ಬೆಂಗಳೂರು, ಜುಲೈ 15: ಬೆಂಗಳೂರು ನಗರದ ಕೆಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾಮಗಾರಿಗೆ ಸೋಮವಾರ ಬೆಳಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಸದಾಶಿವನಗರದ ಭಾಷ್ಯಂ ಸರ್ಕಲ್ ಬಳಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ಅಶ್ವತ್ಥ್ ನಾರಾಯಣ, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು. ಇದೇ ವೇಳೆ, ಚಾಲಾಕಿ ಕಳ್ಳನೊಬ್ಬ ಡಿಕೆ ಶಿವಕುಮಾರ್ ಶೂ ಕಳವಾದ ಘಟನೆಯೂ ನಡೆಯಿತು.
ವೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆಗೂ ಮುನ್ನ ರಸ್ತೆಗೆ ಪೂಜೆ ನೆರವೇರಿಸಲಾಯಿತು. ಪೂಜೆಯಲ್ಲಿ ಭಾಗಿಯಾಗುವುದಕ್ಕಾಗಿ ಶೂ ಬಿಚ್ಚಿದ್ದ ಡಿಕೆ ಶಿವಕುಮಾರ್ಗೆ, ಪೂಜೆ ಮುಗಿಸಿ ಕಾರ್ ಬಳಿ ತೆರಳಿದಾಗ ಅಚ್ಚರಿ ಕಾದಿತ್ತು. ಕೆಲಕಾಲ ಶೂಗಾಗಿ ಹುಡುಕಾಡಿದ ಅವರು ನಂತರ ಕಾರಿನಲ್ಲಿದ್ದ ಬೇರೆ ಶೂ ಧರಿಸಿ ಹೊರಟರು.
ರಾಜಧಾನಿಯ ರಸ್ತೆಗಳಿಗೆ ವೈಟ್ ಟಾಪಿಂಗ್ ಟಚ್ ನೀಡಲು ಬಿಬಿಎಂಪಿ ಮುಂದಾಗಿದ್ದು, ಸುಮಾರು 150 ಕಿಮೀ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ. ಇದೀಗ ನಾಲ್ಕು ಕಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ವೈಟ್ ಟಾಪಿಂಗ್ ಕಾಮಗಾರಿ 1700 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದ್ದು, ಆರಂಭದಲ್ಲಿ 16.62 ಕಿಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ಮೊದಲಹಂತದಲ್ಲಿ ಬಿಬಿಎಂಪಿ ಪಶ್ಚಿಮ ವಲಯದಲ್ಲಿ 198 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಇದನ್ನೂ ಓದಿ: ಬೆಂಗಳೂರು ವೈಟ್ ಟಾಪಿಂಗ್ ಕಾಮಗಾರಿ, ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಬ್ರಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ಅಡಿ ವೈಟ್ ಟಾಪಿಂಗ್ ಕಾಮಗಾರಿ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಮಹಾಲಕ್ಷ್ಮೀಪುರ, ಮಲ್ಲೇಶ್ವರ, ಗಾಂಧಿನಗರ, ಚಾಮರಾಜಪೇಟೆ, ಮಕ್ಕಳ ಕೂಟದಲ್ಲಿ ಚಾಲನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Mon, 15 July 24