ಬೆಂಗಳೂರು, ಜುಲೈ.06: ರಾಜ್ಯದಲ್ಲಿ ಡೆಂಘೀ (Dengue) ಸೋಂಕು ಉಲ್ಭಣಗೊಂಡಿದೆ. ಬೆಂಗಳೂರಿನಲ್ಲಿ ಡೆಂಘೀಗೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ (Death). ಅಂಜನಾಪುರದ 11 ವರ್ಷದ ಬಾಲಕ ಗಗನ್ ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಗಗನ್ ಕೆಲ ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ. ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇನ್ನು ಮತ್ತೊಂದೆಡೆ ಶಿವಮೊಗ್ಗದ ಗಾಂಧಿ ನಗರದ ಮನೆಯಲ್ಲಿ ಝೀಕಾ ವೈರಸ್ಗೆ 74 ವರ್ಷದ ವೃದ್ಧ ಬಲಿಯಾಗಿದ್ದಾರೆ. ಜೂನ್ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧನಲ್ಲಿ ಜೂನ್ 21ರಂದು ಝೀಕಾ ವೈರಸ್ ಇರುವುದು ಪತ್ತೆಯಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಡಿಸ್ಚಾರ್ಜ್ ಮಾಡಲಾಗಿತ್ತು. ಗುರುವಾರ ಕುಟುಂಬದವರು ವೃದ್ಧನನ್ನು ಮನೆಗೆ ಕರೆದೊಯ್ದಿದ್ದರು. ಆದರೆ ನಿನ್ನೆ ಮನೆಯಲ್ಲಿ ವೃದ್ಧ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಡೆಂಘೀ ಮಹಾಮಾರಿ ಅಬ್ಬರಿಸುತ್ತಿದೆ. ಜಿಲ್ಲೆಯಲ್ಲಿ ಒಂದೇ ವಾರದೊಳಗೆ ನಾಲ್ಕು ಮಕ್ಕಳು ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲೇ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಕಳೆದ ಜೂನ್ 30 ಹೊಳೆನರಸೀಪುರ ತಾಲೂಕಿನ ದೊಡ್ಡಮಗ್ಗೆಯ 8 ವರ್ಷದ ವರ್ಷಿಕಾ, ಜುಲೈ 1ರಂದು ಅರಕಲಗೂಡು ತಾಲೂಕಿನ 13 ವರ್ಷದ ಅಕ್ಷತಾ ಮೃತಪಟ್ಟಿದ್ರು. ಜುಲೈ 3ರಂದು ಗುಡ್ಡೇನಹಳ್ಳಿಯ 11 ವರ್ಷದ ಕಲಾಶ್ರಿ ಸಾವನಪ್ಪಿದ್ದು, ಜುಲೈ 5 ನಿನ್ನೆ 8 ವರ್ಷದ ಹೊಳೆನರಸೀಪುರದ ದೊಡ್ಡಹಳ್ಳಿ ಗ್ರಾಮದ ಸಮೃದ್ಧಿ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾಳೆ.
ಇದನ್ನೂ ಓದಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ: ಖಾನಾಪುರ ತಾಲೂಕಿನ 7 ಜಲಪಾತಗಳಿಗೆ ನಿರ್ಬಂಧ
ರಮೇಶ್-ಅಶ್ವಿನಿ ದಂಪತಿಯ ಪುತ್ರಿ ಸಮೃದ್ಧಿ, 5 ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ಲು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ ಅಂತ ಪೋಷಕರು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ನಿವಾಸಿ ವೇಣು ಡೆಂಘೀ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಮೃತನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ನಂತೆ. ಡೆಂಘೀ ಬಗ್ಗೆ ಖಾಸಗಿ ಆಸ್ಪತ್ರೆ ಹಾಗೂ ಬಿಬಿಎಂಪಿ ಬಳಿ ಮಾಹಿತಿ ಕೇಳಲಾಗಿದೆ.
ಇತ್ತ ರಾಮನಗರದಲ್ಲಿ ಡೆಂಘೀ ವಿರುದ್ಧ ಸಮರ ಸಾರಲಾಗಿದೆ. ಜ್ವರ ಬಂದವ್ರಿಗೆ ಜಿಲ್ಲಾಸ್ಪತ್ರೆಯಲ್ಲಿ ಱಂಡಮ್ ಟೆಸ್ಟ್ ಮಾಡಲಾಗ್ತಿದೆ. 773 ರೋಗಿಗಳ ರಕ್ತದ ಮಾದರಿ ಪರೀಕ್ಷೆ ಮಾಡಿದ್ದು, 58 ಜನ್ರಿಗೆ ಡೆಂಘೀ ಪಾಸಿಟಿವ್ ಬಂದಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ