ಚಕ್ರವರ್ತಿ ಸೂಲಿಬೆಲೆ ಏನಾದ್ರೂ ಪಿಹೆಚ್ಡಿ ಮಾಡಿದ್ದಾರಾ? ಯಾವ ಆಧಾರದಲ್ಲಿ ಅವರ ಪಾಠ ಹಾಕಿದ್ರಿ -ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಹಾಕಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಏನಾದ್ರೂ ಪಿಹೆಚ್ಡಿ ಮಾಡಿದ್ದಾರಾ? ಬಾಡಿಗೆ ಭಾಷಣಕಾರರನ್ನೆಲ್ಲ ಲೇಖಕರಾಗಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟು ಬರ ಬಂದಿದೆಯಾ? ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುತ್ತಿದ್ದಂತೆ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಯ(Textbook Revision Controversy) ವಿಚಾರ ಭಾರಿ ಚರ್ಚೆಗೆ ಬಂದಿತ್ತು. ಸದ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇರಿಸಲಾಗಿದ್ದ ಪಠ್ಯಗಳಿಗೆ ಕತ್ತರಿ ಹಾಕುವುದಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡಿ ಶಾಲಾ ಪಠ್ಯದಲ್ಲಿ ಲೋಪದೋಷಗಳನ್ನು ಸರಿಪಡಿಸುವಂತ ಸಿಎಂ ಸಿದ್ದರಾಮಯ್ಯ(Siddaramaiah) ಸೂಚನೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಧ್ವನಿ ಎತ್ತಿದ್ದು ಚಕ್ರವರ್ತಿ ಸೂಲಿಬೆಲೆಯವರನ್ನು(Chakravarti Sulibele) ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಈಗ ಪ್ರಿಯಾಂಕ್ ಖರ್ಗೆ(Priyank Kharge) ತಿರುಗೇಟು ನೀಡಿದ್ದಾರೆ.
ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಹಾಕಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಏನಾದ್ರೂ ಪಿಹೆಚ್ಡಿ ಮಾಡಿದ್ದಾರಾ? ಬಾಡಿಗೆ ಭಾಷಣಕಾರರನ್ನೆಲ್ಲ ಲೇಖಕರಾಗಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟು ಬರ ಬಂದಿದೆಯಾ? ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ ಎಂದು ಸ್ಪಷ್ಟನೆ ನೀಡಿದರು. ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರೋ ಪಠ್ಯ ನಮ್ಮ ಮಕ್ಕಳು ಓದೋದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ. ಅವರು ಯಾವ Phd ಮಾಡಿದ್ದಾರೆ? ಬಾಡಿಗೆ ಭಾಷಣಕಾರರಿಗೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿ ಅದನ್ನ ನಮ್ಮ ಮಕ್ಕಳು ಓದ ಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸ್ ಅಪ್ ಯುನಿವರ್ಸಿಟಿಯಲ್ಲಿ ಓದೋರು ಇವರು. ಅಲ್ಲಿನ ವಿಸಿಗಳು ತಮ್ಮ ಪಠ್ಯ ಓದೋಕೆ ಪಠ್ಯ ರಚನೆ ಮಾಡಲು ಪ್ರಾರಂಭ ಮಾಡಿದ್ದಾರಾ? ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು? ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆಗೆ ತಾತ್ಕಾಲಿಕ ಸಮಿತಿ ರಚನೆ: ಲೋಪದೋಷ ಸರಿಪಡಿಸುವಂತ ಸಿಎಂ ಸಿದ್ದರಾಮಯ್ಯ ಸೂಚನೆ
ಆಡಳಿತ ಪಕ್ಷಕ್ಕೆ ಕ್ಲೋಸ್ ಇದ್ದಾರೆ ಅಂತ ಪಠ್ಯ ಹಾಕೋದು ಸರಿನಾ?
ಇನ್ನು ಈ ವೇಳೆ ಮಾಧ್ಯಮದವರು ಚಕ್ರವರ್ತಿ ಸೂಲಿಬೆಲೆ ಬರೆದಿರೋದು ಭಗತ್ ಸಿಂಗ್, ಸುಖದೇವ ಬಗ್ಗೆ ಎಂದು ಹೇಳಿದ್ರು. ಅದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವ ಇದೆ. ಅವರ ನಿಜವಾದ ಇತಿಹಾಸ ನಾವು ಹೇಳ್ತೀವಿ. ನಾನು ನಾಸ್ತಿಕ ಏಕೆ ಆಗಿದ್ದೇನೆ ಅಂತ ಭಗತ್ ಸಿಂಗ್ ಪುಸ್ತಕ ಇದೆ. ಅದನ್ನ ಚಕ್ರವರ್ತಿ ಸೂಲಿಬೆಲೆ ಓದಿದರೆ ಸಾಕು. ಇತಿಹಾಸ ತಿರುಚಲಾರದ ಪಾಠ ನಾವು ಇಡ್ತೀವಿ. ಚಕ್ರವರ್ತಿ ಸೂಲಿಬೆಲೆಗಿಂತ ಒಳ್ಳೆ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳೋ ವ್ಯಕ್ತಿ ಅಲ್ಲ. ಅವರು ಬರೆದಿರೋ ಪಠ್ಯ ನಾನು ಯಾಕೆ ಓದಲಿ. ನನಗೆ ಓದೋಕೆ ಸಾಕಷ್ಟು ಇದೆ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ನಮ್ಮ ಮಕ್ಕಳಿಗೆ ಅಗತ್ಯ ಇಲ್ಲ. ಯಾವುದು ಕೇಸರಿಕರಣ ಇದೆ. ಯಾವುದು ಸತ್ಯ ಇಲ್ಲ ಅದೆಲ್ಲವನ್ನು ತೆಗೆಯುತ್ತೇವೆ. ಸಾಹಿತಿಗಳ ಹಿನ್ನಲೆ ಇಲ್ಲದೆ ಬರೆದವರ ಪಠ್ಯ ಯಾಕೆ ಓದಬೇಕು. ಆಡಳಿತ ಪಕ್ಷಕ್ಕೆ ಅವರು ಕ್ಲೋಸ್ ಇದ್ದಾರೆ ಅಂತ ಪಠ್ಯ ಹಾಕೋದು ಸರಿನಾ? ನಾವು ಅದರ ವಿರುದ್ದ ಇದ್ದೇವೆ. ಅದನ್ನ ಮಾಡುತ್ತೇವೆ. ನಿಮ್ಮ ಮಕ್ಕಳು ವಾಟ್ಸ್ ಅಪ್ ಯೂನಿವರ್ಸಿಟಿ ಓದಬೇಕಾ? ಒಳ್ಳೆ ಯೂನಿವರ್ಸಿಟಿ ಓದಬೇಕಾ? ಎಂದು ಪ್ರಶ್ನಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:59 pm, Fri, 9 June 23