ಗೋಪಾಲಯ್ಯಗೆ ಜೀವ ಬೆದರಿಕೆ ಪ್ರಕರಣ: ಶಾಸಕರಿಗೆ 15 ಲಕ್ಷ ರೂ. ಕೊಟ್ಟಿದ್ದೆ, ಹೀಗಾಗಿ ಕರೆ ಮಾಡಿದ್ದೇನೆಂದ ಆರೋಪಿ
Death threat to K Gopalaiah: ಬಿಜೆಪಿ ಶಾಸಕ ಗೋಪಾಲಯ್ಯ ಅವರಿಗೆ ಮಾಜಿ ಕಾರ್ಪೊರೇಟರ್ ಪದ್ಮರಾಜು ಜೀವ ಬೆದರಿಕೆ ಹಾಕಿರುವ ವಿಚಾರ ಸದನದಲ್ಲೂ ಪ್ರಸ್ತಾಪವಾಗಿದೆ. ಈ ವೇಳೆ ಶಾಸಕ ಗೋಪಾಲಯ್ಯ ಪದ್ಮರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಗಡಿಪಾರು ಮಾಡಬೇಕು, ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು, ಫೆಬ್ರವರಿ 14: ಬಿಜೆಪಿ ಶಾಸಕ (BJP MLA) ಗೋಪಾಲಯ್ಯ ಅವರಿಗೆ (K Gopalaiah) ಜೀವ ಬೆದರಿಕೆ (Death Threat) ಒಡ್ಡಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪದ್ಮರಾಜುನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಹಲವು ವಿಚಾರಗಳನ್ನು ಆರೋಪಿ ಬಾಯಿ ಬಿಟ್ಟಿದ್ದಾನೆ. ” ಶಾಸಕ ಗೋಪಾಲಯ್ಯ ಅವರಿಗೆ 15 ಲಕ್ಷ ರೂ. ಕೊಟ್ಟಿದ್ದೇನೆ. ಶಾಸಕ ಗೋಪಾಲಯ್ಯ ಅವರು ನನಗೆ (ಪದ್ಮರಾಜು) ಒಂದು ಟ್ರಸ್ಟ್ಗೆ 5 ಲಕ್ಷ ಹಣ ಹಾಕಲು ಹೇಳಿದರು. ಹೀಗಾಗಿ ಟ್ರಸ್ಟ್ ಖಾತೆಗೆ ಅಕೌಂಟ್ ಮೂಲಕ 5 ಲಕ್ಷ ರೂ. ವರ್ಗಾವಣೆ ಮಾಡಿದ್ದೇನೆ. ಕಾಮಗಾರಿ ಟೆಂಡರ್ ವಿಚಾರವಾಗಿ ಗೋಪಾಲಯ್ಯ ಅವರು ಸಚಿವರಾಗಿದ್ದಾಗ ನಗದು ರೂಪದಲ್ಲಿ 10 ಲಕ್ಷ ಹಣ ನೀಡಿದ್ದೇನೆ” ಎಂದು ಆರೋಪಿ ಪದ್ಮರಾಜು ಹೇಳಿದ್ದಾರೆ.
ಈ ಹಣ ಕೇಳಲು ಮನೆ ಬಳಿಗೆ ಹೋಗಿದ್ದೆ, ಆದರೆ ಗೋಪಾಲಯ್ಯ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಕರೆ ಮಾಡಿದ್ದೆ. ಫೋನಲ್ಲಿ ಅವರೆ ಮೊದಲು ಅವಾಚ್ಯಪದದಿಂದ ಬೈದಿದ್ದರು. ಬಳಿಕ ನಾನು ಬೈದಿದ್ದೇನೆ ಎಂದು ಬಾಯಿಬಿಟ್ಟಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಬ್ಯಾಂಕ್ ಖಾತೆ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ, ದೂರು ದಾಖಲು
ಅಧಿವೇಶನದಲ್ಲೂ ಪ್ರಸ್ತಾಪ
ವಿಧಾನಸಭೆ ಶೂನ್ಯವೇಳೆಯಲ್ಲಿ ಶಾಸಕ ಗೋಪಾಲಯ್ಯ ಅವರು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ ವಿಚಾರವನ್ನು ಪ್ರಸ್ತಾಪಿಸಿದರು. ಪದ್ಮರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಗಡಿಪಾರು ಮಾಡಬೇಕು, ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು. ಪದ್ಮರಾಜ್ ಹಲವು ಮಾಜಿ ಸಚಿವರಿಗೆ ಬೆದರಿಕೆ ಹಾಕಿದ್ದಾನೆ. ಶಾಸಕ ಸುರೇಶ್ ಕುಮಾರ್ ಅವರಿಗೂ ಬೆದರಿಕೆ ಹಾಕಿದ್ದಾನೆ. ಅವನ ಮನೆಯ ಬಳಿ ಪೊಲೀಸರು ನಾಯಿಯಂತೆ ಕಾಯ್ದಿದ್ದಾರೆ ಎಂದರು.
ಪದ್ಮರಾಜ್ ಮಾಜಿ ಸಚಿವರಾದ ಸುರೇಶ್ ಕುಮಾರ್, ಆರ್ ಅಶೋಕ್ ಅವರಿಗೂ ಅನೇಕ ಸಲ ಬೆದರಿಕೆ ಹಾಕಿದ್ದಾನೆ. ಇಂತಹವರು ಹೊರಗಡೆ ಇದ್ದರೆ ಸಮಾಜಘಾತುಕ ಶಕ್ತಿ ಹೆಚ್ಚಾಗುತ್ತದೆ. ಹುಡುಗರನ್ನು ಬಿಟ್ಟು ನನ್ನ ಕುಟುಂಬದ ಮೇಲೆ ಹಲ್ಲೆ ಮಾಡಿಸುವ ಸಂಭವಿದೆ. ಬೆಂಗಳೂರಿನಲ್ಲಿರುವ ಕ್ಲಬ್ ಗಳನ್ನು ಮುಚ್ಚಿಸಬೇಕು. ಇಂತಹವರು ರಾತ್ರಿ ಕುಡಿದು ನಶೆ ಏರಿದಾಗ ನಮ್ಮಂತಹವರಿಗೆ ಕರೆ ಮಾಡುತ್ತಾರೆ. ನಾನು ನನ್ನ ಸ್ಥಾನಕ್ಕೆ ಗೌರವ ಕೊಟ್ಟು ಸುಮ್ಮನಿದ್ದೇನೆ, ಎಲ್ಲಾ ಬಿಟ್ಟು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ