ಸಾರಿಗೆ ಇಲಾಖೆಯೊಂದಿಗೆ ನಾಳೆ ಸಚಿವ ರಾಮಲಿಂಗಾ ರೆಡ್ಡಿ ಸಭೆ: ಮಹಿಳೆಯರಿಗೆ ಉಚಿತ ಬಸ್ ಪಾಸ್ ಬಗ್ಗೆ ನಿರ್ಧಾರ
ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಂಬಂಧ ಮಂಗಳವಾರ ಬೆಂಗಳೂರಿನ ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ನಾಳೆಯ ಮಹತ್ವದ ಸಭೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಯಲಿದೆ.
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಂಬಂಧ ಮಂಗಳವಾರ ಬೆಂಗಳೂರಿನ ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ನಾಳೆಯ ಮಹತ್ವದ ಸಭೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ನೇತೃತ್ವದಲ್ಲಿ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸಾರಿಗೆ ಇಲಾಖೆಯ 4 ನಿಗಮಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ನಿಗಮಗಳ ಆದಾಯದಲ್ಲಿ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ. ಸರ್ಕಾರದ ಯೋಜನೆಯಾದ್ದರಿಂದ ನಿಗಮಗಳಿಂದ ಹಣ ಭರಿಸಲು ಆಗಲ್ಲ. ಈಗಾಗಲೇ ಈ ಅಂಶಗಳನ್ನು ಸಿಎಂ ಸಿದ್ಧರಾಮಯ್ಯ ಗಮನಕ್ಕೆ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ತಂದಿದ್ದಾರೆ.
ನಾಳೆ 4 ಸಾರಿಗೆ ನಿಗಮಗಳ ಹಣಕಾಸಿನ ಸ್ಥಿತಿ ಬಗ್ಗೆ ಅವಲೋಕಿಸಲಿರುವ ಸಚಿವರು, ಬಸ್ ಪಾಸ್ ಸಬ್ಸಿಡಿ ಬಗ್ಗೆ ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: ಉಚಿತ ಬಸ್ ಪ್ರಯಾಣ ಗ್ಯಾರಂಟಿಗೆ ಕಿಮೀ ಮಿತಿ ನಿಗದಿಗೆ ಚಿಂತನೆ; ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ
ಉಚಿತ ಬಸ್ ಪಾಸ್, ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಎಂ ಸೂಚನೆ
ಇನ್ನು ಉಚಿತ ಬಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣದ ಮಿತಿಯನ್ನು (ಕಿಲೋ ಮೀಟರ್) ಮಾನದಂಡ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಸೋಮವಾರ ಸಿಎಂ ಸಿದ್ಧರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಉಚಿತ ಬಸ್ ಪಾಸ್, ಫಲಾನುಭವಿಗಳ ಪಟ್ಟಿ ನೀಡಿ ಎಂದು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಯುವ ನಿಧಿ ಗ್ಯಾರಂಟಿ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ.
5 ಗ್ಯಾರಂಟಿಗಳಿಗೆ 50 ಸಾವಿರ ಕೋಟಿ ರೂ. ವೆಚ್ಚ ಸಾಧ್ಯತೆ
5 ಗ್ಯಾರಂಟಿಗಳಿಗೆ ವಾರ್ಷಿಕ ಒಟ್ಟು 50 ಸಾವಿರ ಕೋಟಿ ವೆಚ್ಚ ಸಾಧ್ಯತೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ರಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. BPL ಕಾರ್ಡ್ದಾರರಿಗೆ ‘ಗೃಹಲಕ್ಷ್ಮೀ’ ಯೋಜನೆಗೆ ವಾರ್ಷಿಕ 12 ಸಾವಿರ ಕೋಟಿ ವೆಚ್ಚ ಸಾಧ್ಯತೆ ಇದೆ. ತೆರಿಗೆ ಹೆಚ್ಚಳ ಸಂಬಂಧ ಸಭೆಯಲ್ಲಿ ಸಮಾಲೋಚನೆ ಮಾಡಲಾಗಿದ್ದು, ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬುದರ ಮಾಹಿತಿ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ನನ್ನಿಂದ ಸೋತಿದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು: ಇಂದ್ರೇಶ್ ಆರೋಪ ತಳ್ಳಿ ಹಾಕಿದ ಸಂಸದೆ ಸುಮಲತಾ
ಉಚಿತ ವಿದ್ಯುತ್ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಅನುಕೂಲ
ಸಭೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ವಿಸ್ತೃತವಾಗಿ ಚರ್ಚೆ ಆಗಿದ್ದು, ಉಚಿತ ವಿದ್ಯುತ್ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ವಾರ್ಷಿಕ ಬಳಕೆ ಅಂದಾಜು 13,575 ಮಿಲಿಯನ್ ಯೂನಿಟ್ ಅಗತ್ಯವಾಗಿದೆ. ಈ ಯೋಜನೆಗೆ ಅಂದಾಜು 8,008 ಕೋಟಿ ರೂ. ಇಂಧನ ಶುಲ್ಕ ತಗುಲಿಲಿದ್ದು, ಯೋಜನೆ ಜಾರಿಗೆ ಒಟ್ಟು 12,038 ಕೋಟಿ ರೂಪಾಯಿ ಅಗತ್ಯವಿದೆ ಎನ್ನಲಾಗುತ್ತಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Mon, 29 May 23