ಡಾ.ಅಶ್ವತ್ಥ್ ನಾರಾಯಣ ದೇಶ ಕಂಡ ಅತ್ಯಂತ ಭ್ರಷ್ಟ ಸಚಿವ; ವಿಸಿಗಳ ನೇಮಕದಲ್ಲಿ ದುಡ್ಡು ಮಾಡಿದ್ದಾರೆ ಎಂದು ಆರೋಪ ಮಾಡಿದ ಡಿ.ಕೆ.ಶಿವಕುಮಾರ್
ವಿಶ್ವವಿದ್ಯಾಲಯಗಳಿಗೆ ವಿಸಿಗಳ ನೇಮಕದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ದುಡ್ಡು ಮಾಡಿದ್ದಾರೆ. ಪಿಎಸ್ಐ ನೇಮಕಾತಿ ಹಗರಣ ಬಯಲಾಗಿದ್ದಕ್ಕೆ ಸುಮ್ಮನಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ ಬಗ್ಗೆ ಮುಂದೆ ಮಾತನಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಡಾ.ಅಶ್ವತ್ಥ್ ನಾರಾಯಣ(Dr. Ashwath Narayana) ದೇಶ ಕಂಡ ಅತ್ಯಂತ ಭ್ರಷ್ಟ ಸಚಿವ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆರೋಪ ಮಾಡಿದ್ದಾರೆ. ವಿಶ್ವವಿದ್ಯಾಲಯಗಳಿಗೆ ವಿಸಿಗಳ ನೇಮಕದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ದುಡ್ಡು ಮಾಡಿದ್ದಾರೆ. ಪಿಎಸ್ಐ ನೇಮಕಾತಿ ಹಗರಣ ಬಯಲಾಗಿದ್ದಕ್ಕೆ ಸುಮ್ಮನಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ ಬಗ್ಗೆ ಮುಂದೆ ಮಾತನಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹೊಸ ಸಂಪ್ರದಾಯ ಹುಟ್ಟುಹಾಕಿದೆ ದೆಹಲಿಯಲ್ಲಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಬಿಜೆಪಿ ಹೊಸ ಸಂಪ್ರದಾಯ ಹುಟ್ಟುಹಾಕಿದೆ. ಶ್ರೀನಿವಾಸ್ ಪ್ರತಿಭಟನೆಗೆ ಹೋಗುವಾಗಲೇ ಅರೆಸ್ಟ್ ಮಾಡೋದಕ್ಕೆ ಮುಂದಾಗಿದ್ದಾರೆ. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಬಿಜೆಪಿ ಸರ್ಕಾರ ವರ್ತಿಸುತ್ತಿರುವ ರೀತಿ ಸರಿ ಅಲ್ಲ. ನನ್ನ ಇಡಿಗೆ ಕರೆದುಕೊಂಡು ಹೋಗಿದ್ದಾಗ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೂ ರ್ಯಾಲಿ ಮಾಡಿದ್ರು. ಯಾರಾದರೂ ಗಲಾಟೆ ಮಾಡಿದ್ರಾ. ಅವರು ನೋವು ,ದುಃಖ ದುಮ್ಮಾನ ಹೇಳಿಕೊಂಡ್ರು. ದೇಶದ ಉದ್ದಗಲಕ್ಕೂ ನಮ್ಮ ನಾಯಕರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿರುವ ಹಕ್ಕು. ನಿನ್ನೆ ಗಲಾಟೆ ಆಯಿತು. ಶ್ರೀನಿವಾಸ ಮನೆಯಿಂದ ಹೊರ ಬರುವ ಮುಂಚೆ ಅರೆಸ್ಟ್ ಮಾಡಲು ಹೋಗಿದ್ದರು. ಆತ ಪ್ರತಿಭಟನೆಗೆ ಹೋಗಬೇಕು. ಇದನ್ನೂ ಓದಿ: ಪ್ರವಾದಿ ಬಗ್ಗೆ ನೂಪುರ್ ಶರ್ಮಾರ ಹೇಳಿಕೆ ಖಂಡಿಸಿ ರಾಜಸ್ಥಾನದ ಬಿಜೆಪಿ ಕೌನ್ಸಿಲರ್ ರಾಜೀನಾಮೆ
ಅರೆಸ್ಟ್ ಮುಖ್ಯನಾ, ಪ್ರತಿಭಟನೆ ಮುಖ್ಯನಾ. ಹೋಗಲೇ ಬಾರದು ಎಂದರೇ ಹೇಗೆ. ಪ್ರತಿಭಟನೆಗೆ ಹೋಗದಂತೆ ಎಲ್ಲಾ ಗಾಡಿಗಳನ್ನು ತಡೆ ಹಿಡಿದ್ದರು. ಹೆಚ್.ಕೆ.ಪಾಟೀಲ್, ಡಿಕೆ ಸುರೇಶ್, ದಿನೇಶ್ ಗುಂಡೂರಾವ್ ಕಚೇರಿಗೆ ಹೋದ್ರೆ ಬಂಧನ ಮಾಡಿದ್ದಾರೆ. ಏನಿದು ಅನ್ಯಾಯ, ಏನು ಕ್ರೈಮ್ ಮಾಡಿದ್ದಾರೆ. ಏನು ಮಾಡಬಾರದು ಮಾಡಿದ್ದಾರೆ. ನಮ್ಮ ಕಚೇರಿಗೆ ಹೋದ್ರೆ ಅರೆಸ್ಟ್ ಮಾಡ್ತಾರೆ ಅಂದರೆ ಇಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ. ಇದು ತುರ್ತು ಪರಿಸ್ಥಿತಿಗಿಂತ ದೊಡ್ಡ ವಿಚಾರ ಮಾಡುತ್ತಿದ್ದಾರೆ. ಇದನ್ನ ನಾವು ಖಂಡಿಸುತ್ತೇವೆ. ಹಾಗಾಗಿ ನಾವು ಹೋರಾಟ ಮಾಡ್ತೇವೆ. ನಮ್ಮ ನಾಯಕರು ಯಾವ ತಪ್ಪು ಮಾಡಿಲ್ಲ ಎಂದರು.
ದೆಹಲಿ ಪೊಲೀಸರ ವಶದಲ್ಲಿರುವ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್ ಸೋನಿಯಾ, ರಾಹುಲ್ ಗಾಂಧಿಗೆ ಇಡಿ ನೋಟಿಸ್ ಖಂಡಿಸಿ ಪ್ರತಿಭಟನೆಗೆ ತೆರಳುತ್ತಿದ್ದವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಐಸಿಸಿ ಕಚೇರಿಯಿಂದ 45 ಕಿ.ಮೀ. ದೂರದ ನರೇಲಾ ಠಾಣೆಗೆ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್ ರನ್ನು ಸ್ಥಳಾಂತರಿಸಲಾಗಿದೆ. ನರೇಲಾ ಪೊಲೀಸ್ ಠಾಣೆಯಲ್ಲಿ ಡಿ.ಕೆ.ಸುರೇಶ್, ದಿನೇಶ್ರಿಂದ ರಕ್ತದಾನ ಮಾಡಿದ್ದಾರೆ. ದೆಹಲಿ ಪೊಲೀಸರು ರಾಹುಲ್ ವಿಚಾರಣೆ ಮುಗಿಯುವರೆಗೆ ಕಾಂಗ್ರೆಸ್ ನಾಯಕರನ್ನು ಠಾಣೆಯಲ್ಲೇ ಕೂರಿಸಲಿದ್ದಾರೆ.
ಇನ್ನು ಮತ್ತೊಂದು ಕಡೆ ಡಿಕೆ ಶಿವಕುಮಾರ್ಗೆ ಅಶ್ವತ್ಥ ನಾರಾಯಣ ತಿರುಗೇಟು ಕೊಟ್ಟಿದ್ದಾರೆ. ಡಿಕೆಶಿ ಏನು ಹೇಳ್ತಾರೋ ಅದಕ್ಕೆ ಉಲ್ಟಾ ಆಗಿರತ್ತೆ, ಅವರ ಹೇಳಿಕೆಗಳು ವಿರುದ್ಧವಾಗಿರುತ್ತೆ. ಡಿಕೆಶಿ ಹೇಳಿಕೆಗೆ ಮಾನ್ಯತೆಯೂ ಇಲ್ಲ ಬೆಲೆಯೂ ಇಲ್ಲ. ಯಾವ ನೈತಿಕತೆ ಮೌಲ್ಯ ಸಿದ್ದಾಂತ ಯಾವುದೂ ಡಿಕೆಶಿಗೆ ಇಲ್ಲ. ಸರ್ವೀಸ್ ಅಗೇನೆಸ್ಟ್ ಪೇಮೆಂಟ್ ಅವರದ್ದು. ಹೊಲ ಗದ್ದೆಗಳಲ್ಲಿ ಬಂಗಾರ ಬೆಳೆಯುವವರು ಡಿಕೆ ಶಿವಕುಮಾರ್. ಏನು ಮುಟ್ಟಿದರೂ ಸರ್ವೀಸು- ಪೇಮೆಂಟು. ಅವರ ಪಕ್ಷ ಅವರು ಬೆಳೆದು ಬಂದ ದಾರಿ ಎಲ್ಲರಿಗೂ ಗೊತ್ತಿದೆ. ಭ್ರಷ್ಟಾಚಾರವೇ ಅವರ ಸಂಸ್ಕೃತಿ. ಯಾವ ಅರ್ಹತೆ ಬದ್ದತೆ ನೈತಿಕತೆಯೂ ಇಲ್ಲ. ಇವರದ್ದು ಕಾಮಾಲೆ ಕಣ್ಣು, ಎಲ್ಲವೂ ಹಳದಿ ಕಾಣುತ್ತದೆ. ಭ್ರಷ್ಟಾಚಾರವನ್ನು ಸಂಪೂರ್ಣ ಬಯಲಿಗೆಳೆಯುವ ಕೆಲಸ ಮಾಡ್ತೇವೆ. ಯಾರೆಲ್ಲ ಬರ್ತಾರೆ ಬರಲಿ ಸವಾಲುಗಳನ್ನು ಮೀರಿ ಬೆಳೆಯಬೇಕು. ಪಿಎಸ್ಐ ನೇಮಕಾತಿ ಯಾವಾಗೆಲ್ಲ ಆಗಿದೆಯೋ ಆಗೆಲ್ಲ ಅಕ್ರಮ ಮಾಡಿದ್ದಾರೆ. ಇವರ ಸರ್ಕಾರ ಇದ್ದಾಗ ಏನು ಕ್ರಮ ತೆಗೆದುಕೊಂಡಿದ್ದಾರೆ ಹೇಳಲಿ ನೋಡೋಣ. ಅಕ್ರಮ ಪಾಲಿಸಿ ಪೋಷಿಸಿ ಬೆಳೆಸಿದವರು ಇವರ ಪಕ್ಷದವರು. ಎಲ್ಲರ ಮೇಲೂ ತನಿಖೆ ನಡೆಯುತ್ತಿದೆ. ಜೀವನೋಪಾಯಕ್ಕಾಗಿ ಬೇರೆಯವರ ರಕ್ತ ಹೀರುತ್ತಿಲ್ಲ ನಾನು. ಡಿಕೆಶಿಯವರ ಕ್ಯಾಟಗರಿಗೆ ಸೇರಿದವನಲ್ಲ ನಾನು. ಬೇರೆಯವರ ಹತ್ರ ಛೀ ಥೂ ಅಂತ ಇವರ ತರಹ ಉಗಿಸಿಕೊಂಡಿಲ್ಲ. ಅವರ ಆತಂಕ ಏನು ಅಂತ ಅವರನ್ನೇ ಕೇಳಬೇಕು. ನನಗೆ ವ್ಯಕ್ತಿಗತವಾಗಿ ಯಾವ ದ್ವೇಷವೂ ಇಲ್ಲ. ಸಿಎಂ ನಮ್ಮ ಜಿಲ್ಲೆಗೆ ಬಂದಾಗ ಏನು ವ್ಯಕ್ತಪಡಿಸಬೇಕಿತ್ತೋ ಅದನ್ನು ವ್ಯಕ್ತಪಡಿಸಿದ್ದೆ. ದ್ವೇಷ ಸಾಧನೆ ಕೀಳುಮಟ್ಟದ ರಾಜಕಾರಣ ಮಾಡೋದು ನೋಡಿದರೆ ಡಿಕೆ ಶಿವಕುಮಾರ್ ಅವರ ಉದ್ದೇಶ ಏನು ಅನ್ನೋದು ಅರ್ಥವಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.
ನಾನು ಯಾರನ್ನೂ ಟಾರ್ಗೆಟ್ ಮಾಡುವುದಕ್ಕೆ ಬಂದಿಲ್ಲ. ಇಂಥ ವ್ಯಕ್ತಿಗಳ ಜೊತೆಗೆ ನಾನು ಗುದ್ದಾಟಕ್ಕೆ ಇಳಿದು ಸಮಯ ವ್ಯರ್ಥ ಮಾಡುವವನಲ್ಲ. ಅವರಾಗಿಯೇ ಗುದ್ದಾಡಿಕೊಂಡು ಬಂದರೆ ಬರಲಿ. ನನ್ನ ಟಾರ್ಗೆಟ್ ಮಾಡಿಕೊಂಡು ಬಂದರೆ ಡಿಕೆ ಶಿವಕುಮಾರ್ ಅಡ್ರೆಸ್ ಇಲ್ದಂಗಾಗ್ತಾರೆ. ನನ್ನ ಟಾರ್ಗೆಟ್ ಮಾಡಿದರೆ ಅವರೇ ಇಳಿಮುಖವಾಗ್ತಾರೆ. ಇವರು ಯಾವ ಕುತಂತ್ರ ಬೇಕಾದರೂ ಮಾಡ್ತಾರೆ. ಯಾವ ಕೀಳುಮಟ್ಟಕ್ಕೆ ಇಳಿಯೋದಕ್ಕೆ ಬೇಕಾದರೂ ಹೋಗುವ ವ್ಯಕ್ತಿ ಡಿಕೆ ಶಿವಕುಮಾರ್ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:30 pm, Tue, 14 June 22