ಭ್ರಷ್ಟಾಚಾರ ರಹಿತ ಕಾರ್ಪೊರೇಷನ್ ಆಗಬೇಕು; ಬಿಬಿಎಂಪಿ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ನೀಡಿದ ಖಡಕ್ ಸೂಚನೆಗಳಿವು
ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಬಿಬಿಎಂಪಿಯನ್ನು ಭ್ರಷ್ಟಾಚಾರ ರಹಿತ ಕಾರ್ಪೊರೇಷನ್ ಆಗಿ ರೂಪಿಸಿ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು: ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಬಿಬಿಎಂಪಿಯನ್ನು (BBMP) ಭ್ರಷ್ಟಾಚಾರ ರಹಿತ ಕಾರ್ಪೊರೇಷನ್ ಆಗಿ ರೂಪಿಸಿ ಎಂದು ಬೆಂಗಳೂರು ನಗರ ಅಭಿವೃದ್ಧಿ (Bangalore Development) ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಾನು ಗ್ರಾಮೀಣ ಕ್ಷೇತ್ರದ ರಾಜಕಾರಣಿಯಾದರೂ ಓದಿದ್ದು ನಗರದಲ್ಲಿಯೇ. ಮುಖ್ಯಮಂತ್ರಿಯವರು ನಗರದ ಖಾತೆಗಳನ್ನು ನಿಭಾಯಿಸುವ ಟಾಸ್ಕ್ ನೀಡಿದ್ದಾರೆ. ಅದನ್ನು ನಿಭಾಯಿಸುವೆ ಎಂದರು.
ರಾಜ್ಯದಲ್ಲಿ ಶೇ 42ರಷ್ಟು ನಗರ ಜನಸಂಖ್ಯೆ ಏರಿದೆ. ನಗರದಲ್ಲಿ ಕೋಟಿಗೂ ಅಧಿಕ ಜನರಿದ್ದಾರೆ. ಹೊರಗಿನಿಂದ ಬರುವವರಿಗೂ ಸೌಕರ್ಯ ಕಲ್ಪಿಸಬೇಕಿದೆ. ಬೆಂಗಳೂರಿನ ಮುಖಾಂತರ ಭಾರತವನ್ನು ನೋಡುವ ಕಾಲ ಬಂದಿದೆ. ಬಿಡಿಎನಲ್ಲೂ ಯೋಜನೆಗಳ ಬಗ್ಗೆ ಮಾತುಕತೆ ನಡೆಸುತ್ತೇನೆ. ಸಾಧ್ಯವಾದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ. ಇದಕ್ಕೆ ತಯಾರಾಗಿ ಇರುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಭ್ರಷ್ಟಾಚಾರ ರಹಿತ ಪಾಲಿಕೆಯಾಗಬೇಕು ಎಂದು ಸೂಚನೆ ನೀಡಿದ್ದೇನೆ. ಸಾಮಾನ್ಯರನ್ನು ಗೌರವದಿಂದ ಕಾಣುವಂತೆ ಸೂಚಿಸಿದ್ದೇನೆ. ಡಬ್ಬಲ್ ಬಿಲ್, ಸಸ್ಪೆನ್‌ಶನ್ ದೊಡ್ಡದಲ್ಲ. ಅದರ ಪರಿಣಾಮವನ್ನು ಎದುರಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಸೂಚಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಬಿಬಿಎಂಪಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡಿ. ಜನಸ್ನೇಹಿ, ಪಾರದರ್ಶಕವಾಗಿ ಆಡಳಿತ ನಡೆಸಬೇಕು. ರಾಜ್ಯ, ಕೇಂದ್ರ ಸರ್ಕಾರದ ಮೇಲೆ ಅನುದಾನಕ್ಕೆ ಅವಲಂಬಿತರಾಗದೆ ಇರುವ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಪರ ಕೆಲಸಮಾಡಿ. ನಿಷ್ಠೆ, ಪ್ರಮಾಣಿಕತೆಯಿಂದ ನಡೆದುಕೊಳ್ಳುವಂತೆ ಸೂಚಿಸಿದ್ದೇನೆ. ಕೇವಲ ಬಿಲ್ಗಾಗಿ ಕಾಮಗಾರಿ ನಡೆಸಬೇಡಿ, ಸಿಕ್ಕಿಹಾಕಿಕೊಳ್ಳಬೇಡಿ. ಕೇವಲ ಅಮಾನತು ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯವಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.
ಡಿಕೆ ಶಿವಕುಮಾರ್ ನೀಡಿದ ಸಲಹೆ, ಸೂಚನೆಗಳು
- ಕಳೆದ ಮೂರು ವರ್ಷಗಳಿಂದ ಬೆಂಗಳೂರಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಆ ಕೆಲಸ ಆಗಿದೆ, ಅದಕ್ಕೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು.
- ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗಾರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು.
- ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು.
- ಯಾವ ಕಾಮಗಾರಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡಬೇಕು.
- ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ.
- ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ.
- ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ.
- ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ.
- ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ.
- ಕಣ್ಣಲ್ಲಿ ಕಂಡಿದ್ದು ಮಾತ್ರವೇ ನಂಬಿಕೆಗೆ ಅರ್ಹ. ಹೀಗಾಗಿ ಕಣ್ಣಲ್ಲಿ ನೋಡಿ ನಂಬೋಣ.
- ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ಗಳು ಇರುವುದರ ಔಚಿತ್ಯವಾದರೂ ಏನು?
- ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ?
- ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು.
- ಹಾಗೇ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು.
- ಒಣ ಮತ್ತು ಹಸಿಕಸ ವೈಜ್ಞಾನಿಕ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು.
- ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು.
- ಅಕ್ರಮಗಳಿಗೆ ಆಸ್ಪದ ಇಲ್ಲದಂತೆ ಟಿಡಿಆರ್ ಯೋಜನೆ ಜಾರಿಗೆ ತರಬೇಕು.
- ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು.
- ಯಾವುದೇ ಯೋಜನೆ ಕಾಮಗಾರಿ ಆರಂಭಕ್ಕೆ ಮುನ್ನ ಆ ಜಾಗದ ವಿಡಿಯೋ, ಫೋಟೋ ಮಾಡಿಡಿ.
- ನಿಜವಾಗಿಯೂ ಜನರ ಉಪಯೋಗಕ್ಕೆ ಆ ಯೋಜನೆ ಆಗುತ್ತಿದೆಯೋ ಅಥವಾ ಇನ್ಯಾರಾದರೂ ಪ್ರಭಾವಿಗಳ ಅನುಕೂಲಕ್ಕೆ ಆ ಯೋಜನೆ ಆಗುತ್ತಿದೆಯೋ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗಲಿ.
- ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ತಡೆಯಾಗಿರುವ ಬಾಟಲ್ ನೆಕ್ ಸ್ಥಳಗಳನ್ನು ಗುರುತಿಸಿ, ಸರಿಪಡಿಸಿ.
- ಮಳೆ ನೀರು ಸಮಸ್ಯೆಯಿಂದ ನಮಗೆ ಮತ್ತು ನಿಮಗಿಂತ ಹೆಚ್ಚಾಗಿ ಬೆಂಗಳೂರಿಗೇ ಕೆಟ್ಟ ಹೆಸರು ಬರುತ್ತಿದೆ.
- ಇದನ್ನು ನಿವಾರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು.
- ಬಿಬಿಎಂಪಿ ಸಮುದ್ರ ಇದ್ದಂತೆ. ಎಲ್ಲಿ ತೆಲುತ್ತೇವೆಯೋ, ಎಲ್ಲಿ ಮುಳುಗುತ್ತೇವೆಯೋ ಗೊತ್ತಿಲ್ಲ.
- ರಾಜಕಾರಣಿಗಳು, ಅಧಿಕಾರಿಗಳು ಸೇರಿ ಏನೆಲ್ಲಾ ಮಾಡುತ್ತಾರೆ ಎಂಬುದು ಗೊತ್ತಿದೆ.
- ಬೆಂಗಳೂರು ಬರೀ ಕರ್ನಾಟಕ್ಕದ್ದಲ್ಲ, ಇಡೀ ದೇಶದ ಆಸ್ತಿ.
- ನಮ್ಮ ಚುನಾವಣೆ ಹೋರಾಟವೇ ಭ್ರಷ್ಟಾಚಾರ ವಿರುದ್ಧದ್ದು. ಎಲ್ಲರೂ ಕೆಟ್ಟವರು ಎಂದು ಹೇಳಲ್ಲ. ಒಳ್ಳೆಯವರೂ ಇದ್ದಾರೆ.
- ಆ ಮಂತ್ರಿಗೆ, ಈ ಮಂತ್ರಿಗೆ, ಶಾಸಕರಿಗೆ, ಅವರಿಗೆ ಇವರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ.
- ನಾನೊಬ್ಬನೇ ಏನೊ ಮಾಡುತ್ತೇನೆ ಎಂಬ ಭ್ರಮೆ ಇಲ್ಲ. ನಾವು ನೀವು ಸೇರಿ ಕೆಲಸ ಮಾಡೋಣ.
- ಸಮಯದ ಮಿತಿ ಇಲ್ಲದೇ ದುಡಿಯಬೇಕು. 100% ಬದ್ಧತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿ.
- ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ.
- ಪನಿಶ್ಮೆಂಟ್ ಕೊಡೋದು ದೊಡ್ಡ ಕೆಲಸ ಅಲ್ಲ. ಅದಕ್ಕೆ ಆಸ್ಪದ ಕೊಡಬೇಡಿ. ಒಳ್ಳೆ ಕೆಲಸ ಮಾಡಿ. ಒಳ್ಳೆ ಹೆಸರು ಪಡೆಯಿರಿ. ಸರಕಾರಕ್ಕೆ ಒಳ್ಳೆ ಹೆಸರು ತನ್ನಿ.
- ಹಿಂದಿನ ಸರಕಾರದ ಅವಧಿಯಲ್ಲಿ ಯಾರ್ಯಾರಿಗೋ ಬೂತ್ ಲೆವೆಲ್ ಆಫೀಸರ್ ಅಂತ ಲೆಟರ್ ಕೊಟ್ರಲ್ಲ, ನಿಮಗೆ ಬುದ್ಧಿ ಇರಲಿಲ್ಲವಾ?
- ಯಾರ್ಯಾರು ಏನೇನೂ ಮಾಡಿದರು, ಎಷ್ಟೆಷ್ಟು ಭ್ರಷ್ಟಾಚಾರ ಮಾಡಿದರು ಅಂತ ಗೊತ್ತಿದೆ.
- ಈಗ ಬದಲಾವಣೆ ಮಾಡಿಕೊಳ್ಳಿ. ಈ ಸರಕಾರ ಬದಲಾವಣೆ ತಂದಿದೆ ಎಂದು ಜನರಿಗೆ ಮನವರಿಕೆ ಆಗುವಷ್ಟರ ಮಟ್ಟಿಗೆ ಉತ್ತಮವಾಗಿ ಕೆಲಸ ಮಾಡಿ. ನಿಮ್ಮ ಹಾಗೂ ಸರಕಾರದ ಗೌರವ ಉಳಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ