ಬೆಂಗಳೂರು: ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಡೀಲ್ ಹಾಗೂ ಐಎಎಸ್ ಅಧಿಕಾರಿ ಮಂಜುನಾಥ್ ಅರೆಸ್ಟ್ ಆದ ಪ್ರಕರಣದ ಎಫ್ಐಆರ್ ಪ್ರತಿ ಟಿವಿ9ಗೆ ಲಭ್ಯವಾಗಿದೆ. ಅಜಂಪಾಷ ಅವರು ಡಿಸಿ ಕಚೇರಿಯಲ್ಲಿ ನಡೆದ ಲಂಚದ ಡೀಲ್ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ(ACB)ಕ್ಕೆ ದೂರು ನೀಡಿದ್ದರು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ವ್ಯಾಜ್ಯ ಸಂಬಂಧಿಸಿದಂತೆ ನಡೆದಿದ್ದ ಲಂಚದ ಡೀಲ್ ಬಗ್ಗೆ ಆಡಿಯೋ ರೆಕಾರ್ಡ್ ಮಾಡಲಾಗಿದ್ದು, ಅಜಂಪಾಷ ಅವರು ವಿವರಣಾತ್ಮಕವಾಗಿ ದೂರು ನೀಡಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದ ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಬಂದಿತ್ತು. ಈ ವೇಳೆ ಅಜಂಪಾಷ ಅವರು ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರನ್ನು ಭೇಟಿಯಾಗಿ ಎಸಿ ಕೋರ್ಟ್‌ನಲ್ಲಿ ನನ್ನ ಜಮೀನು ನನ್ನ ಪರವಾಗಿ ಆಗಿದೆ, ಡಿಸಿ ಕೋರ್ಟ್ನಲ್ಲೂ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪದಲ್ಲಿ ಒಂದೇ ದಿನ ಬಂಧನಕ್ಕೀಡಾದ ಐಎಎಸ್-ಐಪಿಎಸ್ ಅಧಿಕಾರಿಗಳಿಬ್ಬರನ್ನೂ ಮನೆಗೆ ಕಳಿಸಿದ ರಾಜ್ಯ ಸರ್ಕಾರ
ಅಜಂಪಾಷಾ ಅವರ ಮನವಿ ಹಿನ್ನೆಲೆ ಮಂಜುನಾಥ್ ಅವರು ಜಿಲ್ಲಾಧಿಕಾರಿ ಕಚೇರಿಯ ಉಪತಹಶೀಲ್ದಾರ್ ಮಹೇಶ್ ಕುಡ್ಲು ಅವರನ್ನ ಭೇಟಿಯಾಗುವಂತೆ ಸೂಚಿಸಿದ್ದಾರೆ. ಅದರಂತೆ ಉಪತಹಶೀಲ್ದಾರ್ ಬಳಿ ಹೋದಾಗ ಮಹೇಶ್, ರಾಜಾ ಎಂಬ ಬಳಸಿ ಇದು ದುಬಾರಿ ಜಮೀನು ಆಗಿದೆ ಎಂದು ಹೇಳಿ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಅಜಂಪಾಷಾ ಅವರು ಅಷ್ಟೊಂದು ಹಣ ತನ್ನ ಬಳಿ ಇಲ್ಲವೆಂದಾಗ 8 ಲಕ್ಷ ರೂಪಾಯಿ ಲಂಚಕ್ಕೆ ಮಹೇಶ್ ಚೌಕಾಸಿ ಮಾಡಿದ್ದರು. ಅದಾಗ್ಯೂ 3 ಲಕ್ಷ ಹಣ ಹೊಂದಿಸಬಹುದು ಎಂದು ಅಜಂಪಾಷ ಹೇಳಿದ್ದರು. ಆದರೆ ಉಪ ತಹಶೀಲ್ದಾರ್ ಮಹೇಶ್ ಚೀಟಿಯಲ್ಲಿ 5 ಲಕ್ಷ ಎಂದು ಬರೆದುಕೊಟ್ಟು ಡೀಲ್ ಕುದುರಿಸಿದ್ದರು.
ಅಧಿಕಾರಿಗಳ ಭ್ರಷ್ಟಾಚಾರದ ಆಡಿಯೋ ರೆಕಾರ್ಡ್ ಮಾಡಲಾಗಿದೆ. ಅದರಂತೆ ಅಜಂಪಾಷ ಅವರು ಮೇ 20ರಂದು ಎಸಿಬಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ. ದೂರಿನಲ್ಲಿ ಅಜಂಪಾಷಾ ಅವರು ಇಡೀ ವಿವರವನ್ನು ನೀಡಿದ್ದರು. ದೂರು ದಾಖಲಿಸಿದ ನಂತರ ಮೇ 21ರಂದು ಎಸಿಬಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಚರಣೆ ನಡೆದಿದೆ. ಎಸಿಬಿ ಟ್ರ್ಯಾಪ್ ಕಾರ್ಯಚರಣೆ ವೇಳೆ ಜಿಲ್ಲಾಧಿಕಾರಿ ಕಚೇರಿಯ ಉಪತಹಶೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚಂದ್ರು ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರ ಪ್ರಕರಣ: ಹೈಕೋರ್ಟ್ ತಪರಾಕಿ ಬಳಿಕ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ಗೆ ಎಸಿಬಿ ಫುಲ್ ಗ್ರಿಲ್!
ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಂಜುನಾಥ್ ಅರೆಸ್ಟ್ ಆಗಿದ್ದು ಹೇಗೆ?
ಐಎಎಸ್ ಅಧಿಕಾರಿ ಬೆಂಗಳೂರು ನಿರ್ಗಮಿತ ಡಿಸಿ ಮಂಜುನಾಥ್.ಜೆ. ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ A3 ಆರೋಪ ಹೊಂದಿದ್ದಾರೆ. ಇಷ್ಟಕ್ಕೂ ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್ ಆಗಿದ್ದು ಹೇಗೆ ಎಂದು ಹೇಳುತ್ತೇವೆ ಮುಂದಕ್ಕೆ ಓದಿ. ನಿನ್ನೆವರೆಗೆ ಎಸಿಬಿ ಬಿ ರಿಪೋರ್ಟ್ಗಳ ಮಾಹಿತಿ ಸಲ್ಲಿಸದ ಹಿನ್ನೆಲೆ ಹೈಕೋರ್ಟ್ ಸೋಮವಾರ ಮಧ್ಯಾಹ್ನ 2.30 ಕ್ಕೆ ಡಿಪಿಎಆರ್ ಕಾರ್ಯದರ್ಶಿ ಖುದ್ದು ಹಾಜರಿಗೆ ಸೂಚನೆ ನೀಡಿದೆ.
ಅದರಂತೆ, ಎಸಿಬಿ ಎಡಿಜಿಪಿಯ ಸರ್ವಿಸ್ ರೆಕಾರ್ಡ್ ಹಾಜರುಪಡಿಸಲು ಖಡಕ್ ಸೂಚನೆ ನೀಡಿದ ಕೋರ್ಟ್, ಡಿಸಿ ಕಚೇರಿ ಲಂಚ ಪ್ರಕರಣ 2ನೇ ಆರೋಪಿಯ ನೇಮಕಾತಿ ವಿವರ ನೀಡುವಂತೆ ಸೂಚಿಸಿದೆ. ಅಲ್ಲದೆ ಗುತ್ತಿಗೆ ನೌಕರನಾಗಿ ನೇಮಿಸಿದ್ದು ಯಾರೆಂದು ತಿಳಿಸುವಂತೆ ಸೂಚಿಸಿ ಏನು ನಡೆಯುತ್ತಿದೆ ಅಡ್ವೊಕೆಟ್ ಜನರಲ್ ಅವರೇ ಎಂದು ಪ್ರಶ್ನಿಸಿದೆ. ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿ ನೇಮಿಸಿದ್ದಾರೆ. ಫೋನ್ನಲ್ಲಿ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿಯ ಒಪ್ಪಿಗೆ ಇಲ್ಲದೇ ಈತ 5 ಲಕ್ಷ ಲಂಚ ಪಡೆಯಲು ಸಾಧ್ಯವೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಮೂರ್ನಾಲ್ಕು ಬಾರಿ ಮಂಜುನಾಥ್ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡು ಕೋರ್ಟ್, ಎಸಿಬಿ ನಡೆ ಕುರಿತು ಅಸಮಾಧಾನ ಹೊರಹಾಕಿ ಎಸಿಬಿ ಕಲೆಕ್ಷನ್ ಸೆಂಟರ್ ಎಂದು ನೇರವಾಗಿ ಚಾಟಿ ಬೀಸಿದೆ. ಹೈಕೋರ್ಟ್ ಅಸಮಧಾನದ ಬೆನ್ನಲ್ಲೆ ಅಲರ್ಟ್ ಆದ ಎಸಿಬಿ ಅಧಿಕಾರಿಗಳು ಯಶವಂತಪುರದಲ್ಲಿರುವ ಮಂಜುನಾಥ್.ಜೆ ಅವರ ಫ್ಲಾಟ್ಗೆ ನೇರವಾಗಿ ತೆರಳಿ ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಎಸಿಬಿ ಅಧಿಕಾರಿಗಳಿಂದ IAS ಅಧಿಕಾರಿ ಮಂಜುನಾಥ್ ಬಂಧನ