ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ವಿಳಂಬ; ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಕ್ಕೆ 1ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್

| Updated By: Rakesh Nayak Manchi

Updated on: Feb 18, 2023 | 10:06 PM

ಜೀವನ ಪ್ರಮಾಣಪತ್ರ ಸಲ್ಲಿಸಲಿಲ್ಲವೆಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ವಿಳಂಬ ಮಾಡಿದ ಬ್ಯಾಂಕ್​ ಮತ್ತು ಕೇಂದ್ರ‌ ಸರ್ಕಾರದ ಸ್ವಾತಂತ್ರ್ಯ ಹೋರಾಟಗಾರರ ವಿಭಾಗಕ್ಕೆ ಹೈಕೋರ್ಟ್ 1 ಲಕ್ಷ ರು.ಗಳ ದಂಡ ವಿಧಿಸಿ ಆದೇಶಿಸಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ವಿಳಂಬ; ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಕ್ಕೆ 1ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಜೀವನ ಪ್ರಮಾಣಪತ್ರ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ (Pension to freedom fighters) ನೀಡಲು ವಿಳಂಬ ಮಾಡಿದ ಬ್ಯಾಂಕ್​ ಮತ್ತು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಹೋರಾಟಗಾರರ ವಿಭಾಗಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಜೀವನ ಪ್ರಮಾಣ ಪತ್ರ ಸಲ್ಲಿಸದ ಹಿನ್ನಲೆಯಲ್ಲಿ 2018ರಿಂದ ಪಿಂಚಣಿ ನೀಡದ ಬ್ಯಾಂಕ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಎಚ್​.ನಾಗಭೂಷಣ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪಿಠ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಪಿಂಚಣಿ ಜೀವನದ ಕೊನೆ ಹಂತದಲ್ಲಿ ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗದಂತೆ ಸಹಕಾರಿಯಾಗಲಿದೆ. ಆದರೆ, ಜೀವನ ಪ್ರಮಾಣ ಪತ್ರ ಸಲ್ಲಿಸಲಾಗಿಲ್ಲ ಎಂದು ಪಿಂಚಣಿ ತಡೆಹಿಡಿಯಲು ಸಾಧ್ಯವಿಲ್ಲ. ಇದರಿಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪಿಂಚಣಿ ಹಕ್ಕು ಕಸಿದುಕೊಳ್ಳದಂತೆ ಆಗಬಾರದು. ಹೀಗಾಗಿ ದಂಡದ ಮೊತ್ತವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಸೂಚನೆ ನೀಡಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗ ಸೂಚಿಗಳ ಪ್ರಕಾರ ಬ್ಯಾಂಕ್ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರ ಮನೆಗೆ ಹೋಗಿ ಜೀವಿತ ಪ್ರಮಾಣ ಪತ್ರ ಪಡೆದು ಕಾಲ ಕಾಲಕ್ಕೆ ಗಣಕೀಕೃತವಾಗಿ ನವೀಕರಿಸಿಕೊಳ್ಳಬೇಕು ಎಂದು ಸೂಚನೆ ಕೊಟ್ಟಿದೆ. ಜೊತೆಗೆ, 2018 ರಿಂದ ಬಾಕಿಯಿರುವ ಸುಮಾರು 3.71 ಲಕ್ಷ ರೂ.ಗಳಿಗೆ ವಾರ್ಷಿಕ ಶೇ. 6 ರಷ್ಟು ಬಡ್ಡಿಯೊಂದಿಗೆ ಮುಂದಿನ ಎರಡು ವಾರದಲ್ಲಿ ಪಾವತಿ ಮಾಡಬೇಕು. ವಿಳಂಬವಾದಲ್ಲಿ ಶೇ.18 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿದೆ. ಆ ಮೂಲಕ ಅನಗತ್ಯವಾಗಿ ಪದೇ ಪದೇ ಬ್ಯಾಂಕ್​ಗಳಲ್ಲಿ ದಾಖಲಾಗುವ ಅರ್ಜಿಗಳನ್ನಾದರೂ ತಪ್ಪಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಬಲವಂತದ ಮತಾಂತರ ಯತ್ನ ಆರೋಪ: ಆರೋಪಿಗಳ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು 1974 ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪಿಂಚಣಿ ಪಡೆಯುತ್ತಿದ್ದರು. ಅದರೆ ವಯಸ್ಸಾದ ಕಾರಣದ ಜೀವನ ಪ್ರಮಾಣ ಪತ್ರ ಸಲ್ಲಿಸಲಾಗಿಲ್ಲ. ಅಲ್ಲದೆ, 70 ರಿಂದ 99 ವರ್ಷದೊಳಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಜೀವನ ಪ್ರಮಾಣ ಪತ್ರವನ್ನು ಪಡೆಯುವುದಕ್ಕಾಗಿ ಬ್ಯಾಂಕ್​ ಸಿಬಂದಿಯೇ ಅರ್ಜಿದಾರರ ಮನೆಗೆ ಹೋಗಬೇಕು. ಜೀವನ ಪ್ರಮಾಣ ಪತ್ರ ಪಡೆದ ಆನ್ಲೈನ್​ನಲ್ಲಿ ನವೀಕರಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ, ಬ್ಯಾಂಕ್​ ಅಧಿಕಾರಿಗಳು ಕಾರ್ಯಕ್ಕೆ ಮುಂದಾಗದೆ ಪಿಂಚಣಿ ಸ್ಥಗಿತ ಗೊಳಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ವರದಿ: ರಮೇಶ್ ಮಹದೇವ್, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:06 pm, Sat, 18 February 23