‘ರಾಹುಲ್ ಗಾಂಧಿಯವರ ಅರಾಜಕತೆಯ ಸೂತ್ರವನ್ನೇ ಕಾಂಗ್ರೆಸ್ ಎಲ್ಲ ಕಡೆ ಪಾಲಿಸುತ್ತಿದೆ’- ಲೆಹರ್‌ ಸಿಂಗ್‌ ವ್ಯಂಗ್ಯ

|

Updated on: Aug 20, 2024 | 6:35 PM

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ದ ಕಾಂಗ್ರೆಸ್​ ಪ್ರತಿಭಟನೆ ಮಾಡುತ್ತಿದೆ. ಇದೇ ವೇಳೆ ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುತ್ತಿದೆ ಎಂದು ​ಬಿಜೆಪಿ ಆರೋಪಿಸಿ ದೂರು ಕೂಡ ದಾಖಲು ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ವಿರುದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಕಿಡಿಕಾರಿದ್ದಾರೆ.

‘ರಾಹುಲ್ ಗಾಂಧಿಯವರ ಅರಾಜಕತೆಯ ಸೂತ್ರವನ್ನೇ ಕಾಂಗ್ರೆಸ್ ಎಲ್ಲ ಕಡೆ ಪಾಲಿಸುತ್ತಿದೆ’- ಲೆಹರ್‌ ಸಿಂಗ್‌ ವ್ಯಂಗ್ಯ
ಲೆಹರ್‌ ಸಿಂಗ್‌
Follow us on

ಬೆಂಗಳೂರು, ಆ.20: ದೇಶದಲ್ಲಿ ಅರಾಜಕತೆ ಸೃಷ್ಟಿಸುವ ರಾಹುಲ್‌ ಗಾಂಧಿ ಪ್ರತಿಪಾದನೆಯ ತಂತ್ರವನ್ನೇ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ (Lehar Singh Siroya) ಟೀಕಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್​’ ಖಾತೆಯಲ್ಲಿ , ‘ದಲಿತ ಕುಟುಂಬಕ್ಕೆ ಸೇರಿದ ಕರ್ನಾಟಕದ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ‘ನಾಲಾಯಕ್‌’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ ಅವಮಾನಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದಂತೆ ಇಲ್ಲೂ ಕೂಡ ರಾಜ್ಯಪಾಲರ ಕಚೇರಿ ಹಾಗೂ ಮನೆಗೆ ನುಗ್ಗುತ್ತೇವೆ ಎಂದು ಕಾಂಗ್ರೆಸ್ ವಿಧಾನಪರಿಷತ್‌ ಸದಸ್ಯರಾದ ಐವನ್‌ ಡಿಸೋಜ ಬೆದರಿಕೆ ಹಾಕಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ರಾಹುಲ್‌ ಗಾಂಧಿ ಅವರು ಎಲ್ಲ ಕಡೆ ನೀಡುತ್ತಿರುವ ಹೇಳಿಕೆಗಳಿಂದ ಪ್ರೇರಣೆ ಪಡೆದು, ರಾಜ್ಯದಲ್ಲಿ ಕೂಡ ಅದೇ ತಂತ್ರವನ್ನು ಕಾಂಗ್ರೆಸ್ ನಾಯಕರು ಅನುಸರಿಸುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯಪಾಲರಿಗೆ ನಿಂದನೆ ಆರೋಪ: ಜಮೀರ್, ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್​ ನಾಯಕರ ವಿರುದ್ದ ಬಿಜೆಪಿ ದೂರು

ದಲಿತರನ್ನು ನಾಲಾಯಕ್‌ ಎನ್ನುವ ಕಾಂಗ್ರೆಸ್ಸಿಗರು, ಮಲ್ಲಿಕಾರ್ಜುನ ಖರ್ಗೆ ಅವರನ್ನೂ ನಾಲಾಯಕ್‌ ಎನ್ನುತ್ತಾರೆಯೇ?

ಮುಂದುವರೆದು ಹೇಳಿರುವ ಅವರು, ‘ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ, ಹಾಗಾದರೆ ಅವರನ್ನು ಕೂಡ ಕಾಂಗ್ರೆಸ್ ನಾಯಕರು ನಾಲಾಯಕ್‌ ಎನ್ನುತ್ತಾರೆಯೇ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಒಂದು ಕುಟುಂಬ ಹಾಗೂ ಕೆಲವು ಸಂಭಾವಿತ ಗಣ್ಯರನ್ನು ಹೊಂದಿರುವ ಕಾಂಗ್ರೆಸ್ಸಿಗರಿಗೆ ತಮ್ಮ ಹಿತಾಸಕ್ತಿ ಬಿಟ್ಟು ಇನ್ಯಾವುದೂ ಮುಖ್ಯವಲ್ಲ ಎಂದರು.

ಸಾಂವಿಧಾನಿಕ ಹುದ್ದೆಗೆ ಅಗೌರವ ನೀಡಿ, ಅವಮಾನಿಸಿರುವ ಸಚಿವರನ್ನು, ಅರಾಜಕತೆ ಉಂಟುಮಾಡುವ ಕಾಂಗ್ರೆಸ್ ಶಾಸಕರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಚ್ಛಾಟಿಸುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ಇದ್ದರೆ ಇಂತಹವರು ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಹೀಯಾಳಿಸುತ್ತಾರೆ.

ಗಾಂಧಿ ಕುಟುಂಬದ ಒತ್ತಾಸೆಯಂತೆ, ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಿರಿಯ ನಾಯಕ ಸೀತಾರಾಮ್‌ ಕೇಸರಿ ಅವರನ್ನು ಇದೇ ಕಾಂಗ್ರೆಸ್ಸಿಗರು ʼನಾಲಾಯಕ್‌ʼ ಎಂದು ತುಳಿದಂತೆ ಖರ್ಗೆ ಅವರನ್ನೂ ತುಳಿಯಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖಾಸಗಿ ಭೂಹಗರಣಕ್ಕಾಗಿ ಕಾಂಗ್ರೆಸ್‌ ಪಕ್ಷ ತಾನೇ ತನ್ನ ತಲೆಯ ಮೇಲೆ ಕಲ್ಲು ಹಾಕಿಕೊಳ್ಳುತ್ತಿದೆ ಎಂದು ಟೀಕಿಸಿ, ಇದು ಬಿಜೆಪಿಗೆ ಒಳ್ಳೆಯದೇ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Tue, 20 August 24