ರಾಜಕೀಯಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆರೋಪ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 23, 2021 | 10:25 PM

ಧಾರವಾಡದಲ್ಲಿ ಯಾರಿಗೆ ಟಿಕೆಟ್ ಕೊಟ್ಟಿದ್ದಾರೆ? ಬೇರೆ ಕಡೆ ಯಾರಿಗೆ ಕೊಟ್ಟಿದ್ದಾರೆ ಅಂತಲೂ ನೋಡಿಕೊಳ್ಳಲಿ. ಅವರ ಪಟ್ಟಿಗೆ ಅವರೇ ಕನ್ನಡಿ ಹಿಡಿದುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ರಾಜಕೀಯಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆರೋಪ
ಡಿಕೆ ಶಿವಕುಮಾರ್

ಬೆಂಗಳೂರು: ಮಳೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ಒಂದು ರಾಜಕೀಯ ಎಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಕಳೆದ ಬಾರಿಯ ಹಾನಿಗೆ ಈವರೆಗೂ ಪರಿಹಾರ ನೀಡಿಲ್ಲ. ಕೊರೊನಾಗೆ ಬಲಿಯಾದವರ ಕುಟುಂಬಕ್ಕೂ ಪರಿಹಾರ ಕೊಟ್ಟಿಲ್ಲ. ಮೊದಲು ಆ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಕುಟುಂಬ ರಾಜಕೀಯಕ್ಕೆ ಮಣೆ ಹಾಕಿದ ಎಂಬ ಬಿಜೆಪಿ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರ, ನಮ್ಮ ಬಗ್ಗೆ ಆರೋಪ ಮಾಡುವ ಮೊದಲು ಬಿಜೆಪಿ ಸದಸ್ಯರನ್ನು ನೋಡಲಿ. ಧಾರವಾಡದಲ್ಲಿ ಯಾರಿಗೆ ಟಿಕೆಟ್ ಕೊಟ್ಟಿದ್ದಾರೆ? ಬೇರೆ ಕಡೆ ಯಾರಿಗೆ ಕೊಟ್ಟಿದ್ದಾರೆ ಅಂತಲೂ ನೋಡಿಕೊಳ್ಳಲಿ. ಅವರ ಪಟ್ಟಿಗೆ ಅವರೇ ಕನ್ನಡಿ ಹಿಡಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷ ಮೊದಲಿನಿಂದ ಈ ಸೀಟ್ ಗೆದ್ದುಕೊಂಡು ಬಂದಿದೆ. ಈಗಲೂ ಈ ಕ್ಷೇತ್ರ ಗೆದ್ದುಕೊಳ್ಳುತ್ತೇವೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಮತ ಹಾಕುತ್ತಾರೆ. ಕೆಲವು ಕಾರ್ಯಕರ್ತರು ಕೂಡ ನಾಮಿನೇಶನ್ ಹಾಕಿದ್ದಾರೆ. ಕಾನೂನು ಸಲಹೆ ಪಡೆದು ಅವರನ್ನು ವಾಪಸ್ಸು ತೆಗೆಸುವ ಕೆಲಸ ಮಾಡುತ್ತೇನೆ ಎಂದರು.

ಬೆಳಗಾವಿಯಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಒಬ್ಬ ಅಭ್ಯರ್ಥಿಯನ್ನು ಬೆಳಗಾವಿಯಲ್ಲಿ ನಿಲ್ಲಿಸಿದ್ದೇವೆ. ಬಿಜೆಪಿಯವರು ಎಷ್ಟು ಮಂದಿಯನ್ನು ಬೇಕಾದರೂ ಹಾಕಲಿ. ಇಬ್ಬರಾದರೂ ಸರಿ, ನಾಲ್ವರಾದರೂ ಸರಿ. ಅದಕ್ಕೂ ನಮಗೂ ಸಂಬಂಧವಿಲ್ಲ. ವಿವೇಕ್ ರಾವ್ ಪಾಟೀಲ್ ಕಾಂಗ್ರೆಸ್​ನಲ್ಲಿ ಇರಲಿಲ್ಲ. ಕಾಂಗ್ರೆಸ್​ನಲ್ಲಿ ಅರ್ಜಿ ಹಾಕಿದ್ರು. ಕಾಂಗ್ರೆಸ್ ಸದಸ್ಯ ಆಗ್ತೇನೆ ಅಂತ ಬಂದಿದ್ರು. ಮೊದಲಿನಿಂದ ಪಾಟೀಲ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕ ಯಡಿಯೂರಪ್ಪ ಹೇಳಿಕೆಗಳನ್ನು ಗಮನಿಸಿದ್ದೇನೆ. ಬಿಜೆಪಿಯು ಅಶಿಸ್ತಿಗೆ ಗೌರವ ಕೊಡುತ್ತದೆ ಅಂದರೆ ಕೊಟ್ಟುಕೊಳ್ಳಲಿ. ನಮ್ಮ ‌ಪಕ್ಷದಿಂದ ಒಬ್ಬ ಅಭ್ಯರ್ಥಿ ಮಾತ್ರವೇ ಇರುತ್ತಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಯಾವ ಬಣ ರಾಜಕೀಯವೂ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ ಇದನ್ನೂ ಓದಿ: ಮಳೆಯಿಂದ ಹಾನಿ: 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಬಸವರಾಜ ಬೊಮ್ಮಾಯಿ ಸೂಚನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada