ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದವರು ಯಾವುದೇ ಕಳ್ಳತನ ಮಾಡಿಲ್ಲ. ನಾವೇನು ಲಂಚ ಪಡೆದಿದ್ದೆವಾ? ಅಥವಾ ಮಂಚಕ್ಕೆ ಹೋಗಿದ್ದೆವಾ? 40 ಪರ್ಸೆಂಟ್ ಕಮಿಷನ್ಗಾಗಿ ಸಚಿವರು ರಾಜೀನಾಮೆ ಕೊಡಲಿಲ್ವಾ? ನಮ್ಮ ನಾಯಕರನ್ನು ಮುಗಿಸುವುದಕ್ಕೆ ಬಿಜೆಪಿಯವರು (BJP Leaders) ಹೊರಟಿದ್ದಾರೆ. ಕಾಂಗ್ರೆಸ್ನವರು ದೇಶಕ್ಕಾಗಿ ಪ್ರಾಣ ಬೇಕಾದರೂ ಕೊಡಲು ಸಿದ್ಧ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ, ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Padayatra) ಪಾಲ್ಗೊಂಡಿದ್ದಕ್ಕಾಗಿ ಅವರು ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಹಾಜರಾಗಿದ್ದರು.
ಬಿಜೆಪಿಯವರು ಎಷ್ಟೇ ಕೇಸ್ ಹಾಕಿದರೂ ನಾವು ಹೆದರುವುದಿಲ್ಲ. ಬಿಜೆಪಿಯ ಸಿಎಂ, ಕೇಂದ್ರ ಸಚಿವರು, ಸಚಿವರು ರ್ಯಾಲಿ ಮಾಡಿದ್ದಾರೆ. ಆ ಸಂಬಂಧ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಅವರ ರ್ಯಾಲಿ ಬಗ್ಗೆ ಯಾವುದೇ ಚಾರ್ಜ್ಶೀಟ್ ದಾಖಲಾಗಿಲ್ಲ. ರಾಜ್ಯ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ರಾಷ್ಟ್ರ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಕೇಂದ್ರ ಸರ್ಕಾರ ಬಹಳ ದೊಡ್ಡ ತಪ್ಪು ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದೇ ತಪ್ಪಾ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಯಾವ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ? ನಮ್ಮ ನಾಯಕರು ಮಾಡಿಕೊಂಡಿದ್ದ ಸಂಸ್ಥೆಯನ್ನ ನಾವು ಮುಂದುವರೆಸಿದ್ದೇವೆ. ಕೇಂದ್ರ ಸರ್ಕಾರ ಬಹಳ ದೊಡ್ಡ ತಪ್ಪು ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಹಕ್ಕು. ಹೋರಾಟ ಮಾಡದಿದ್ದರೇ ಏನು ಮಾಡಲು ಸಾಧ್ಯ? ರಾಜ್ಯದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ಮಾಡಿಲ್ಲ. ಕಾಂಗ್ರೆಸ್ ನವರು ಯಾವುದೇ ಕಳ್ಳತನ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಏನಿದು ಪ್ರಕರಣ?:
ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಒಟ್ಟು 29 ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್ ಸೇರಿ ಒಟ್ಟು 29 ನಾಯಕರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಇದೇ ವರ್ಷದ ಜನವರಿಯಲ್ಲಿ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಏರುಗತಿಯಲ್ಲಿದ್ದಾಗ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದರು. ಬಳಿಕ ನ್ಯಾಯಾಲಯದ ತಾಕೀತಿನ ಬಳಿಕ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದರು. ಆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Wed, 15 June 22