ ಬಿಜೆಪಿ, ನೆಲಮಂಗಲ ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ. ಸಮಾರಂಭದಲ್ಲಿ ಸಾರ್ವಜನಿಕವಾಗಿ ಮದ್ಯ ಹಂಚಿಕೆ ಹಿನ್ನೆಲೆಯಲ್ಲಿ ನೆಲಮಂಗಲ ಮಂಡಲ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು 6 ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ ಆದೇಶ ಹೊರಡಿಸಿದ್ದಾರೆ.

ಜುಲೈ 7 ರಂದು ನೆಲಮಂಗಲದಲ್ಲಿ ಆಯೋಜಿಸಲಾಗಿದ್ದ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಸನ್ಮಾನ ಸಮಾರಂಭದಲ್ಲಿ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಮದ್ಯ ಹಂಚಿಕೆ ಮಾಡಲಾಗಿತ್ತು. ಅಲ್ಲದೇ ಎಣ್ಣೆಗಾಗಿ ಸಾರ್ವಜನಿಕರು ಸಹ ಮುಗಿಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಶಿಸ್ತಿನ ಪಕ್ಷ ಏನು ಮಾಡುತ್ತಿ ಅಂತೆಲ್ಲಾ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆ ಮೇರೆಗೆ ಜಗದೀಶ್ ಚೌಧರಿ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

ಇದನ್ನೂ ಓದಿ: ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಗುಂಡು, ತುಂಡು: ಬಿಯರ್, ಹಾಟ್ ಡ್ರಿಂಕ್ಸ್​​ಗೆ ಮುಗಿಬಿದ್ದ ಜನ

ನೆಲಮಂಗಲದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವುದು ಬೇರೆ ವಿಚಾರ. ಆದರೆ ಬಿಜೆಪಿ ಪ್ರಮುಖ ನಾಯಕರು ಇದಕ್ಕೆ ಸ್ಪಷ್ಟನೆ ನೀಡಬೇಕು. ಬಿಜೆಪಿಯ ಇಂಥ ಸಂಸ್ಕೃತಿ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರಿಗಿಂತ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದರು.

ಸಂಸದ ಡಾ ಕೆ ಸುಧಾಕರ್ ಸ್ಪಷ್ಟನೆ

ಬಳಿಕ ಇದಕ್ಕೆ ಸಂಸದ ಸುಧಾಕರ್ ಪ್ರತಿಕ್ರಿಯಿಸಿದ್ದು, ಸಾರ್ವಜನಿಕವಾಗಿ ಮದ್ಯ ಹಂಚುವುದು ಅಪರಾಧವಾಗಿದ್ದು, ಅಕ್ಷಮ್ಯವಾಗಿದೆ. ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಮದ್ಯ ವಿತರಿಸಿಲ್ಲ. ನಾನು ಸನ್ಮಾನ ಕಾರ್ಯಕ್ರಮ ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಆಹ್ವಾನದ ಮೇರೆಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಮತ್ತು ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲ ಸಮಯದ ನಂತರ ವಾಪಸಾದೆವು. ಆ ನಂತರ ಬೆಳವಣಿಗೆಗಳು ನಡೆದಿವೆ. ನಾನು ಈ ಬಗ್ಗೆ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ, ಆದರೆ ಮದ್ಯವನ್ನು ಯಾರು ವಿತರಿಸಿದರು ಎಂಬುದು ನನಗೆ ತಿಳಿದಿಲ್ಲ. ನಾನು ಸ್ಥಳೀಯ ಮುಖಂಡರನ್ನು ಕರೆದು ಈ ರೀತಿ ಮಾಡಬಾರದಿತ್ತು ಎಂದು ಹೇಳಿದ್ದೇನೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದ್ದರು. ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ