ಜೆಡಿಎಸ್ ಕಚೇರಿಯ ಗೋಡೆಗೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು
ಕರೆಂಟ್ ಕದ್ದರೂ ಹೆಚ್ಡಿಕೆ ಪ್ರಮಾಣಿಕತೆಯನ್ನು ಮೆಚ್ಚಲೇಬೇಕು. ಕುಮಾರಸ್ವಾಮಿಯವರೇ 200 ಯುನಿಟ್ ಉಚಿತವಾಗಿದೆ ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ. ಕರೆಂಟ್ ಕಳ್ಳ ಕುಮಾರಸ್ವಾಮಿ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು, ನವೆಂಬರ್ 14: ಬೆಂಗಳೂರಿನ ಜೆಡಿಎಸ್ (JDS) ಕಚೇರಿಯ ಗೋಡೆಗಳಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್ಗಳು ಮಂಗಳವಾರ ರಾತ್ರಿ ಕಂಡುಬಂದಿದೆ. ಕಾಂಗ್ರೆಸ್ (Congress) ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿವಾಸದ ದೀಪಾಲಂಕಾರಕ್ಕೆ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ಆರೋಪ ಎದುರಿಸುತ್ತಿರುವ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಲು ಕಾಂಗ್ರೆಸ್ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕರೆಂಟ್ ಕದ್ದರೂ ಹೆಚ್ಡಿಕೆ ಪ್ರಮಾಣಿಕತೆಯನ್ನು ಮೆಚ್ಚಲೇಬೇಕು. ಕುಮಾರಸ್ವಾಮಿಯವರೇ 200 ಯುನಿಟ್ ಉಚಿತವಾಗಿದೆ ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ. ಕರೆಂಟ್ ಕಳ್ಳ ಕುಮಾರಸ್ವಾಮಿ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಕುಮಾರಸ್ವಾಮಿ ವಿರುದ್ಧ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆ 135ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ದಾಖಲಾಗಿದೆ.
ಕುಮಾರಸ್ವಾಮಿ ಅವರ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಬಳಸಿದ ವಿಚಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದು, ತಮ್ಮ ಅರಿವಿಗೆ ಬಾರದೆ ಪ್ರಮಾದವಾಗಿದೆ. ಬೆಸ್ಕಾಂ ಅಧಿಕಾರಿಗಳ ತನಿಖೆಗೆ ಸಹಕರಿಸುವೆ. ದಂಡ ಪಾವತಿಸುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಪಡೆದ ಪ್ರಕರಣ: ಹೆಚ್ಡಿ ಕುಮಾರಸ್ವಾಮಿ ವಿರುದ್ಧ FIR
ಇನ್ನು ಕುಮಾರಸ್ವಾಮಿ ಪುತ್ರ ನಿಖಿಲ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮಿಂದ ಆ ರೀತಿಯ ತಪ್ಪೇನಾದರೂ ಆಗಿದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ