ವಿಪ್ರೋ ರಾಜಕಾಲುವೆ ಒತ್ತುವರಿ ತೆರವಿಗೆ ಹಿಂಜರಿಕೆ: ಕುಂಟು ನೆಪ ಹೇಳಿ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿಗಳು
ವಿಪ್ರೋ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ವಿಪ್ರೊ ಕಾಂಪೌಂಡ್ ತೆರವಿಗೆ ಗ್ಯಾಸ್ ಕಟರ್ ಬಳಸಬೇಕಿದೆ. ಹಾಗಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತ ಮಾಡಲಾಗಿದೆ.
ಬೆಂಗಳೂರು: ವಿಪ್ರೋ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮಾತ್ರ ಆಗಮಿಸಿರುವ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ವಿಪ್ರೋ ಮುಂದೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಂಡಿಯೂರಿದ್ರಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಷ್ಟೂ ದಿನ ಯಾವುದೇ ತೆರವು ಕಾರ್ಯಾಚರಣೆಗೆ ತಹಶೀಲ್ದಾರ್ ಆಗಮಿಸಿರಲಿಲ್ಲ. ಬೆಳಗ್ಗೆ 11:30ಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾರ್ಕಿಂಗ್ ಪರಿಶೀಲನೆ ಮಾಡಿದ್ದು, 12 ಗಂಟೆಗೆ ಬುಲ್ಡೋಜರ್ ಬಳಸಿ ವಿಪ್ರೋ ಕಂಪೌಂಡ್ ವಾಲ್ ತೆರವಿಗೆ ಮುಂದಾಗಿತ್ತು. ತೆರವು ಕಾರ್ಯಾಚರಣೆ ಶುರುವಾದ ಒಂದೇ ತಾಸಿಗೆ ಸ್ಥಳಕ್ಕೆ ಬೆಂ. ಪೂರ್ವ ತಾಲ್ಲೂಕ ತಹಶೀಲ್ದಾರ್ ಅಜಿತ್ ರೈ ಆಗಮಿಸಿದ್ದು, ತಹಶೀಲ್ದಾರ್ ಆಗಮಿಸಿದ 20 ನಿಮಿಷಕ್ಕೆ ಇಡೀ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತವಾಗಿದೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದರೆ ಮಾಧ್ಯಮಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ದೌಲತ್ತು ತೋರಿಸಿದರು. ಒಟ್ಟು 2.4 ಮೀಟರ್ ಮಾರ್ಕಿಂಗ್ ಮಾಡಿ ಕೇವಲ 4 ಕಲ್ಲು ಬೀಳಿಸಿದ್ದೀರಿ ಎಂಬ ಪ್ರಶ್ನೆಗೆ ತಹಶಿಲ್ದಾರ್ ಗರಂ ಆದರು. ಅದು ನಮ್ಮ ಕೆಲಸ ನಾವು ಮಾಡ್ಕೋತ್ತೀವಿ ನೀವು ಕಷ್ಟ ಬೀಳ್ಬೇಡಿ ಎಂದು ತಹಶೀಲ್ದಾರ್ ಅಜಿತ್ ರೈ ಹೇಳಿದರು.
ವಿಪ್ರೊ ಕಾಂಪೌಂಡ್ ತೆರವಿಗೆ ಗ್ಯಾಸ್ ಕಟರ್ ಬಳಸಬೇಕು, ಹಾಗಾಗಿ ಕೆಲಸ ಸ್ಥಗಿತ: ಬಸವರಾಜ್ ಕಬಾಡೆ
ಮಹದೇವಪುರ ವಲಯದಲ್ಲಿ 5 ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಚೀಫ್ ಎಂಜಿನಿಯರ್ ಬಸವರಾಜ್ ಕಬಾಡೆ ಹೇಳಿಕೆ ನೀಡಿದರು. ವಿಪ್ರೋ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ವಿಪ್ರೊ ಕಾಂಪೌಂಡ್ ತೆರವಿಗೆ ಗ್ಯಾಸ್ ಕಟರ್ ಬಳಸಬೇಕಿದೆ. ಹಾಗಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತ ಮಾಡಲಾಗಿದೆ. ಜಲಮಂಡಳಿ STP ಪ್ಲಾಂಟ್ ಬಳಿಯ ಬ್ರಿಡ್ಜ್ ತೆರವು ಮಾಡ್ತೀವಿ. ವಿಜಯಲಕ್ಷ್ಮಿಪುರ ವ್ಯಾಪ್ತಿಯಲ್ಲಿ ಶೆಡ್ಗಳನ್ನ ತೆರವು ಮಾಡುತ್ತೇವೆ. ಸಕ್ರಾ ಆಸ್ಪತ್ರೆ ಹಿಂಬಾಗದ ಮೋರಿ ತೆರವು ಮಾಡುತ್ತೇವೆ. ಸ್ಟಿರ್ಲಿಂಗ್ ಅಪಾರ್ಟ್ಮೆಂಟ್ಗೆ ನೋಟಿಸ್ ನೀಡಲಾಗುತ್ತದೆ ಎಂದು ಹೇಳಿದರು.
ಬಿಬಿಎಂಪಿ ಮತ್ತು ಕಂದಾಯ ಅಧಿಕಾರಿಗಳಿಂದ ಭಾರೀ ಡ್ರಾಮಾ:
ರಾಜಕಾಲುವೆ ಒತ್ತುವರಿ ತೆರವು ವೇಳೆ ಬಿಬಿಎಂಪಿ ಮಹಾ ನಾಟಕವಾಡಿದ್ದು, ಮಾಧ್ಯಮಗಳ ದಿಕ್ಕು ತಪ್ಪಿಸಿ ಬೇರೆ ತಡೆಗೋಡೆಯನ್ನ ಪಾಲಿಕೆ ಹೊಡೆದು ಹಾಕಿದೆ. ವಿಪ್ರೋ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಕೈ ನಡುಕ ಉಂಟಾಗಿದ್ದು, ಬಿಬಿಎಂಪಿ ಮತ್ತು ಕಂದಾಯ ಅಧಿಕಾರಿಗಳಿಂದ ಭಾರೀ ಡ್ರಾಮಾ ಮಾಡಲಾಗಿದೆ. ರಾಜಕಾಲುವೆ ಇರೋದೇ ಒಂದು ಕಡೆಯಾದರೆ, ತಡೆಗೋಡೆ ತೆರವು ಮಾಡ್ತಿರೋದು ಮತ್ತೊಂದು ಕಡೆ. ಬುಲ್ಡೋಜರ್ ಹೊಡೆದು ಉರುಳಿಸಿದ್ದು ಮತ್ತೊಂದು ಗೋಡೆಯನ್ನಲಾಗುತ್ತಿದೆ. 2.4 ಮೀ. ರಾಜಕಾಲುವೆ ಒತ್ತುವರಿ ಅಂತ ಮಾರ್ಕ್ ಮಾಡಿದ್ದ ಪಾಲಿಕೆ, ವಿಪ್ರೋ ಕಂಪನಿಯೊಳಗೆ ರಾಜಕಾಲುವೆ ಹಾದು ಹೋಗುತ್ತದೆ. ವಿಪ್ರೋ ಕಂಪನಿ ಕ್ಯಾಂಪಸ್ನಲ್ಲಿ ಹಾದುಹೋಗುವ ರಾಜಕಾಲುವೆಯ ಸ್ಲ್ಯಾಬ್, ಆದರೆ ಅದರ ಪಕ್ಕದ ತಡೆ ಗೋಡೆ ಉರುಳಿಸಿ ಬಿಬಿಎಂಪಿ ಅಧಿಕಾರಿಗಳು ಜೈ ಎಂದಿದ್ದಾರೆ. ವಿಪ್ರೋ ಕಂಪನಿ ಹಾಗೂ ಸಲಾರ್ ಪುರಿಯಾ ಅಪಾರ್ಟ್‌ಮೆಂಟ್ ಬೆನ್ನಿಗೆ ಅಧಿಕಾರಿಗಳು ನಿಂತ್ತುಕೊಂಡಿದ್ದಾರೆನ್ನಲಾಗುತ್ತಿದೆ.
ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ
ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಸ್ಥಿತಿ ಹಿನ್ನೆಲೆ ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ. ರಾಜಕಾಲುವೆ ಒತ್ತುವರಿ ಕುರಿತಾದ ಸಿಎಜಿ ವರದಿ ಜಾರಿಗೊಳಿಸಿ ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. 2021ರ ಸೆಪ್ಟೆಂಬರ್ನಲ್ಲೇ ಸಿಎಜಿ ವರದಿ ನೀಡಿದ್ರೂ ಕ್ರಮ ಕೈಗೊಂಡಿಲ್ಲ. ಸಿಎಜಿ ವರದಿ ಜಾರಿಗೆ ಬಿಬಿಎಂಪಿ ಕ್ರಮ ತೃಪ್ತಿಕರವಾಗಿಲ್ಲ ಎಂದು ಸಿಎಜಿ ವರದಿ ಜಾರಿಗೆ 3 ಅಧಿಕಾರಿಗಳ ಸಮಿತಿ ರಚಿಸಲು ಸೂಚನೆ ನೀಡಿದೆ. ಈ ಸಮಿತಿ ಸಿಎಜಿ ವರದಿ ಜಾರಿ ಬಗ್ಗೆ ನಿಗಾ ವಹಿಸಬೇಕು.
15 ದಿನಗಳಿಗೊಮ್ಮೆ ಹೈಕೋರ್ಟ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. 2,626 ರಾಜಕಾಲುವೆ ಒತ್ತುವರಿ ಪೈಕಿ 2,024 ತೆರವುಗೊಳಿಸಲಾಗಿದೆ. 602 ಒತ್ತುವರಿ ತೆರವು ಬಾಕಿಯಿರುವುದಾಗಿ ಬಿಬಿಎಂಪಿ ಹೇಳಿದೆ. ಎಲ್ಲ ಒತ್ತುವರಿ ತೆರವುಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಬೇಕು. ಹೈಕೋರ್ಟ್ ಆದೇಶ ಪಾಲಿಸದಿದ್ರೆ ಗಂಭೀರವಾಗಿ ಪರಿಗಣಿಸಲಾಗುವುದು. ಬೇರೆ ಸಂಸ್ಥೆಗಳು ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸದಂತೆ ಸೂಚನೆ ನೀಡಿ ಹೈಕೋರ್ಟ್ ಆದೇಶಿಸಿದೆ.
ಕೆರೆ ಒತ್ತುವರಿ ಕುರಿತು ತನಿಖೆ ಮಾಡಲು ಸರ್ಕಾರ ಸಿದ್ಧ
ಇನ್ನು ಮತ್ತೊಂದು ಕಡೆ ಕೆರೆ ಒತ್ತುವರಿ ಕುರಿತು ತನಿಖೆ ಮಾಡಲು ಸರ್ಕಾರ ಸಿದ್ಧ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒತ್ತುವರಿ ಬಗ್ಗೆ ತನಿಖೆ ಮಾಡಿಯೇ ಮಾಡುತ್ತೇವೆ. ತನಿಖೆಯ ಸ್ವರೂಪದ ಕುರಿತು ಮುಂದೆ ಮಾಹಿತಿ ನೀಡುತ್ತೇನೆ. ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯ್ತು, ಕೆರೆಗಳನ್ನು ಹೇಗೆ ಮುಚ್ಚಲಾಯ್ತು, ಅನುಮತಿ ಕೊಟ್ಟವಱರು? ಈ ಎಲ್ಲದರ ಬಗ್ಗೆಯೂ ಸಹ ತನಿಖೆಯನ್ನು ಮಾಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಘೋಷಣೆ ಮಾಡಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿ ಅತಿವೃಷ್ಟಿ ಕುರಿತು ಕಂದಾಯ ಸಚಿವ ಅಶೋಕ್ ಉತ್ತರ ಕೊಡ್ತಿದ್ರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸರ್ವಜ್ಞ ನಗರ ಶಾಸಕ ಕೆ.ಜೆ. ಜಾರ್ಜ್, ಕೆರೆ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲಾ ಸರಕಾರಗಳದ್ದು. ಆದರೆ ಕೆರೆ ಒತ್ತುವರಿ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ. ದುರುದ್ದೇಶದಿಂದ ಆರೋಪ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಕಾಲದಲ್ಲಿ ಕೆರೆ ಮುಚ್ಚಿದ್ದರೆ ತನಿಖೆ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Mon, 19 September 22