AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸ್ಥಾನಕ್ಕೆ ಪತ್ನಿ ಶಾಲಿನಿ‌ ರಜನೀಶ್?

ಅದು ಸರ್ಕಾರದ ಬಹು ದೊಡ್ಡ ಹಾಗೂ ಮಹತ್ವದ ಹುದ್ದೆ. ರಾಜ್ಯದ ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಈ ಹುದ್ದೆನೇ ಸುಪ್ರೀಂ. ಈಗ ಇದೇ ಸ್ಥಾನಕ್ಕೆ ನೂತನ ಅಧಿಕಾರಿಯೊಬ್ಬರು ನೇಮಕವಾಗಬೇಕಾದ ಸಮಯ ಬಂದಿದೆ.. ವಿಶೇಷವೆಂದ್ರೆ ಇದೇ ಹುದ್ದೆಯನ್ನ ಪತಿ ನಂತ್ರ ಪತ್ನಿ ಅಲಂಕರಿಸುತ್ತಿರೋದು ವಿಶೇಷದ್ರದಲ್ಲೇ ವಿಶೇಷ.

ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸ್ಥಾನಕ್ಕೆ ಪತ್ನಿ ಶಾಲಿನಿ‌ ರಜನೀಶ್?
ರಜನೀಶ್ ಗೋಯಲ್, ಪತ್ನಿ ಶಾಲಿನಿ‌ ರಜನೀಶ್
TV9 Web
| Updated By: ಆಯೇಷಾ ಬಾನು|

Updated on:Jul 17, 2024 | 7:55 AM

Share

ಬೆಂಗಳೂರು, ಜುಲೈ.17: ಸಿಎಸ್.. ಅಂದ್ರೆ ಸರ್ಕಾರದ ಮುಖ್ಯ ಕಾರ್ಯದರ್ಶಿ. ‌ಇದು ರಾಜ್ಯದ ಆಡಳಿತ ಯಂತ್ರಕ್ಕೆ ವೇಗ ನೀಡುವ ಬಹುದೊಡ್ಡ ಹುದ್ದೆ. ಮೇಲಿಂದ ರಾಜ್ಯದ ಎಲ್ಲಾ ಐಎಎಸ್ (IAS) ಅಧಿಕಾರಿಗಳಿಗೆ ಇವರೇ ಬಾಸ್. ಇದೇ ಹುದ್ದೆಯನ್ನ ಅಲಂಕರಿಸೋದಕ್ಕೆ ಹಿರಿತನ‌ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಲ್ಲಿ ವಿಷ್ಯ ಏನಂದ್ರೆ ಸದ್ಯ ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರೋ ರಜನೀಶ್ ಗೋಯಲ್ ಇದೇ ತಿಂಗಳು ಕೊನೆಯಲ್ಲಿ ನಿವೃತ್ತಿಯಾಗ್ತಿದ್ದಾರೆ.‌ ಇದೇ ಸ್ಥಾನಕ್ಕೆ ಮತ್ತ್ಯಾರನ್ನ ನೇಮಕ ಮಾಡ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ, ಹಾಲಿ ಸಿಎಸ್ ಅವರ ಸ್ಥಾನವನ್ನ ಪತ್ನಿ ಶಾಲಿನಿ ರಜನೀಶ್ ತುಂಬ್ತಾರೆ ಅನ್ನೋ ಗುಲ್ಲೇದಿದೆ.

ರಜನೀಶ್ ಗೋಯಲ್, 1986ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಇದೇ ರಜನೀಶ್ ಗೋಯೆಲ್ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದ್ರೆ ಇದೇ ತಿಂಗಳ ಅಂತ್ಯಕ್ಕೆ ರಜನೀಶ್ ಗೋಯಲ್ ನಿವೃತ್ತಿ ಹೊಂದುತ್ತಿದ್ದಾರೆ. ಹೀಗಾಗಿ ತೆರವಾದ ಸಿಎಸ್ ಸ್ಥಾನಕ್ಕೆ ಇವರ ಪತ್ನಿ ಶಾಲಿನಿ ರಜನೀಶ್‌ ಹೆಸರು ಕೇಳಿ‌ ಬರ್ತಿದೆ.

ಇಲ್ಲಿ‌‌ ವಿಷ್ಯ ಏನಂದ್ರೆ, ರಜನೀಶ್ ಗೋಯಲ್‌ ನಂತ್ರದಲ್ಲಿ‌ ಸಿಎಸ್ ಹುದ್ದೆಗೆ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ಹೆಸರು ಮುನ್ನಲೆ ಬಂದಿದೆ. ಅದ್ರಲ್ಲೂ ಹಿರಿತನ ಆಧಾರದ ಮೇಲೆ ಶಾಲಿನಿ ರಜನೀಶ್‌ ಹಾಗೂ ಅಜಯ್ ಸೇಠ್ ಹೆಸರು ಕೇಳಿ‌ಬರ್ತಿದೆ. ಈ ಇಬ್ಬರ ಪೈಕಿ ಶಾಲಿನಿ ರಜನೀಶ್ ಅವರೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ. ಆದ್ರೆ ಸಿಎಸ್ ನೇಮಕದ ಬಗ್ಗೆ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

IAS ಅಧಿಕಾರಿ ಶಾಲಿನಿ‌‌ ರಜನೀಶ್ ಹಾಗೂ ಅಜಯ್‌ ಸೇಠ್ ಇಬ್ಬರೂ 1989ನೇ ಬ್ಯಾಚ್ನ ಅಧಿಕಾರಿಗಳು. ಅದ್ರಲ್ಲಿ ಶಾಲಿನಿ ರಜನೀಶ್ 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಮತ್ತೊಂದ್ಕಡೆ ಜೇಷ್ಠತೆಯ ಆಧಾರದ ಮೇಲೆ ಹೋದ್ರೆ ಅಜಯ್ ಸೇಠ್‌ ಹೆಸರು ಮುನ್ನಲೆಗೆ ಬರ್ತಿದೆ. ಆದ್ರೆ ಅವರು ಸದ್ಯ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ. ಮೇಲಿಂದ ಕೇಂದ್ರದಲ್ಲಿ ಉನ್ನತ ಹುದ್ದೆ‌ ಕೂಡ ಹೌದು. ಜೊತೆಗೆ ಅವ್ರ ಅಧಿಕಾರಾವಧಿ 2025ರ ಜೂನ್‌ಗೆ ಕೊನೆಗೊಳ್ಳುತ್ತದೆ. ಹೀಗಿದ್ದಾಗ ಕೇಂದ್ರ ಬಿಟ್ಟು ರಾಜ್ಯಕ್ಕೆ ಬರೋದಕ್ಕೆ ಅಜಯ್ ಸೇಠ್ ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಲಾಲ್​ ಬಾಗ್ ಫ್ಲವರ್ ಶೋ ದಿನಾಂಕ ನಿಗದಿ: ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿದೆ ಹಲವು ವಿಶೇಷ

ಈಗಾಗಲೇ ಶಾಲಿನಿ ರಜನೀಶ್ ಹೆಚ್ಚುವರಿ ಸಿಎಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಲಿಂದ ಸುದೀರ್ಘ ಅಧಿಕಾರ ಅವಧಿ ಇರುವ ಅಧಿಕಾರಿಯನ್ನು ನೇಮಕ ಮಾಡಿದ್ರೆ ಆಡಳಿತ ಯಂತ್ರ ಸುಗಮವಾಗಿ ಸಾಗಬಹುದು ಅನ್ನೋ ಲೆಕ್ಕಾಚಾರ ರಾಜ್ಯ ಸರ್ಕಾರದ್ದು ಕೂಡ. ಇದೇ ಕಾರಣದಿಂದ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಸರ್ಕಾರದ್ದು ಇದೆ.

ಕರ್ನಾಟಕದ ಇತಿಹಾಸದಲ್ಲಿ CS ಹುದ್ದೆಗೇರಿದ ಮೂರನೇ‌ ಜೋಡಿಯಾಗ್ತಾರಾ ರಜನೀಶ್ ದಂಪತಿ?

ವಿಶೇಷದಲ್ಲೇ ವಿಶೇಷ ಇದು. ಒಂದ್ವೇಳೆ ಶಾಲಿನಿ‌ ರಜನೀಶ್ ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ನೇಮಕವಾದ್ರೆ, ಕರ್ನಾಟಕದ ಇತಿಹಾಸದಲ್ಲಿ CS ಹುದ್ದೆಗೇರಿದ ಮೂರನೇ‌ ಜೋಡಿ‌ ರಜನೀಶ್ ದಂಪತಿ ಎಂಬ ಹೆಗ್ಗಳಿಕೆ ಪಾತ್ರರಾಗ್ತಾರೆ. ಯಾಕಂದ್ರೆ ಈ ಹಿಂದೆ ಅಂದ್ರೆ 2000ರಲ್ಲಿ ಬಿಕೆ ಭಟ್ಟಾಚಾರ್ಯ ಸಿಎಸ್ ಆಗಿ ಕಾರ್ಯನಿರ್ವಹಿಸಿದ್ರು. ಇವರ ನಂತ್ರ ಅಂದ್ರೆ 2001ರಲ್ಲಿ ತೆರಸಾ ಭಟ್ಟಾಚಾರ್ಯ ಸಿಎಸ್ ಆಗಿ ಕೆಲಸ‌ ಮಾಡಿದ್ರು. ಇನ್ನೂ 2006 ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಬಿಕೆ ದಾಸ್ ಹಾಗೂ ಮಾಲತಿ ದಾಸ್ ದಂಪತಿ ಕಾರ್ಯನಿರ್ವಹಿಸಿದ್ರು. ಈಗ ಬರೋಬ್ಬರಿ 18 ವರ್ಷಗಳ ನಂತ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನವನ್ನ ಮತ್ತೊಂದು ದಂಪತಿ ಅಲಂಕರಿಸಿದಂತಾಗುತ್ತದೆ. ಆದ್ರೆ ಇದು ಇನ್ನೂ ಅಂತಿಮವಾಗಿಲ್ಲ. ರಾಜ್ಯ ಸರ್ಕಾರ ಮನಸ್ಸು ಮಾಡಿದ್ರೆ ಶಾಲಿನ ರಜನೀಶ್ ಮುಂದಿನ ರಾಜ್ಯ ಮುಖ್ಯ ಕಾರ್ಯದರ್ಶಿ ಆಗಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:54 am, Wed, 17 July 24