ಬೆಂಗಳೂರು: ಡಿಎಂಕೆ ಮುಖಂಡನ ಮೇಲೆ ಲಾಂಗ್, ಮಚ್ಚಿ​ನಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರಿನ ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿರುವ ಹೊಟೇಲ್​ನಲ್ಲಿ ಚಹಾ ಕುಡಿಯುತ್ತಿದ್ದ ಡಿಎಂಕೆ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಮಿಳುನಾಡಿನಿಂದ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದ ಐವರು ಮಚ್ಚು, ಲಾಂಗ್‌ಗಳಿಂದ ಮನಬಂದಂತೆ ಹಲ್ಲೆಗೈದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು: ಡಿಎಂಕೆ ಮುಖಂಡನ ಮೇಲೆ ಲಾಂಗ್, ಮಚ್ಚಿ​ನಿಂದ ಮಾರಣಾಂತಿಕ ಹಲ್ಲೆ
ಹಲ್ಲೆಗೊಳಗಾದ ಡಿಎಂಕೆ ಮುಖಂಡ ಗುರುಸ್ವಾಮಿ
Updated By: Rakesh Nayak Manchi

Updated on: Sep 04, 2023 | 9:20 PM

ಬೆಂಗಳೂರು, ಸೆ.4: ಹೊಟೇಲ್​ನಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ತಮಿಳುನಾಡಿನಿಂದ ಕಾರಿನಲ್ಲಿ ಬಂದ ಐವರ ಗುಂಪೊಂದು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಗರದ (Bengaluru) ಬಾಣಸವಾಡಿಯ ಕಮ್ಮನಹಳ್ಳಿ ನಡೆದಿದೆ. ಗಂಭೀರವಾಗಿ ಹಲ್ಲೆಗೊಳಗಾದ ವ್ಯಕ್ತಿ ಮದುರೈ ಕಾರ್ಪೊರೇಷನ್‌ನ ಮಾಜಿ ಡಿಎಂಕೆ (DMK) ಮಂಡಲ ಅಧ್ಯಕ್ಷ ವಿ.ಕೆ.ಗುರುಸ್ವಾಮಿ ಎಂದು ತಿಳಿದುಬಂದಿದೆ.

ವಿ.ಕೆ.ಗುರುಸ್ವಾಮಿ ಅವರು ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್‌ನಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ತಮಿಳುನಾಡಿನಿಂದ ಕಾರಿನಲ್ಲಿ ಬಂದ ಐವರು ಹೊಟೇಲ್​ಗೆ ನುಗ್ಗಿ ಗುರುಸ್ವಾಮಿ ಮೇಲೆ ಮಚ್ಚು, ಲಾಂಗ್‌ಗಳಿಂದ ಮನಬಂದಂತೆ ಹಲ್ಲೆಗೈದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ಗಲಾಟೆ, ವಿದ್ಯಾರ್ಥಿಗೆ ಚಾಕು ಇರಿತ

ಮಾರಣಾಂತಿಕ ಹಲ್ಲೆಗೊಳಗಾದ ಗುರುಸ್ವಾಮಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಬಾಣಸವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರೂ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಕಷ್ಟು ದ್ವೇಷ ಕಟ್ಟಿಕೊಂಡಿರುವ ಗುರುಸ್ವಾಮಿ

ತನ್ನ 20 ನೇ ವರ್ಷದಲ್ಲೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುಸ್ವಾಮಿ, ಮಧುರೈನಲ್ಲಿ ಸಾಕಷ್ಟು ಧ್ವೇಷ ಕಟ್ಟಿಕೊಂಡಿದ್ದರು. ಜೀವ ಬೆದರಿಕೆ ಇರುವ ಹಿನ್ನೆಲೆ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದು ಹತ್ಯೆಗೆ ಸ್ಕೆಚ್ ಹಾಕಿ ಬಂದ ಗ್ಯಾಂಗ್, ಬೆಂಗಳೂರಿನ ಬಾಣಸವಾಡಿಯ ಹೋಟೆಲ್​ನಲ್ಲಿದ್ದಾಗ ದಾಳಿ ನಡೆಸಿದ್ದಾರೆ.

ಗುರುಸ್ವಾಮಿ ಜೊತೆಯಲ್ಲಿದ್ದವರೇ ಮಾಹಿತಿ ಲೀಕ್ ಮಾಡಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿವಿಧ ಪ್ರಕರಣಗಳು ಹೊಂದಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಪ್ರಸ್ತುತ ಜಾಮೀನಿನ ಮೇಲೆ ಗುರುಸ್ವಾಮಿ ಹೊರಗಿದ್ದಾರೆ.

ಗುರುಸ್ವಾಮಿ ವಿರುದ್ಧ ನಡೆಯುತ್ತಲೇ ಇತ್ತು ಕೊಲೆ ಸಂಚು

ಪ್ರಕರಣ ಸಂಬಂಧ ಮಾತನಾಡಿದ ಪೂರ್ವ ವಿಭಾಗ ಡಿಸಿಪಿ ಭೀಮಾ ಶಂಕರ್ ಗುಳೇದ್, ಗುರುಸ್ವಾಮಿ ವಿರುದ್ಧ ಸಾಕಷ್ಟು ಕ್ರಿಮಿನಲ್ ಬ್ಯಾಗ್ರೌಂಡ್ ಇದೆ. ಎದುರಾಳಿಗಳು ಈತನನ್ನು ಹೊಡೆಯೋಕೆ ಸ್ಕೆಚದ ಹಾಕುತ್ತಲೇ ಇದ್ದರು. ತಲೆಮರಿಸಿಕೊಳ್ಳಲು ಬೆಂಗಳೂರಿಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ನಗರದಲ್ಲಿ ಮನೆಯೊಂದನ್ನು ನೋಡುತ್ತಿದ್ದ. ಬ್ರೋಕರ್ ಮೂಲಕ ಮನೆಯೊಂದನ್ನು ನೋಡುತ್ತಿದ್ದ. ಸಂಜೆ ಮನೆಯನ್ನು ನೋಡಿದ ಬಳಿಕ ಬ್ರೋಕರ್ ಜೊತೆ ಚಹಾ ಕುಡಿಯಲು ಬಂದಿದ್ದಾಗ ನಾಲ್ಕೈದು ಜನರು ಬಂದು ಹೊಡೆದಿದ್ದಾರೆ. ತಲೆ ಸೇರಿ ಹಲವು ಕಡೆಗಳಲ್ಲಿ ಗಾಯಗಳಾಗಿವೆ ಎಂದಿದ್ದಾರೆ.

ರಾಜಕೀಯವಾಗಿ ಆತನಿಗೆ ಏನು ಹಿನ್ನಲೆ ಇತ್ತು ಅದು ಇದುವರೆಗೂ ಗೊತ್ತಿಲ್ಲ. ಆದರೆ ಈತನ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣಗಳು ಹೆಚ್ಚಿವೆ. ಕಿರೈತುರೈ ಠಾಣೆಯ ರೌಡಿಶೀಟರ್ ಕೂಡ ಹೌದು. ಅದರ ಬಗ್ಗೆ ನಾವು ಮಾಹಿತಿ ಕಲೆಹಾಕುತ್ತಿದ್ದೇವೆ. ಎರಡು ತಂಡಗಳನ್ನು ಮಧುರೈಗೆ ಕಳಿಸುತ್ತಿದ್ದೇವೆ. ಅಲ್ಲಿನ ಪೊಲೀಸರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಮುರುಗನ್, ಕಾಳಿ ಮುತ್ತು, ಅಟ್ಯಾಕ್ ಪಾಂಡೀ, ರಾಜಾ ಪಾಂಡ್ಯನ್ ಇವರೆಲ್ಲ ಈತನ ಎದುರಾಳಿಗಳಾಗಿದ್ದಾರೆ. ಸದ್ಯ ಯಾರು ಹೊಡೆದಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:00 pm, Mon, 4 September 23