
ಬೆಂಗಳೂರು, ಡಿಸೆಂಬರ್ 16: ಕಾಂಡಿಮೆಂಟ್ಸ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಕುಟುಂಬವೊಂದು ಸಣ್ಣ ಸ್ವಂತ ಸೂರಿನ ಕನಸು ಕಂಡಿತ್ತು. ಜೀವನಪೂರ್ತಿ ದುಡಿದ ಹಣ, ಸಾಲಶೂಲ ಮಾಡಿ ಸಂಗ್ರಹಿಸಿದ ಒಂದಿಷ್ಟು ಕಾಸಿನ ಜೊತೆಗೆ ಬಂಗಾರವನ್ನು ಮನೆಯ ಕಪಾಟಿನಲ್ಲಿ ಭದ್ರವಾಗಿ ಇಟ್ಟಿತ್ತು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಮನೆಯಿಂದ ಆಚೆ ಹೋಗಿ ಬರುವಷ್ಟರಲ್ಲಿ ಅವೆಲ್ಲವೂ ಕಳುವಾಗಿದೆ. ಹಾಡಹಗಲೇ ನಡೆದ ಘಟನೆಗೆ ಕುಟುಂಬ ಕಂಗಾಲಾಗಿದೆ.
ಬೆಂಗಳೂರಿನ ಭಾರತ್ ನಗರದ ಮುನೇಶ್ವರ ಬಡಾವಣೆಯಲ್ಲಿರುವ ಮಾಯಣ್ಣಗೌಡ ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯಲ್ಲಿದ್ದ 20 ಲಕ್ಷ ರೂ. ನಗದು ಮತ್ತು 20 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳುವು ಮಾಡಲಾಗಿದೆ. ನಿನ್ನೆ ಸಂಜೆ 4ರಿಂದ 7 ಗಂಟೆಯ ಅವಧಿಯಲ್ಲಿ ಘಟನೆ ನಡೆದಿದ್ದು, ಸಣ್ಣದೊಂದು ಮನೆ ಖರೀದಿಸುವ ಕನಸು ಕಂಡಿದ್ದ ಕುಟುಂಬ ಅಕ್ಷರಶಃ ಬೆಚ್ಚಿಬಿದ್ದಿದೆ. ಜೀವಮಾನವಿಡೀ ದುಡಿದು ಗಳಿಸಿದ್ದ ಸಂಪತ್ತಿನ ಜೊತೆ ಸಾಲ ಮಾಡಿ ತಂದಿದ್ದ ಮತ್ತು ತಾಯಿ ಕೂಡಿಟ್ಟ ಹಣ ಎಲ್ಲವೂ ಕಳುವಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: 4 ಕಳ್ಳತನ ಪ್ರಕರಣ ಭೇದಿಸಿದ ಕಲಬುರಗಿ ಪೊಲೀಸ್; 6 ಖದೀಮರ ಬಂಧನ
ಹಾಸನ ಮೂಲದವರಾಗಿರೊ ಮಾಯಣ್ಣಗೌಡ ಕಾಂಡಿಮೆಂಟ್ಸ್ ಶಾಪ್ ಒಂದನ್ನು ನಡೆಸುತ್ತಿದ್ದು, ಮುಂಜಾನೆಯಿಂದ ರಾತ್ರಿಯವರೆಗೂ ಅಲ್ಲೇ ಕೆಲಸ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಮಾಯಣ್ಣಗೌಡ ಶಾಪ್ಗೆ ತೆರಳಿದ್ರೆ, ಅವರ ಪತ್ನಿ 11 ಗಂಟೆಗೆ ಅಂಗಡಿಗೆ ಬಂದ ಮೇಲೆಯೇ ಮನೆಗೆ ಬಂದು ಕೊಂಚ ವಿಶ್ರಾಂತಿ ಪಡೆಯುತ್ತಿದ್ದರು. ಸಂಜೆ 4 ಗಂಟೆಗೆ ಮಗಳು ಶಾಲೆಯಿಂದ ಬಂದ ಬಳಿಕ ಆಕೆಯನ್ನು ಕರೆದುಕೊಂಡು ಮತ್ತೆ ಅಂಗಡಿಗೆ ಹೋಗ್ತಿದ್ರು. ಅವರ ಪತ್ನಿ ಮಗಳನ್ನು ಕರೆದುಕೊಂಡು ಸಂಜೆ 7 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗೋದು ಈ ಕುಟುಂಬದ ದಿನಚರಿ. ಅದರಂತೆ ನಿನ್ನೆ ಸಂಜೆ ಮಾಯಣ್ಣಗೌಡ ಪತ್ನಿ ಮನೆಗೆ ಹೋದಾಗ ಕಳ್ಳತನ ನಡೆದಿರೋದು ಗೊತ್ತಾಗಿದೆ. ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ, ಕಬೋರ್ಡ್‌ನ ಲಾಕ್ ಕೂಡ ಒಡೆದು ಕಳುವು ಮಾಡಿದ್ದು ಕಂಡು ಆಕೆ ಬೆಚ್ಚಿಬಿದ್ದಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.