ಜುಲೈ 1ರಿಂದ ಕಬ್ಬನ್ ಪಾರ್ಕ್​ನಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನಿಷೇಧ ಪ್ರಸ್ತಾವ: ನಾಯಿ ಸಾಕಿದವರಿಂದ ಆಕ್ರೋಶ

ಕಬ್ಬನ್​ ಪಾರ್ಕ್​ಗೆ ಬರುವ ನಾಯಿಗಳಿಂದ ತೊಂದರೆಯಾಗುತ್ತಿದೆ ಎಂದು ಸುಮಾರು 300 ಮಂದಿ ದೂರು ನೀಡಿದ್ದರು.

ಜುಲೈ 1ರಿಂದ ಕಬ್ಬನ್ ಪಾರ್ಕ್​ನಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನಿಷೇಧ ಪ್ರಸ್ತಾವ: ನಾಯಿ ಸಾಕಿದವರಿಂದ ಆಕ್ರೋಶ
ಪ್ರಾತಿನಿಧಿಕ ಚಿತ್ರ
Edited By:

Updated on: Jun 27, 2022 | 9:09 AM

ಬೆಂಗಳೂರು: ಕಬ್ಬನ್​ ಪಾರ್ಕ್​ನಲ್ಲಿ ಜುಲೈ 1ರಿಂದ ಸಾಕುಪ್ರಾಣಿಗಳಿಗೆ ಪ್ರವೇಶ ನಿಷೇಧಿಸುವ (Cubbon Park Dogs Ban) ಕುರಿತು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ಈ ಪ್ರಸ್ತಾವದ ಬಗ್ಗೆ ನಾಯಿಗಳನ್ನು ಸಾಕಿರುವವರು ಮತ್ತು ಪ್ರಾಣಿ ರಕ್ಷಣಾ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ತೋಟಗಾರಿಕೆ ಇಲಾಖೆಯು (Horticulture Department) ಇಂಥದ್ದೇ ಆದೇಶ ಮಾಡಿತ್ತು. ಆದರೆ ವ್ಯಾಪಕ ಜನಾಕ್ರೋಶ ವ್ಯಕ್ತವಾದ ನಂತರ ತೋಟಗಾರಿಕೆ ಇಲಾಖೆಯು ಈ ಆದೇಶ ಹಿಂಪಡೆದಿತ್ತು. ಹೀಗೆ ಸಾರಾಸಗಟಾಗಿ ಸಾಕುಪ್ರಾಣಿಗಳಿಗೆ ಪ್ರವೇಶ ನಿರಾಕರಿಸುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಾಯಿಗಳು ಸ್ವತಂತ್ರವಾಗಿ ಓಡಲು, ಆಡಲು ಸ್ಥಳವೇ ಇಲ್ಲದಂತೆ ಆಗುತ್ತದೆ. ತೋಟಗಾರಿಕೆ ಇಲಾಖೆಯು ತನ್ನ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ change.org ಜಾಲತಾಣದಲ್ಲಿ ಕಬ್ಬನ್ ಪಾರ್ಕ್ ಕ್ಯಾನೀಸ್ ಮತ್ತು ಕಬ್ಬನ್ ಡಾಗ್ ಪಾರ್ಕ್ ಸ್ವಯಂಸೇವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೋಟಗಾರಿಕೆ ಇಲಾಖೆ ಪ್ರಸ್ತಾವಕ್ಕೆ ಈಗಾಗಲೇ ಸುಮಾರು 5,500 ಮಂದಿ ತಮ್ಮ ಸಹಮತ ಸೂಚಿಸಿದ್ದಾರೆ.

ಕಬ್ಬನ್​ ಪಾರ್ಕ್​ಗೆ ಬರುವ ನಾಯಿಗಳಿಂದ ತೊಂದರೆಯಾಗುತ್ತಿದೆ ಎಂದು ಸುಮಾರು 300 ಮಂದಿ ದೂರು ನೀಡಿದ್ದರು. ನಾಯಿಗಳು ಬೇಕಾಬಿಟ್ಟಿಯಾಗಿ ಓಡಾಡುವುದು, ಓಡುವುದು, ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಜನರು ದೂರಿದ್ದರು.

‘ನಾಯಿಗಳನ್ನು ಕರೆತರುವ ಕೆಲವರು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ಎಲ್ಲರಿಗೂ ಪ್ರವೇಶ ನಿಷೇಧಿಸುವುದು ತಪ್ಪು. ಇದರ ಬದಲಿಗೆ ದಂಡ ವಿಧಿಸುವ ಅಥವಾ ಇತರ ಶಿಸ್ತುಕ್ರಮ ಜರುಗಿಸುವ ಬಗ್ಗೆ ಚಿಂತಿಸಬೇಕಿತ್ತು’ ಎಂದು ನಾಯಿಗಳ ಮಾಲೀಕರು ಸಲಹೆ ಮಾಡಿದ್ದಾರೆ. ‘ಕಬ್ಬನ್​ ಪಾರ್ಕ್​ನಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ಮಾರ್ಗದರ್ಶಿ ಸೂತ್ರಗಳನ್ನೇ ಪ್ರಕಟಿಸಿ, ನಾಯಿಗಳ ಮಾಲೀಕರು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕಿತ್ತು’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ
ಕಬ್ಬನ್ ಪಾರ್ಕ್​ನ ಬಾಲಭವನ ಅಭಿವೃದ್ಧಿ ಕೆಲಸಕ್ಕೆ ಜನಾಕ್ರೋಶ; ಸ್ಮಾರ್ಟ್ ಸಿಟಿ ಹೆಸರಲ್ಲಿ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಎಂದು ಅಸಮಾಧಾನ
ಕಬ್ಬನ್​ಪಾರ್ಕ್​ನಲ್ಲಿ ನಾಯಿ ಕಾಟ ತಡೆಗೆ ಹೈಕೋರ್ಟ್​ ಆದೇಶ
Cubbon Park: ಇನ್ನಷ್ಟು ಸುಧಾರಣೆಯಾಗಲಿ ಕಬ್ಬನ್​ ಪಾರ್ಕ್​; ಸಾರ್ವಜನಿಕರೇ ನೀಡಿದ ಸಲಹೆಗಳು ಹೀಗಿವೆ..
ಕಬ್ಬನ್ ಪಾರ್ಕ್​ ವಾಯು ವಿಹಾರಕ್ಕೆ ನಾಯಿನ್ನ ಕರೆದೊಯ್ಯುವ ಮುನ್ನ ನಿಮ್ಮ ಬಳಿ ಇವೆಲ್ಲ ಇರಲೇಬೇಕು, ಎಚ್ಚರಾ!

ನಾಯಿಗಳೂ ಸಾಮಾಜಿಕ ಪ್ರಾಣಿಗಳು. ಇತರ ನಾಯಿಗಳೊಂದಿಗೆ ಬೆರೆಯಲು ಅವಕ್ಕೂ ಅವಕಾಶಬೇಕಿದೆ. ಡಾಗ್ ಪಾರ್ಕ್ ಮೂಲಕ ಇದು ಸಾಧ್ಯವಾಗಿತ್ತು. ಪ್ರತಿ ವಾರಾಂತ್ಯಕ್ಕೂ ನಾಯಿಗಳೂ ಕಾತರದಿಂದ ಕಾಯುತ್ತಿದ್ದವು. ವ್ಯಾಯಾಮ, ಓಟದಿಂದ ಅವು ಜಡತ್ವ ಕಳೆದುಕೊಳ್ಳುತ್ತಿದ್ದವು. ಕಳೆದ ಕೆಲ ವರ್ಷಗಳಿಂದ ಒಟ್ಟಿಗೆ ಬೆರೆಯುತ್ತಿದ್ದ ನಾಯಿಗಳು ಮತ್ತು ನಾಯಿಗಳ ಮಾಲೀಕರಿಂದಾಗಿ ಒಂದು ಸಮುದಾಯ ಬೆಳೆದಿತ್ತು. ಆದರೆ ಇದೀಗ ಏಕಾಏಕಿ ನಿರ್ಬಂಧ ಹೇರುವುದರಿಂದ ಈ ಸಮುದಾಯದ ಅಸ್ತಿತ್ವಕ್ಕೇ ಆತಂಕ ಒದಗಿದೆ ಎಂಬ ಡಾಗ್ ಪಾರ್ಕ್​ನಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವ ಶ್ರುತಿ ಬೋಪಯ್ಯ ಅವರ ಹೇಳಿಕೆಯನ್ನು ‘ದಿ ನ್ಯೂಸ್ ಮಿನಟ್’ ವರದಿ ಮಾಡಿದೆ.

ಕಬ್ಬನ್​ ಪಾರ್ಕ್​ನಲ್ಲಿ ಅಲ್ಲಲ್ಲಿ ಜುಲೈ 1ರಿಂದ ನಾಯಿಗಳಿಗೆ ಪ್ರವೇಶ ನಿಷೇಧದ ಬಗ್ಗೆ ಫಲಕಗಳು ಕಾಣಿಸಿಕೊಂಡಿವೆಯಾದರೂ ಈ ಬಗ್ಗೆ ಇಲಾಖೆಯು ಈವರೆಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Published On - 9:06 am, Mon, 27 June 22