Double Decker Flyover: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮಾರ್ಚ್ 2023ರ ವೇಳೆಗೆ ಸಿದ್ಧ: ಬಿ.ಎಲ್ ಯಶವಂತ್ ಚವಾಣ್
ಡಬಲ್ ಡೆಕ್ಕರ್ ಫ್ಲೈಓವರ್ ಮಾರ್ಚ್ 2023ರರೊಳಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್ ಯಶವಂತ್ ಚವಾಣ್ ತಿಳಿಸಿದ್ದಾರೆ.
ಬೆಂಗಳೂರು: ಉದ್ಯಾನ ನಗರಿಯ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ಮಾರ್ಚ್ 2023ರರೊಳಗೆ ಪೂರ್ಣಗೊಳ್ಳಲಿದೆ. ಮೂಲಗಳ ಪ್ರಕಾರ 2021ರ ಅಕ್ಟೋಬರ್ ವೇಳೆಗೆ ಡಬಲ್ ಡೆಕ್ಕರ್ ಫ್ಲೈಓವರ್ ಕಾಮಗಾರಿ ಪೂರ್ಣವಾಬೇಕಿತ್ತು. ಆದರೆ ನಿಗದಿತ ಡೆಡ್ಲೈನ್ ಮುಗಿದಿದ್ದು, ಮಾರ್ಚ್ ವೇಳೆಗೆ ಸಂಚಾರಕ್ಕೆ ಸಿದ್ಧಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಾರೇನಹಳ್ಳಿ ರಸ್ತೆಯ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) ನಡುವಿನ 3.3-ಕಿಮೀ ಉದ್ದದ ರಸ್ತೆ ಮತ್ತು ರೈಲು ಮೇಲ್ಸೇತುವೆಯ ಕಾಮಗಾರಿಯು ಪ್ರಗತಿಯಲ್ಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಡಬಲ್ ಡೆಕ್ಕರ್ ಫ್ಲೈಓವರ್ನ್ನು ಮಾರ್ಚ್ 2023ರಲ್ಲಿ ಸಂಪೂರ್ಣ ಮುಗಿಸುವ ಗುರಿ ಹೊಂದಿದ್ದಾರೆ.
ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೈನ್ ಹಾದು ಹೋಗುತ್ತಿದೆ. ಎಲಿವೇಟೆಡ್ ರಸ್ತೆಯನ್ನು ಈಗಿರುವ ರಸ್ತೆ ಮಟ್ಟಕ್ಕಿಂತ 8 ಮೀ ಎತ್ತರದಲ್ಲಿ ನಿರ್ಮಿಸಲಾಗುತ್ತಿದ್ದು, ಮೆಟ್ರೋ ಮಾರ್ಗವು ಮೇಲ್ಮೈಯಿಂದ 16 ಮೀಟರ್ ಆಗಿರುತ್ತದೆ. ಜೈಪುರ, ನಾಗ್ಪುರ ಮತ್ತು ಮುಂಬೈನಂತಹ ನಗರಗಳಲ್ಲಿ ಇದೇ ರೀತಿಯ ಡಬಲ್ ಡೆಕ್ಕರ್ ಫ್ಲೈಓವರ್ಗಳು ಈಗಾಗಲೇ ಬಳಕೆಯಲ್ಲಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಹೊಸ ರೂಲ್ಸ್; ಬೆಂಗಳೂರಿಗರ ರಿಯಾಕ್ಷನ್ ಏನು?
ಡಬಲ್ ಡೆಕ್ಕರ್ ಫ್ಲೈಓವರ್ ಮಾರ್ಚ್ 2023ರೊಳಗೆ ಪೂರ್ಣಗೊಳ್ಳಲಿದೆ: ಬಿ.ಎಲ್ ಯಶವಂತ ಚವಾಣ್
ಈ ಕುರಿತಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್ ಯಶವಂತ್ ಚವಾಣ್ ಮಾತನಾಡಿದ್ದು, ಮಾರ್ಚ್ 2023ರೊಳಗೆ ಪೂರ್ಣಗೊಳ್ಳಲಿದೆ. ಆದರೆ ಸಿಎಸ್‌ಬಿ ಜಂಕ್ಷನ್ ಬಳಿ ಲೂಪ್‌ಗಳು ಮತ್ತು ರ‍್ಯಾಂಪ್‌ಗಳ ಕೆಲಸ ಇನ್ನು ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ರಸ್ತೆ ಮೇಲ್ಸೇತುವೆಯನ್ನು ವಾಹನ ಸವಾರರು ಬಳಸಲು ಲೂಪ್‌ಗಳು ಮತ್ತು ರ‍್ಯಾಂಪ್‌ಗಳಿಗೆ ಸಂಪರ್ಕಿಸಬೇಕು. ಈ ಕೆಲಸ ಈಗಷ್ಟೇ ಆರಂಭವಾಗಿದೆ ಎಂದರು.
ರಾಗಿಗುಡ್ಡ ಮತ್ತು ಸಿಎಸ್‌ಬಿ ನಡುವಿನ ಮಾರ್ಗವು ಸಿಗ್ನಲ್-ಮುಕ್ತ ಕಾರಿಡಾರ್ ಆಗಿರುತ್ತದೆ. ಇದರಿಂದ ಪೀಕ್ ಅವರ್‌ಗಳಲ್ಲಿ ತೀವ್ರ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೇ ಮೆಟ್ರೋ ಆರಂಭವಾದ ನಂತರ ವಾಹನ ಸಂಚಾರ ಮತ್ತಷ್ಟು ತಗ್ಗಲಿದೆ. ಎಲಿವೇಟೆಡ್ ರಸ್ತೆಯಲ್ಲಿ ಚತುಷ್ಪಥ ರಸ್ತೆ ಮತ್ತು ಸಾಮಾನ್ಯ ರಸ್ತೆಯ ಚತುಷ್ಪಥ ರಸ್ತೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಯಶವಂತ ಚವಾಣ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Bengaluru-Tumkuru Highway: ಬೆಂಗಳೂರು-ತುಮಕೂರು ಚತುಷ್ಪಥ ರಸ್ತೆ 2025ಕ್ಕೆ ದಶಪಥ ಹೆದ್ದಾರಿ
ಎರಡು ಮೆಟ್ರೋ ನಿಲ್ದಾಣಗಳು
ಆರ್ವಿ ರಸ್ತೆ, ಬೊಮ್ಮಸಂದ್ರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆಆರ್ ಪುರಂ ಸಿಎಸ್‌ಬಿ ಜಂಕ್ಷನ್ ಮೂಲಕ ಹಾದು ಹೋಗುತ್ತದೆ. ಈ ದಟ್ಟಣೆಯ ಜಂಕ್ಷನ್ನಲ್ಲಿ ಎರಡೂ ನಿಲ್ದಾಣಗಳನ್ನು ನಿರ್ಮಿಸುವುದು ಹಿಂದಿನ ಯೋಜನೆಯಾಗಿತ್ತು. ಇವೆರಡರ ನಡುವಿನ ಅಂತರವು 355 ಮೀ ಆಗಿದ್ದು, ಟ್ರಾವೆಲೇಟರ್ ಮೂಲಕ ಅವುಗಳನ್ನು ಸಂಪರ್ಕಿಸುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಲೂ ಲೈನ್ನ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣವನ್ನು ಆರಂಭ ಮಾಡುವಾಗ ಎರಡು ನಿಲ್ದಾಣಗಳ ನಡುವಿನ ಟ್ರಾವೆಲೇಟರ್ ಸಂಪರ್ಕವು ಸಿದ್ದವಾಗಲಿದೆ ಎಂದು ಯಶವಂತ ಚವಾಣ್ ಅವರು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:34 pm, Mon, 26 December 22