Bengaluru: ವಿಧಾನಸೌಧ ಬಳಿ 10 ಲಕ್ಷ ರೂ. ಪತ್ತೆ: ಹಣದ ಮೂಲ ಪತ್ತೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ
ವಿಧಾನಸೌಧದ ಬಳಿ ಅನಧಿಕೃತವಾಗಿ 10.5 ಲಕ್ಷ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆ ಪೊಲೀಸರು ಹಣದ ಮೂಲವನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು: ವಿಧಾನಸೌಧದ (Vidhana Soudha) ಬಳಿ ಅನಧಿಕೃತವಾಗಿ 10.5 ಲಕ್ಷ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆ ಪೊಲೀಸರು ಹಣದ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ (Assistant Engineer of Public Works Department) ಜಗದೀಶ್ ಮೂವರು ವ್ಯಕ್ತಿಗಳಿಂದ ಹಣವನ್ನು ಸಾಲವಾಗಿ ಪಡೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಸಹಾಯಕ ಇಂಜಿನಿಯರ್ ಜಗದೀಶ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದರು. ಈ ಹಿನ್ನೆಲೆ ಗುತ್ತಿಗೆದಾರರೊಬ್ಬರಿಂದ 5 ಲಕ್ಷ ರೂ, ಹಾಗೇ ಓರ್ವ ಸಹೋದ್ಯೋಗಿ ಬಳಿ 3.5 ಲಕ್ಷ, ಮತ್ತೊಬ್ಬರ ಬಳಿ 1.5 ಲಕ್ಷ ಸಾಲ ಪಡೆದಿದ್ದರು. ಈ ಮೂಲಕ ಹಣವನ್ನು ಮರುಪಾವತಿಸಲು ನಿರ್ಧರಿಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ಹೇಳಿದ್ದಾರೆ. ಆದರೆ ಪೊಲೀಸರು ಚೆಕ್ ಬೌನ್ಸ್, ಬ್ಯಾಂಕ್ ಹಣ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿ, ಜೊತೆಗೆ ಹಣ ಕೊಟ್ಟವರ ಹೇಳಿಕೆ ದಾಖಲಿಸಿಕೊಂಡು, ಅಂತಿಮ ಹಂತದ ತನಿಖೆ ನಡೆಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಿದ್ದಾರೆ.
ಏನಿದು ಪ್ರಕರಣ
ಜನವರಿ 4 ರಂದು ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ (Assistant Engineer of Public Works Department) ಅನಧಿಕೃತವಾಗಿ 10.5 ಲಕ್ಷ ರೂ. ಹಣವನ್ನು ಸಾಗಿಸುತ್ತಿದ್ದರು. ಗೇಟ್‌ನಲ್ಲಿ ಪೊಲೀಸರು ಕಾರ್ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಬ್ಯಾಗ್‌ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ. ಆದರೆ ಹಣದ ಮೂಲದ ಕುರಿತಾಗಿ ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯಕ್ತಿ ನೀಡಿರಲಿಲ್ಲ.
ಈ ಹಿನ್ನೆಲೆ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಿಸಿದ್ದರು. ಹಣ ಸಾಗಾಟ ಜಗದೀಶ್ನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಹಣದ ಮೂಲ ಮತ್ತು ಹಣವನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದರೆಂದು ತಿಳಿದು ಬಂದಿದೆ.
ರಾಜಕೀಯ ಸ್ವರೂಪ ಪಡೆದ ಪ್ರಕರಣ
ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. PWD ಇಂಜಿನಿಯರ್ 10.5 ಲಕ್ಷ ರೂ. ವಿಧಾನಸೌಧಕ್ಕೆ ತಂದಿದ್ದೇಕೆ? ಅದು ಲಂಚ ಪಡೆದ ಹಣವೋ, ಮಂತ್ರಿಗಳಿಗೆ ಕೊಡಲು ತಂದ ಹಣವೋ? ಸಿಎಂ ಬೊಮ್ಮಾಯಿ (Basavaraj Bommai) ಉತ್ತರಿಸಬೇಕೆಂದು ಆಗ್ರಹಿಸಿತ್ತು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ವಿಧಾನಸೌಧವನ್ನು ಬಿಜೆಪಿ ಸರ್ಕಾರ ವ್ಯಾಪಾರ ಸೌಧವನ್ನಾಗಿಸಿದೆ ಎನ್ನಲು ಹಲವು ಪುರಾವಾಗಳಿವೆ. ವಿಧಾನಸೌಧ ಈಗ ಅಕ್ರಮ ಡೀಲಿಂಗ್‌ಗಳ ಅಡ್ಡೆಯಾಗಿದೆ. ವಿಧಾನಸೌಧಕ್ಕೆ 10.5 ಲಕ್ಷ ಹಣವನ್ನು PWD ಇಂಜಿನಿಯರ್ ತಂದಿದ್ದೇಕೆ? ಆ ಹಣ ಅದು ಲಂಚ ಪಡೆದ ಹಣವೋ, ಮಂತ್ರಿಗಳಿಗೆ ಕೊಡಲು ತಂದ ಹಣವೋ? 40% ಕಮಿಷನ್ ಲೂಟಿಯ ಹಣವೋ? ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು ಎಂದು ಒತ್ತಾಯಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Sun, 19 February 23