ಬೆಂಗಳೂರು: ವಿಧಾನಸಭೆಯಲ್ಲಿ ಸೋಮವಾರ ಕೆರೆಗಳ ಒತ್ತುವರಿ ಕುರಿತು ಗಂಟೆಗಟ್ಟಲೆ ಚರ್ಚೆ ನಡೆಯಿತು. ಪ್ರವಾಹ ಪರಿಹಾರ ಮತ್ತು ಅತಿವೃಷ್ಟಿ ಕುರಿತು ಸರ್ಕಾರದ ಪರವಾಗಿ ವಿವರ ಒದಗಿಸಲು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕೊಟ್ಟರು. ಅಶೋಕ್ ಮಾತನಾಡಲು ಆರಂಭಿಸಿದಾಗ ಆರಂಭದಿಂದಲೂ ಬೆಂಗಳೂರಿನ ಕೆ.ಜೆ.ಜಾರ್ಜ್ ಎದ್ದು ನಿಂತು ಆಗಾಗ ಆಕ್ಷೇಪಿಸುತ್ತಲೇ ಇದ್ದರು. ಬಿಜೆಪಿಯ ಫೈರ್ಬ್ರಾಂಡ್ ಶಾಸಕ ಬಸನಗೌಡ ಯತ್ನಾಳ್ ಒಂದು ಹಂತದಲ್ಲಿ ಎದ್ದು ನಿಂತು, ‘ಆಶೋಕ್ ಅವರೇ ಯಾರು ಎಷ್ಟು ಕೆರೆ ನುಂಗಿದ್ದಾರೆ ಅದನ್ನು ಹೇಳಿ. ಯಾವುದನ್ನೂ ಮುಚ್ಚಿಡಬೇಡಿ. ಎಲ್ಲವನ್ನೂ ಬಹಿರಂಗಪಡಿಸಿ’ ಎಂದು ಆಗ್ರಹಿಸಿದರು.
ಬೆಂಗಳೂರಿನ ಯಾವೆಲ್ಲ ಕೆರೆಗಳನ್ನು ಮುಚ್ಚಲಾಗಿದೆ ಎನ್ನುವ ಪಟ್ಟಿಯನ್ನು ಸಚಿವ ಆರ್.ಅಶೋಕ್ ಓದಿದರು. ಈ ವೇಳೆ ಸದನದಲ್ಲಿ ವಿಪಕ್ಷ ಸದಸ್ಯರು ಜೋರಾಗಿ ಆಕ್ಷೇಪಿಸಿದರು. ಸದನದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂದು ಕೇಳದಂತಹ ಪರಿಸ್ಥಿತಿ ನಿರ್ಮಾಣವಾಯಿತು. ‘ಬೆಂಗಳೂರಿನಲ್ಲಿ ದಾಖಲೆ ತಿರುಚಲಾಗಿದೆ ಎಂದು ಎ.ಟಿ.ರಾಮಸ್ವಾಮಿ ವರದಿ ನೀಡಿದ್ದಾರೆ. ಆದರೆ ಎಲ್ಲೂ ಕೆರೆ ಇದೆ ಎನ್ನುವುದನ್ನು ತೋರಿಸಿಲ್ಲ. ಲೇಔಟ್ ಮಾಡಿದ ಬಳಿಕ ಸರ್ಕಾರದ ಅನುಮೋದನೆ ಪಡೆಯಲಾಗಿದೆ. ಕೆರೆ ಹೇಗೆ ಮುಚ್ಚಬೇಕು ಅನ್ನೋದು ಸಂಸ್ಥೆ ಅಲ್ಲ, ಏಜೆನ್ಸಿ ಮುಚ್ಚಿದೆ. ಕೆರೆ ಮುಚ್ಚುವ ಮೊದಲು ನಮ್ಮ ಬಳಿ ಬರಬೇಕು. ಕಂದಾಯ ಇಲಾಖೆಯಿಂದ 30 ದಿನ ಆಕ್ಷೇಪಣೆ ಕರೆಯಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲ ಅಂದಾಗ ನೋಟಿಸ್ ಕೊಟ್ಟು ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಅಶೋಕ್ ವಿವರಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಕೃಷ್ಣ ಬೈರೇಗೌಡ, ನೀವು ಅಧಿಕಾರಕ್ಕೆ ಬಂದು ಮೂರು ವರ್ಷವಾಗ್ತಾ ಬಂತು, ಈವರೆಗೆ ರಾಜಕಾಲುವೆ ಸರಿಪಡಿಸಲು ನಿಮಗೆ ಆಗಿಲ್ಲ’ ಎಂದು ತಿವಿದರು. ‘ಯಾವುದೋ ಇಸವಿ ಹೇಳಿ ಹೀಗಿತ್ತು, ಹಾಗಿತ್ತು ಅಂತ ಹೇಳೋದಲ್ಲ. ಈಗ ಏನು ಮಾಡ್ತಿದ್ದೀರಿ, ಅದನ್ನು ಹೇಳಿ’ ಎಂದು ಸಿದ್ದರಾಮಯ್ಯ ಕೇಳಿದರು. ಅಶೋಕ್ ಅವರಿಗೆ ಮಾತನಾಡಲು ಬಿಡದಂತೆ ವಿಪಕ್ಷದ ಸದಸ್ಯರು ಏರು ಧ್ವನಿಯಲ್ಲಿ ಹರಿಹಾಯ್ದರು.
ರಾಷ್ಟ್ರೀಯ ಹಸಿರು ಪ್ರಾಧಿಕಾರ (National Green Tribunal – NGT) ಆದೇಶ ಬರುವ ಮೊದಲು ಕೆರೆಗಳನ್ನು ಮಾರ್ಪಡಿಸಲು ಅವಕಾಶವಿತ್ತು ಎಂದು ಕೃಷ್ಣಭೈರೇಗೌಡ ಹೇಳಿದರು. ಈ ಮಾತನ್ನು ಮುಖ್ಯಮಂತ್ರಿ ಬೊಮ್ಮಾಯಿ ತಳ್ಳಿಹಾಕಿದರು. ‘ಸಚಿವ ಸಂಪುಟಕ್ಕೆ ಇಂತಹ ಅವಕಾಶವೇ ಇಲ್ಲ’ ಎಂದರು. ಕೆರೆಗಳನ್ನು ಬಹಳ ಹಿಂದೆಯೇ ಮಾರ್ಪಾಡು ಮಾಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದಾಗ, ಬಡಾವಣೆ ಮಾಡಿದರೂ ಪಹಣಿಯಲ್ಲಿ ಕೆರೆ ಎಂದೇ ಬರುತ್ತಿದೆ. ಇಲ್ಲ ಇಲ್ಲ ನೀವು ಕೆರೆ ನುಂಗುವ ಕೆಲಸ ಮಾಡಿದ್ದೀರಿ ಎಂದು ಬೊಮ್ಮಾಯಿ ಲೇವಡಿ ಮಾಡಿದರು. ‘ನೀವು ರಾಜಕಾರಣ ಮಾಡ್ತಿದ್ದೀರಾ ಎಂದು ಕೃಷ್ಣಭೈರೇಗೌಡ’ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಜಾರ್ಜ್, ನಾನು ಮಂತ್ರಿ ಆಗಿದ್ದಾಗ ಒಂದು ಕೆರೆ ಮುಚ್ಚಿದ್ರೂ ರಾಜೀನಾಮೆ ಕೊಡುತ್ತೇನೆ ಎಂದು ಘೋಷಿಸಿದರು. ಯಾರ ಕಾಲದಲ್ಲಿ ಏನಾಗಿತ್ತು ಖಂಡಿತ ತನಿಖೆ ಮಾಡಿಸುತ್ತೇನೆ ಎಂದು ಸಿಎಂ ಹೇಳಿದರು. ತನಿಖೆ ವಿಚಾರವನ್ನು ಸ್ವಾಗತ ಮಾಡುವೆ ಎಂದು ಜಾರ್ಜ್ ತಿಳಿಸಿದರು.
ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಯಾವುದೇ ಕೆರೆ ತನ್ನಷ್ಟಕ್ಕೆ ತಾನೇ ಸ್ವರೂಪ ಕಳೆದುಕೊಳ್ಳುವುದಿಲ್ಲ. ಲ್ಯಾಂಡ್ ಮಾಫಿಯಾ ಸಲುವಾಗಿ ಕೆರೆಯು ತನ್ನ ಸ್ವರೂಪ ಕಳೆದುಕೊಂಡಿರಬಹುದು. ಬ್ರ್ಯಾಂಡ್ ಬೆಂಗಳೂರು ನೆಪದಲ್ಲಿ ಕೆರೆಗಳನ್ನು ನುಂಗುವುದು ಸರಿಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಯಾರ ಕಾಲದಲ್ಲಿ ಎಷ್ಟು ಒತ್ತುವರಿ ಆಗಿದೆ ಎಂಬ ಮಾಹಿತಿಯನ್ನು ಅಂಕಿಅಂಶಗಳ ಸಮೇತ ಕೊಡಬಲ್ಲೆ ಎಂದರು.
Published On - 2:27 pm, Mon, 19 September 22