ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ: ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್, ಇನ್ಸ್‌ಪೆಕ್ಟರ್ ಮಾರುತಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ಆರೋಪ ಈ ಮೊದಲು ಕೇಳಿಬಂದಿತ್ತು. ಆದರ್ಶ್ ಅಯ್ಯರ್ ಖಾಸಗಿ ದೂರು ದಾಖಲಿಸಿದ್ದರು.
ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಸ್ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್, ಇನ್ಸ್‌ಪೆಕ್ಟರ್ ಮಾರುತಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ಆರೋಪ ಈ ಮೊದಲು ಕೇಳಿಬಂದಿತ್ತು. ಆದರ್ಶ್ ಅಯ್ಯರ್ ಖಾಸಗಿ ದೂರು ದಾಖಲಿಸಿದ್ದರು.
ರಮೇಶ್ ಜಾರಕಿಹೊಳಿ ಕೇಸ್‌ನ ತನಿಖೆ ಮುಕ್ತಾಯವಾಗಿದೆ. ಕಾನೂನು ಪ್ರಕಾರವೇ ತನಿಖೆ ನಡೆಸಲಾಗಿದೆ . ಅಂತಿಮ ವರದಿ ಸಲ್ಲಿಸಲು ಅನುಮತಿ ಕೋರಲಾಗಿದೆ. ಹೈಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ 8ನೇ ಎಸಿಎಂಎಂ ಕೋರ್ಟ್ ಆದೇಶ ರದ್ದಿಗೆ ಮನವಿ ಮಾಡಲಾಗಿದೆ. ಎಸ್‌ಐಟಿ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದರು. ಇದೀಗ, ಪೊಲೀಸ್ ಅಧಿಕಾರಿಗಳ ವಿರುದ್ಧದ ತನಿಖೆ ರದ್ದುಗೊಳಿಸಿ ಆದೇಶ ನೀಡಲಾಗಿದೆ.
ಎಸ್ಐಟಿ ರಚನೆಗೆ ಯುವತಿ ಪರ ವಕೀಲರ ಆಕ್ಷೇಪ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (Special Investigative Team – SIT) ಸಲ್ಲಿಸಿರುವ ತನಿಖಾ ವರದಿಗೆ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಒಪ್ಪಿಗೆ ನೀಡಿದ್ದಾರೆ ಎಂದು ಹೈಕೋರ್ಟ್‌ಗೆ ಎಸ್ಐಟಿ ಪರ ವಕೀಲ ಪ್ರಸನ್ನಕುಮಾರ್ ಹೇಳಿದ್ದರು. ನ್ಯಾಯಮೂರ್ತಿಗಳ ಸೂಚನೆಯ ಮೇರೆಗೆ ಸೌಮೇಂದು ಮುಖರ್ಜಿ ಅವರು ಎಸ್ಐಟಿ ತನಿಖೆ ಪರಿಶೀಲಿಸಿ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದರು. ಎಸ್ಐಟಿ ಮುಖ್ಯಸ್ಥರ ವರದಿಯನ್ನು ಹೈಕೋರ್ಟ್ ಮಂಗಳವಾರ ಪರಿಶೀಲಿಸಿತ್ತು.
ಎಸ್ಐಟಿ ತನಿಖಾ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ತನಿಖಾ ವರದಿ ಸಲ್ಲಿಕೆಗೆ ನನ್ನ ಸಮ್ಮತಿಯಿದೆ ಎಂದು ತಮ್ಮ ವರದಿಯಲ್ಲಿ ಸೌಮೇಂದು ಮುಖರ್ಜಿ ಉಲ್ಲೇಖಿಸಿದ್ದರು. ಹೀಗಾಗಿ ಅಂತಿಮ ವರದಿ ಸಲ್ಲಿಸಲು ತಕರಾರೇಕೆ? ಅಂತಿಮ ವರದಿಯಲ್ಲಿ ಸಮಸ್ಯೆ ಇದ್ದರೆ ಯುವತಿ ಪ್ರಶ್ನಿಸಲಿ. ಈಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation – PIL) ಬಾಕಿ ಇಡುತ್ತೇವೆ. ಯುವತಿ ಎತ್ತಿರುವ ಪ್ರಶ್ನೆಗಳನ್ನು ನಂತರ ಪರಿಶೀಲಿಸಬಹುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅಭಿಪ್ರಾಯಪಟ್ಟಿದ್ದರು.
ಏನಿದು ಪ್ರಕರಣ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವ ಎನಿಸಿದ್ದ ರಮೇಶ್ ಜಾರಕಿಹೊಳಿ ಉದ್ಯೋಗದ ಆಮಿಷವೊಡ್ಡಿ ಯುವತಿಯೊಬ್ಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ಆರೋಪ ಪ್ರಬಲವಾಗಿ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಸಿಡಿಯೊಂದು ಬಹಿರಂಗಗೊಂಡು ಸದ್ದು ಮಾಡಿತ್ತು. ಆರಂಭದಲ್ಲಿ ತಮ್ಮ ಮೇಲಿನ ಆರೋಪ ತಳ್ಳಿಹಾಕಿದ್ದ ರಮೇಶ್ ಜಾರಕಿಹೊಳಿ ನಂತರದ ದಿನಗಳಲ್ಲಿ ಇದು ಸಹಮತದ ಲೈಂಗಿಕ ಸಂಪರ್ಕ ಎಂದು ಒಪ್ಪಿಕೊಂಡಿದ್ದರು. ಇದೇ ಪ್ರಕರಣದ ಕಾರಣದಿಂದ ಅವರು ತಮ್ಮ ಸಚಿವ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದ ಕರ್ನಾಟಕ ಸರ್ಕಾರವು ಸಮಗ್ರ ತನಿಖೆಗೆ ಆದೇಶಿಸಿತ್ತು.
ಇದನ್ನೂ ಓದಿ: ಪತ್ನಿಯ ದೂರವಾಣಿ ಸಂಭಾಷಣೆಯನ್ನು ಆಕೆಗೆ ತಿಳಿಯದೆ ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆ: ಹೈಕೋರ್ಟ್
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಎಸ್ಐಟಿ ರಚನೆಗೆ ಯುವತಿ ಪರ ವಕೀಲರ ಆಕ್ಷೇಪ
Published On - 8:57 pm, Tue, 14 December 21